ಭಿನ್ನಮತ  ಶಮನಕ್ಕೆ ಬಳಕೆ ಆಗಲಿದೆ ಸಿಎಂ ಬೆಳಗಾವಿ ಪ್ರವಾಸ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕಂಟಕವಗಿದ್ದ ಬೆಳಗಾವಿ ಕಾಂಗ್ರೆಸ್ ನಾಯಕರ ಬಿನ್ನಮತ ಈಗ ಸ್ವಲ್ಪ ಮಟ್ಟಿಗೆ ತಣ್ಣಗಾಗಿರುವಂತೆ ಕಂಡರೂ ಎಲ್ಲವೂ ಸರಿಹೋಗಿದೆ ಎಂದು ಯಾರಿದಲೂ ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗಾವಿ ಪ್ರವಾಸ ಮಾಡುವ ಹಿಂದೆ ಈ ಭಿನ್ನಮತ ಶಮನಗೊಳಿಸುವ ಉದ್ದೇಶವಿದೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.

ಕುಂದನಗರಿ ಬೆಳಗಾವಿಯಲ್ಲಿ ಕರ್ನಾಟಕ ಲಾ ಸೊಸೈಟಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಸೇರಿದಂತೆ ಹಲವು ಗಣ್ಯಾತಿಗಣ್ಯರು ಭಾಗಿಯಾಗಲಿದ್ದು, ಕುಮಾರಸ್ವಾಮಿ ಅವರು ಕೂಡ ಭಾಗವಹಿಸುತ್ತಿದ್ದಾರೆ. ಶಿಷ್ಟಾಚಾರದ ಪ್ರಕಾರ ಕುಮಾರಸ್ವಾಮಿ ಅವರು ರಾಷ್ಟ್ರಪತಿ ಅವರನ್ನು ಸ್ವಾಗತಿಸಿದ್ದಾರೆ. ಇದಕ್ಕೂ ಮುನ್ನ ಬೆಳಗಾವಿಗೆ ಬಂದಿಳಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸ್ವಾಗತಿಸಿದರು. ಈ ವೇಳೆ ಚಿಕ್ಕೋಡಿ ಲೋಕಸಭಾ ಸದಸ್ಯ ಪ್ರಕಾಶ್ ಹುಕ್ಕೇರಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತಿತರರು ಹಾಜರಿದ್ದರು.

ಕೆನ್ನೆ ಸವರಿ ಪ್ರೀತಿ ತೋರಿದ ಸಿಎಂ..!

ಬೆಳಗಾವಿಯಲ್ಲಿ‌ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವೈಮನಸ್ಸು ಸರ್ಕಾರದ ವಿರುದ್ಧ ಬಂಡಾಯ ಅಥವಾ ಬಿಜೆಪಿಯ ಆಪರೇಷನ್ ಕಮಲ ತನಕ ಬಂದು ನಿಂತಿದೆ. ಇಷ್ಟೆಲ್ಲಾ ರಾಜ್ಯ ರಾಜಕಾರಣಕ್ಕೆ ಪ್ರಮುಖ ಕಾರಣ ಎಂದರೆ ಅದು ಸಚಿವ ರಮೇಶ್ ಜಾರಕಿಹೋಳಿ. ಇಂದು ತಮ್ಮನ್ನು ಸ್ವಾಗತಿಸಲು ಬಂದಿದ್ದ ಸ್ವಾಗತಕ್ಕೆ ಸಚಿವ ರಮೇಶ್ ಜಾರಕಿಹೊಳಿ ಅವರ ಕೆನ್ನೆ ಸವರಿ ಪ್ರೀತಿ ಕುಮಾರಸ್ವಾಮಿ ಆತ್ಮೀಯತೆ ತೋರಿದರು. ಇದರೊಂದಿಗೆ ಬೆಳಗಾವಿ ಬಂಡಾಯ ಶಮನಕ್ಕೆ ಸಿಎಂ ಮೊದಲ ಅಡಿಪಾಯ ಹಾಕಿದ್ದಾರೆ.

ಇಷ್ಟು ದಿನ ಸಿಎಂ ಉತ್ತರ ಕರ್ನಾಟಕಕ್ಕೆ ಬರುತ್ತಿಲ್ಲ ಅನ್ನೋ ಆರೋಪ ಮಾಡಲಾಗ್ತಿತ್ತು. ಆದ್ರೆ ಇವತ್ತು ಸಿಎಂ ಕುಮಾರಸ್ವಾಮಿ ಬೆಳಗಾವಿಯ ಸುವರ್ಣಸೌಧದಲ್ಲಿಯೇ ಜನತಾ ದರ್ಶನ ನಡೆಸುವ ಮೂಲಕ ಕುಂದಾನಗರಿ ಜನರ ಮನ ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅದೇ ರೀತಿ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಚರ್ಚಿಸುವ ಮೂಲಕ ಬಿಎಸ್ ಯಡಿಯೂರಪ್ಪ ಅವರ ಆಪರೇಷನ್ ಕಮಲ ಯಶಸ್ವಿಯಾಗದಂತೆ ನೋಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಬೇಕು‌ ಎನ್ನುತ್ತಿರುವ ಜಾರಕಿಹೊಳಿ ಬ್ರದರ್ಸ್ ಮಾತಿಗೆ ಸಿಎಂ ಮನ್ನಣೆ ನೀಡಲಿದ್ದು, ಇವತ್ತು ಬೆಳಗಾವಿ ವಿಭಜನೆ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಜಾರಕಿಹೊಳಿ ಬ್ರದರ್ಸ್ ಅವರ ಮನವೊಲಿಸಿದರೆ ಉಳಿದ ನಾಯಕರುಗಳು ತಣ್ಣಗಾಗಲಿದ್ದಾರೆ ಎಂಬುದನ್ನು ಅರಿತಿರುವ ಮುಖ್ಯಮಂತ್ರಿ, ಜಾರಕಿಹೊಳಿ ಬ್ರದರ್ಸ್ ಅವರನ್ನು ಸಮಾಧಾನ ಪಡಿಸಲು ಮುಂದಾಗಲಿದ್ದಾರೆ.

Leave a Reply