ದಾವುದಿ ಬೊಹ್ರಾ ಮುಸ್ಲಿಂ ಸಮುದಾಯದ ಕೊಡುಗೆ ಹೊಗಳುತ್ತಾ ವಸುದೈವ ಕುಟುಂಬಕಂ ತತ್ವ ಜಪಿಸಿದ ಮೋದಿ!

ಡಿಜಿಟಲ್ ಕನ್ನಡ ಟೀಮ್:

‘ದೇಶದ ಇತಿಹಾಸದಲ್ಲಿ ದಾವುದಿ ಬೊಹ್ರಾ ಮುಸ್ಲಿಂ ಸಮುದಾಯದ ಕೊಡುಗೆ ಮಹತ್ವದ್ದಾಗಿದ್ದು, ಈ ಸಮುದಾಯ ಭಾರತದ ವಸುದೈವ ಕುಟುಂಬಕಂ ತತ್ವಕ್ಕೆ ಮಾದರಿಯಾಗಿ ನಿಂತಿದೆ…’ ಇದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಂಧೋರಿನ ಸೈಫಿ ಮಸೀದಿಯಲ್ಲಿ ದಾವುದಿ ಬೊಹ್ರಾ ಮುಸಲ್ಮಾನ ಸಮುದಾಯದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಸಮುದಾಯದ ಕೊಡುಗೆಯನ್ನು ಶ್ಲಾಘಿಸಿದ ಪರಿ.

ಶಿಯಾ ಮುಸಲ್ಮಾನರ ಭಾಗವಾಗಿರುವ ದಾವುದಿ ಬೊಹ್ರಾ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇಶದ ಮೊದಲ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾದರು. ಪ್ರವಾದಿ ಮೊಹಮದರು ಹಾಗೂ ಅವರ ಮೊಮ್ಮಗ ಹುತಾತ್ಮ ಇಮಾಮ್ ಹುಸೈನ್ ಅವರಿಗೆ ಗೌರವ ಸೂಚಿಸುವ ಅಶರಾ ಮುಬಾರಕ್ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಮೋದಿ ಹೇಳಿದಿಷ್ಟು…

‘ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯೇ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಒಂದು ವಿಶೇಷ ಸ್ಥಾನ ಕಲ್ಪಿಸಿಕೊಟ್ಟಿದೆ. ಬೊಹ್ರಾ ಸಮುದಾಯ ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಈ ಪರಿಕಲ್ಪನೆಗೆ ಮಾದರಿಯಾಗಿ ನಿಂತಿದೆ. ನನ್ನ ಹಾಗೂ ಬೊಹ್ರಾ ಸಮುದಾಯದವರ ಸಂಬಂಧ ತೀರಾ ಹಳೆಯದು. ಅವರೊಂದಿಗೆ ಇದ್ದ ಕ್ಷಣವೆಲ್ಲ ನಾನು ಕುಟುಂಬಸ್ಥರ ಜತೆಗಿನ ಅನುಭವ ಹೊಂದಿದ್ದೇನೆ. ಇಂದು ಕೂಡ ಅವರಿಗಾಗಿ ನಾನು ಸದಾ ಬಾಗಿಲು ತೆರೆದಿದ್ದೇನೆ.

ನಿಮ್ಮ ಅತ್ಯಮೂಲ್ಯ ಪರಿಶ್ರಮ ಹಾಗೂ ಕಾಣಿಕೆಯ ಫಲವಾಗಿ ಇಂದು ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ಲಭ್ಯವಾಗುತ್ತಿದೆ. ಗುಜರಾತಿನ ಅಭಿದ್ಧಿಯಲ್ಲಿ ಈ ಸಮುದಾಯದ ಕೊಡುಗೆ ಅಸಮಾನ್ಯವಾದುದು. ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಅವರು ತೋರುವ ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿದೆ.’

Leave a Reply