ಭೂತಾನ್ ಚುನಾವಣೆ ಮೇಲೆ ಭಾರತ ಹಾಗೂ ಚೀನಾ ಕಣ್ಣಿಟ್ಟಿರುವುದೇಕೆ?

ಡಿಜಿಟಲ್ ಕನ್ನಡ ಟೀಮ್:

ಭಾರತದ ಆತ್ಮೀಯ ನೆರೆ ರಾಷ್ಟ್ರ ಎಂ ಬಿಂಬಿತವಾಗಿರುವ ಭೂತಾನ್ ನಲ್ಲಿ ಈಗ ಚುನಾವಣೆ ಪರೀಕ್ಷೆ ಎದುರಾಗಿದೆ. ಭೂತಾನ್ ಪ್ರಜಾಪ್ರಭುತ್ವ ರಾಷ್ಟ್ರವಾದ ಬಳಿಕ ನಡೆಯುತ್ತಿರುವ ಮೂರನೇ ಸಾರ್ವತ್ರಿಕ ಚುನಾವಣೆ ಇದಾಗಿದ್ದು, ಈ ಚುನಾವಣೆ ಭಾರತ ಹಾಗೂ ಚೀನಾ ರಾಷ್ಟ್ರಗಳ ಗಮನವನ್ನು ಸೆಳೆದಿದೆ.

ಇಂದು ಸಾರ್ವತ್ರಿಕ ಚುನಾವಣೆಯ ಪ್ರಾಥಮಿಕ ಹಂತದ ಮತದಾನ ನಡೆಯಲಿದ್ದು, ಒಟ್ಟು ನಾಲ್ಕು ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇಂದು ನಡೆಯಲಿರುವ ಮತದಾನದ ಆಧಾರದಮೇಲೆ ಎರಡು ಪ್ರಮುಖ ಪ್ರಕ್ಷಗಳು ಅಕ್ಟೋಬರ್ 18ರಂದು ನಡೆಯಲಿರುವ ಮುಖ್ಯ ಚುನಾವಣೆಯಲ್ಲಿ ಪೈಪೋಟಿ ನಡೆಸಲಿವೆ. ಪುಟ್ಟ ರಾಷ್ಟ್ರಭೂತಾನ್ ನಲ್ಲಿ ಚುನಾವಣೆಯಾದರೆ ಭಾರತ ಹಾಗೂ ಚೀನಾದಂತಹ ದೊಡ್ಡ ರಾಷ್ಟ್ರಗಳು ಅದರ ಬಗ್ಗೆ ಇಷ್ಟು ಕಾತುರತೆ ಹೊಂದಿರುವುದೇಕೆ ಎಂಬ ಪ್ರಶ್ನೆ ಹುಟ್ಟುಕ್ಕೊಳ್ಳುವುದು ಸಹಜ. ಆದರೆ ಅದಕ್ಕೆ ಕಾರಣ ದೋಕಲಂ!

ಹೌದು, ದೋಕಲಂ ಗಡಿ ವಿಚಾರವಾಗಿ ಕಳೆದ ವರ್ಷ ಭಾರತ ಹಾಗೂ ಚೀನಾ ಪರಸ್ಪರ ಕುತ್ತಿಗೆ ಪಟ್ಟಿ ಹಿಡಿದು ನಿಂತಿದ್ದವು. ನಂತರ ರಾಜತಾಂತ್ರಿಕ ಪರಿಶ್ರಮ ಹಾಗೂ ಭಾರತದ ದಿಟ್ಟ ನಿರ್ಧಾರ ಚೀನಾ ಈ ವಾರದಲ್ಲಿ ಹಿಂದೆ ಸರಿಯುವಂತಾಗಿತ್ತು. ದೋಕಲಂ ಭಾರತ, ಚೀನಾ ಹಾಗೂ ಭೂತಾನ್ ರಾಷ್ಟ್ರಗಳ ಗಡಿ ಕೂಡುವ ಪ್ರದೇಶವಾಗಿದ್ದು, ಇದರ ಮೇಲೆ ಪ್ರಭುತ್ವ ಸಾಧಿಸಲು ಚೀನಾ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದಕ್ಕೆ ಭಾರತ ಅವಕಾಶ ನೀಡದೇ ಸಡ್ಡು ಹೊಡೆದು ನಿಂತಿರುವುದು ಎಲ್ಲರಿಗೂ ತಿಳಇದಿರೋ ವಿಚಾರ. ಈಗ ಈ ವಿವಾದಕ್ಕೂ ಹಾಗೂ ಭೂತಾನ್ ಚುನಾವಣೆಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ…

