ದೇವರ ಆಶಿರ್ವಾದ ಇದ್ರೆ ಮುಂದೊಂದು ದಿನ ಸಿಎಂ ಆಗ್ತೇನೆ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ದೇವರ ಆಶಿರ್ವಾದ ಹಾಗೂ ಜನರ ಆಶಿರ್ವಾದ ಇದ್ದರೆ ಮುಂದೆ ಒಂದು ದಿನ ನಾನು ಮುಖ್ಯಮಂತ್ರಿಯಾಗುತ್ತೇನೆ…’ ಇದು ಭಾನುವಾರ ಕಲಬುರಗಿಯ ದತ್ತಾತ್ರೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ವ್ಯಕ್ತಪಡಿಸಿದ ವಿಶ್ವಾಸ.

ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಡಿ.ಕೆ ಶಿವಕುಮಾರ್, ಸದ್ಯ ಐಟಿ ದಾಳಿ ಪ್ರಕರಣದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ನಿನ್ನೆಯಷ್ಟೇ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದು ಕೊಂಚ ನಿರಾಳರಾಗಿದ್ದಾರೆ. ಇದರ ಬೆನ್ನಲ್ಲೇ ಗಾಣಗಾಪುರದಲ್ಲಿ ದತ್ತಾತ್ರೇಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿರುವ ಡಿ.ಕೆ ಶಿವಕುಮಾರ್, ತಮ್ಮ ವಿರುದ್ಧ ಸಂಚು ರೂಪಿಸುತ್ತಿರುವವರಿಗೆ ಪರೋಕ್ಷ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಈ ಸಂದರ್ಭದಲ್ಲಿ ಡಿಕೆಶಿ ಅವರು ಹೇಳಿದಿಷ್ಟು…

‘ಮೈತ್ರಿ ಸರಕಾರ ಕೆಡವಲು ಬಿಜೆಪಿ ಷಡ್ಯಂತ್ರ್ಯ ನಡೆಸುತ್ತಿದೆ. ಮೈತ್ರಿ ಸರಕಾರದ 15 ರಿಂದ 20 ಶಾಸಕರನ್ನು ಸೆಳೆಯಲು ಆ ಪಕ್ಷದ ನಾಯಕರು ಯತ್ನ ನಡೆಸಿದ್ದಾರೆ. ಸಿ.ಪಿ. ಯೋಗೇಶ್ವರ ಮಾತ್ರವಲ್ಲ. ಅವರಂತಹ ಹಲವು ಜನರು ಆಪರೇಷನ್ ಕಮಲದಲ್ಲಿ  ಸಕ್ರೀಯರಾಗಿದ್ದಾರೆ. ಬಿ.ಸಿ. ಪಾಟೀಲ್,  ರಹಿಂಮ್ ಸೇರಿದಂತೆ ಅನೇಕ ಜನರನ್ನು ಸಂಪರ್ಕ ಮಾಡ್ತಿದ್ದಾರೆ. ಅವರು ಏನು ಮಾಡುತ್ತಾರೋ ಮಾಡಲಿ, ದೇವರಿದ್ದಾನೆ.

ನಮ್ಮ ಪಕ್ಷದಲ್ಲಾಗಲಿ, ಸರ್ಕಾರದಲ್ಲಾಗಲಿ ಯಾವುದೇ ಗೊಂದಲವಿಲ್ಲ. ಮೈತ್ರಿ ಸರ್ಕಾರ ರಚನೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ತೀರ್ಮಾನ. ಆ ತೀರ್ಮಾನಕ್ಕೆ ಸಿದ್ದರಾಮಯ್ಯ ಸೇರಿ ಎಲ್ಲರೂ ಬದ್ಧರಾಗಿದ್ದೇವೆ. ಈ ಬಗ್ಗೆ ಯಾವುದೇ ಸಂಶಯ ಬೇಡ.

ದೇವರ ಸನ್ನಿಧಾನದಲ್ಲಿ ನಿಂತು ಮಾತಾಡ್ತಾ ಇದ್ದೀನಿ. ಕಳೆದ ವರ್ಷ ಆಗಸ್ಟ್ ನಿಂದ ಈಚೆಗೆ ಏನೇನಾಗಿದೆ ಅಂತಾ ನೀವೇ ನೋಡುತ್ತಿದ್ದೀರಿ. ಯಾರ್ಯಾರು ಏನೆಲ್ಲ ನೋವು ಕೊಟ್ಟರು, ಕೊಡುತ್ತಿದ್ದಾರೆ ಎಂಬುದಕ್ಕೂ ನೀವೇ ಸಾಕ್ಷಿಯಾಗಿದ್ದೀರಿ. ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ನೋವು ಕೊಡುತ್ತಿರುವವರು ಸಂತೋಷವಾಗಿರಲಿ. ಆ ನೋವು ಭರಿಸುವ ಶಕ್ತಿಯನ್ನು ಭಗವಂತ ನನಗೆ ನೀಡಲಿ.

