ಜೇಟ್ಲಿ ಭೇಟಿ ಬಗ್ಗೆ ಮಲ್ಯ ಹೇಳಿಕೆ- ಕೇಂದ್ರದ ವಿರುದ್ಧ ಕಾಂಗ್ರೆಸ್ ಗೆ ಸಿಕ್ತು ಹೊಸ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್:

ರಾಫೆಲ್ ಯುದ್ಧ ವಿಮಾನ ಖರೀದಿ ಒಂದು ಹಗರಣ ಎಂದು ಕೇಂದ್ರದ ವಿರುದ್ಧ ಟೀಕಾಪ್ರಕಾರ ನಡೆಸಿ ಸುಸ್ತಾಗಿದ್ದ ಕಾಂಗ್ರೆಸ್ ಗೆ ಈಗ ಹೊಸ ಅಸ್ತ್ರ ಸಿಕ್ಕಿದೆ ಅದುವೇ ಜೇಟ್ಲಿ ಭೇಟಿ ವಿಚಾರವಾಗಿ ಉದ್ದೇಶಿತ ಸುಸ್ಥಿದಾರ ವಿಜಯ್ ಮಲ್ಯ ನೀಡಿರುವ ಹೇಳಿಕೆ.

ಭಾರತಕ್ಕೆ ಹಸ್ತಾಂತರ ಮಾಡುವ ವಿಚಾರವಾಗಿ ಲಂಡನ್ ಕೋರ್ಟ್ ನಲ್ಲಿ ಬುಧವಾರ ವಿಚಾರಣೆಗೆ ಹಾಜರಾದ ಮಲ್ಯ, ತಾವು ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ಬ್ಯಾಂಕ್ ಸಾಲ ತೀರಿಸುವ ಪ್ರಸ್ತಾಪ ಮುಂದಿಟ್ಟು, ಲಂಡನ್ ಗೆ ತೆರಳುವ ವಿಚಾರವನ್ನು ತಿಳಿಸಿದ್ದೆ ಎಂದು ಹೇಳಿಕೆ ನೀಡಿದರು. ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಮಲ್ಯ ದೇಶ ಬಿಡುವ ವಿಚಾರವಾಗಿ ಅರುಣ್ ಜೇಟ್ಲಿ ಜತೆ ಮಾತನಾಡಿದ್ದರೂ ಅವರು ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಿಲ್ಲ ಏಕೆ? 2015ರಲ್ಲಿ ನೀಡಲಾಗಿದ್ದ ಲುಕ್ ಔಟ್ ನೋಟೀಸ್ ಅನ್ನು ಕೇಂದ್ರ ಬದಲಾಯಿಸಿದ್ದು ಯಾಕೆ? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಯ ಅವರು ದೇಶವನ್ನು ಬಿಡಲು ಕೇಂದ್ರ ಸರ್ಕಾರವೇ ಸಹಕರಿಸಿದೆ. ಮೋದಿ ಅವರ ಅನುಮತಿ ಇಲ್ಲದೇ ಅರುಣ್ ಜೇಟ್ಲಿ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳವುದಿಲ್ಲ. ಹೀಗಾಗಿ ಮಲ್ಯ ಅವರನ್ನು ಪರಾರಿ ಮಾಡಲು ಮೋದಿ ಸರ್ಕಾರ ಪ್ರಯತ್ನಿಸಿದೆ. ಇವರಿಬ್ಬರ ಮಧ್ಯೆ ದೊಡ್ಡ ಡೀಲ್ ನಡೆದಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನ ಈ ಟೀಕೆಗೆ ಬಿಜೆಪಿ ಪ್ರತಿಯಾಗಿ ಟೀಕೆ ಮಾಡಿದೆ. ಮಲ್ಯ ಅವರಿಗೆ ಸಾಲ ನೀಡಿದ್ದು, ಯುಪಿಎ ಸರ್ಕಾರ ಎಂದಿರುವ ಬಿಜೆಪಿ, ಮಲ್ಯ ಅವರು ಮನಮೋಹನ್ ಸಿಂಗ್ ಜತೆಗೂ ಮಾತನಾಡುತ್ತಿರುವ ವಿಡಿಯೋ ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ ಮಲ್ಯ ಅವರಿಗೆ ಸಾಲ ನೀಡುವ ವಾರವಾಗಿ ಯುಪಿಎ ಸರ್ಕಾರ ಕಾನೂನು ತಿದ್ದುಪಡಿ ಮಾಡಿದೆ ಎಂದು ಆರೋಪಿಸಿದೆ.

ಇನ್ನು ಮಲ್ಯ ಹೇಳಿಕೆಗೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ್ದು, ‘ನಾನು ವಿಜಯ್ ಮಲ್ಯ ಅವರೊಂದಿಗೆ ಅಧಿಕೃತವಾಗಿ ನನ್ನ ಕಚೇರಿಯಲ್ಲಾಗಲಿ ಅಥವಾ ನಿವಾಸದಲ್ಲಾಗಲಿ ಭೇಟಿ ಮಾಡಿಲ್ಲ. ಭೇಟಿಗೆ ಅವಕಾಶವನ್ನು ನೀಡಿಲ್ಲ. ಆದರೆ ಒಮ್ಮೆ ಮಲ್ಯ ತಮ್ಮ ರಾಜ್ಯಸಭಾ ಸದಸ್ಯತ್ವದ ಲಾಭವನ್ನು ದುರುಪಯೋಗ ಮಾಡಿಕೊಂಡು ಸಂಸತ್ತಿನ ಸೆಂಟ್ರಲ್ ಹಾಲ್ ಬಳಿ ನನಗೆ ಎದುರಾಗಿ ಬ್ಯಾಂಕ್ ಸಾಲ ತೀರಿಸುವ ಬಗ್ಗೆ ಒಂದು ಒಪ್ಪಂದದ ವಿಚಾರವಾಗಿ ಮಾತನಾಡಲು ಮುಂದಾದರು. ಆದರೆ ನಾನು ಅದನ್ನು ಬ್ಯಾಂಕ್ ಅಧಿಕಾರಿಗಳ ಜತೆ ಮಾತನಾಡುವಂತೆ ಸೂಚಿಸಿದೆ. ಅವರ ಒಪ್ಪಂದದ ಬಗ್ಗೆ ನಾನು ಹೆಚ್ಚಿನ ಮಾಹಿತಿ ಪಡೆಯಲಿಲ್ಲ’ ಎಂದಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ಕೇಂದ್ರ ಸರಕಾರಕ್ಕೆ ಇರಿಸುಮುರಿಸು ತರುವಂತಾಗಿದ್ದು, ಕಾಂಗ್ರೆಸ್ ಗೆ ಟೀಕೆ ಮಾಡಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಈ ಪ್ರಕರಣ ಕೇಂದ್ರಕ್ಕೆ ತಲೆ ನೋವಾಗಿ ಪರಿಣಮಿಸುತ್ತಿದ್ದು, ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತಂದು ಸಾಲ ಮರು ಪಾವತಿ ಮಾಡಿಸಿ ತನಗೂ ಮಲ್ಯನಿಗೂ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

Leave a Reply