ಸದ್ಯ ಭೂತಾನ್ ಪ್ರಧಾನಿ ಸ್ಥಾನ ಅಲಂಕರಿಸಿದ್ದ ಪಿಡಿಪಿಯ ತಶೇರಿಂಗ್ ತೊಬ್ಗಯ್ ಅವರು ಭಾರತದಜತೆ ಉತ್ತಮ ಸಂಬಂಧ ಹೊಂದಿದ್ದರು. ಹೀಗಾಗಿ ಭಾರತದ ಪರವಾಗಿ ಭೂತಾನ್ ನಿಂತು ಚೀನಾವನ್ನು ಎದುರು ಹಾಕಿಕೊಂಡಿತ್ತು. ಆದರೆ ಸದ್ಯದ ವರದಿಗಳ ಪ್ರಕಾರ ಭೂತಾನ್ ನಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಮತ್ತೊಂದೆಡೆ ಮಾಜಿ ಪ್ರಧಾನಿಯಾಗಿದ್ದ ಜಿಗ್ಮೆ ವೈ ಟಿಂಗ್ಲೆ ಅವರು ಚೀನಾ ಪರ ಒಲವು ಹೊಂದಿದ್ದರು. ಹೀಗಾಗಿ ಕಳೆದ ಚುನಾವಣೆಯಲ್ಲಿ ತೊಬ್ಗಯ್ ಅವರ ಆಯ್ಕೆ ಭಾರತಕ್ಕೆ ಕೊಂಚನೆಮ್ಮದಿ ತಂದಿತ್ತು.

ಭೂತಾನ್ ಜತೆಗೆ ಚೀನಾ ಹೇಳಿಕೊಳ್ಳುವಂತಹ ರಾಜತಾಂತ್ರಿಕ ಸಂಬಂಧ ಹಾಗೂ ಒಪ್ಪಂದ ಹೊಂದಿಲ್ಲವಾದರೂ ಈಗ ವಿವಿಧ ವಿಚಾರಗಳ ಕುರಿತಾಗಿ ಭೂತಾನ್ ವಿಶ್ವಾಸ ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಚೀನಾ ಈ ಚುನಾವಣೆಯನ್ನು ಒರೆಗಣ್ಣಿಂದ ನೋಡುತ್ತಿದ್ದು, ಇನ್ನು ಭಾರತಕ್ಕೆ ಮತ್ತೊಂದು ತಲೆ ನೋವಿನ ವಿಚಾರ ಎಂದರೆ, ಭೂತಾನ್ ಮೇಲೆ ಚೀನಾ ಭೂ ವಿನಿಮಯ ಒಪ್ಪಂದಕ್ಕೆ ಒತ್ತಡ ಹಾಕುತ್ತಿದೆ. ಇದರ ಮೂಲಕ ಭೂತಾನ್ ತನ್ನ ಗಡಿ ಪ್ರದೇಶವನ್ನು ಬಿಟ್ಟುಕೊಟ್ಟು ಚೀನಾದ ಇತರೆ ಗಡಿ ಪ್ರದೇಶವನ್ನು ಪಡೆಯುವುದಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ ದೋಕಲಂ ಮೇಲೆ ಚೀನಾ ಮತ್ತಷ್ಟು ಪ್ರಭುತ್ವ ಸಾಧಿಸಿಕೊಳ್ಳಲಿದೆ.

ಈ ಎಲ್ಲ ಅಂಶಗಳಿಂದಾಗಿ ಭೂತಾನಿನ ಚುನಾವಣೆಯಲ್ಲಿ ಚೀನಿ ಸ್ನೇಹಿ ನಾಯಕ ಆಯ್ಕೆಯಾಗುತ್ತಾನೋ ಅಥವಾ ಭಾರತ ಸ್ನೇಹಿ ನಾಯಕ ಪ್ರಧಾನಿ ಹುದ್ದೆ ಅಲಂಕರಿಸುತ್ತಾನೋ ಎಂಬುದು ಎರಡೂ ರಾಷ್ಟ್ರಗಳ ಗಮನವನ್ನು ಸೆಳೆದಿಟ್ಟುಕೊಂಡಿದೆ.

Leave a Reply