ನಮ್ಮ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬಹಳ ವೇಗವಾಗಿ ಹೋದರೆ ಅಪಘಾತವಾಗುತ್ತದೆ. ಹಾಗೆಂದೇ ನಿಧಾನವಾಗಿ ಹೋಗುತ್ತಿದ್ದೇವೆ. ನಿಧಾನವೇ ಪ್ರಧಾನ ಹಾಗೂ ಸ್ಥಿರ. ಭಗವಂತನ ಕೃಪೆ ಇದ್ದರೆ ಮುಂದೆ ನಾನೂ ಮುಖ್ಯಮಂತ್ರಿ ಆಗಬಹುದು. ಅದಕ್ಕೆ ಅವಸರವೇನೂ ಇಲ್ಲ. ಯಾವಾಗ ಏನೇನಾಗಬೇಕೋ ಅದಾಗುತ್ತದೆ. ಇಲ್ಲಿನ ಪವಿತ್ರ ದತ್ತಾತ್ರೆಯ ಪೀಠದ ಬಗ್ಗೆ ಬಹಳ ಕೇಳಿದ್ದೆ. ದತ್ತಾತ್ರೇಯ ದರ್ಶನಕ್ಕೆ ಬಹಳ ದಿನದಿಂದ ಬಯಸಿದ್ದೆ. ಇಂದು ದರ್ಶನ ಭಾಗ್ಯದಿಂದ ಅದು  ಈಡೇರಿದೆ. ದತ್ತಾತ್ರೇಯ ದರ್ಶನ ಮನಸ್ಸಿಗೆ ನೆಮ್ಮದಿ ನೀಡಿದೆ. ನಾನು ದೇವರ ಮೇಲೆ ನಂಬಿಕೆ ಇಟ್ಟಿರುವ ಮನುಷ್ಯ. ದೇವರೆ ನ್ಯಾಯ ಕೊಡುತ್ತಾನೆ ಎನ್ನುವ ವಿಶ್ವಾಸವಿದೆ. ದತ್ತಪೀಠಕ್ಕೆ ಬರಲು ಎರಡು-ಮೂರು ಬಾರಿ ಅಂದುಕೊಂಡಿದ್ದರೂ ಸಾಧ್ಯವಾಗಿರಲಿಲ್ಲ. ಇಲ್ಲಿಗೆ ಬರಲು ನನ್ನ ಮನಸ್ಸು ಸೇಳೆಯುತ್ತಿತ್ತು. ಇವತ್ತು ದರುಶನ ಭಾಗ್ಯ ಲಭಿಸಿತು. ನಮ್ಮ‌ ಆಚಾರ, ವಿಚಾರವನ್ನು ಈ ಪೀಠದಲ್ಲಿ ಪರಿಪಾಲನೆ ಮಾಡ್ತಿರೋದು ತಿಳಿದು ಬಹಳ ಸಂತೋಷವಾಯಿತು.

ಈ ದೇವರ ಮಹಿಮೆಗೆ ಬಗ್ಗೆ ನಾನೇ ಜ್ವಲಂತ ಸಾಕ್ಷಿ. ನಾನು ಏನು ಪ್ರಾರ್ಥನೆ ಮಾಡಿದೆ ಎನ್ನುವುದು ಭಕ್ತ ಮತ್ತು ಭಗವಂತನ ಮಧ್ಯೆ ನಡೆದದ್ದು. ಭಕ್ತ ಮತ್ತು ದೇವರ ನಡುವಣ ವ್ಯವಹಾರ ಅದು. ಅರ್ಚಕರ ಪ್ರಭಾವದಿಂದ ಶಿಲೆಯಲ್ಲೂ ಶಂಕರನ ಕಾಣಬಹದಂತೆ. ಮಳೆ ಸಲುವಾಗಿ ಹಿಂದೆ ಶೃಂಗೆರಿಗೆ ಹೋಗಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದೆ. ಆಗ ಸುಮಾರು ಜನ ನನಗೆ ಟೀಕೆ ಮಾಡಿದ್ದರು. ಹಾಗೇ ಟೀಕೆ ಮಾಡಿದವರು ದೇವರ ಹೆಸರನ್ನೇ ಇಟ್ಟು ಕೊಂಡಿದ್ದಾರೆ.’

Leave a Reply