ಆದಾಯ ತೆರಿಗೆ ದಾಳಿ ಪ್ರಕರಣ: ಡಿಕೆಶಿಗೆ ಸಿಕ್ತು ಜಾಮೀನು!

ಡಿಜಿಟಲ್ ಕನ್ನಡ ಟೀಮ್:

ಆದಾಯ ತೆರಿಗೆ ಇಲಾಖೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆರ್ಥಿಕ ಅಪರಾಧಗಳ ನ್ಯಾಯಾಲಯ ಶಿವಕುಮಾರ್ ಅವರಿಗೆ ಜಾಮೀನು ನೀಡಿದ್ದು, ಹೀಗಾಗಿ ಡಿಕೆಶಿ ಅವರಿಗೆ ಎದುರಾಗಿದ್ದ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಂತ್ತಾಗಿದೆ.

ಡಿ.ಕೆ.ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಆರ್ಥಿಕ ಅಪರಾಧ ನ್ಯಾಯಾಲಯ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಒಂದು ಲಕ್ಷ ರುಪಾಯಿ ಬಾಂಡ್ ಹಾಗೂ 25 ಸಾವಿರ ರುಪಾಯಿ ನಗದು ಶೂರಿಟಿಯ ಜಾಮೀನು ನೀಡಿದರೆ, ಉಳಿದ ಮೂವರಿಗೆ (ಸುನಿಲ್ ಶರ್ಮಾ, ಆಂಜನೇಯ, ರಾಜೇಂದ್ರ) ತಲಾ 25 ಸಾವಿರ ನಗದು ಶೂರಿಟಿ ಪಡೆದು ಜಾಮೀನು ನೀಡಿದೆ.

ವಿಶೇಷ ನ್ಯಾಯಧೀಶರಾದ ಎಂ.ಎಸ್. ಆಳ್ವಾ ಅವರು ಪ್ರಕರಣದ ವಾದ-ವಿವಾದ ಆಲಿಸಿ ಜಾಮೀನು ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಇಂದು ನಡೆದ ವಿಚಾರಣೆಗೆ ಡಿ.ಕೆ.ಶಿವಕುಮಾರ್ ಅವರು ಹಾಜರಾಗಿದ್ದು, ಜಾಮೀನು ಷರತ್ತುಗಳನ್ನು ಪೂರೈಸಿದರು.

ಕೋಟ್ಯಂತರ ರುಪಾಯಿ ಹಣದ ವಹಿವಾಟು ನಡೆದಿದ್ದು, ಆರೋಪಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರಿಗೆ ಜಾಮೀನು ನೀಡಬಾರದು ಎಂದು ಆದಾಯ ತೆರಿಗೆ ಇಲಾಖೆ ಪರ ವಕೀಲರು ವಾದ ಮಂಡಿಸಿದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Leave a Reply