ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಟೀಕಾಕಾರರ ಬಾಯಿಗೆ ಬೀಗ ಹಾಕಿದ ಸಿಎಂ ಕುಮಾರಸ್ವಾಮಿ!

ಡಿಜಿಟಲ್ ಕನ್ನಡ ಟೀಮ್:

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ದೇಶವ್ಯಾಪಿ ಬಂದ್ ಗೆ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಬೆಂಬಲ ನೀಡಿತ್ತು. ಆಗ ಮೋದಿ ಭಕ್ತರಿಂದ ಕೇಳಿ ಬಂದ ಟೀಕೆ ಒಂದೇ ಆಗಿತ್ತು. ‘ರೈತರ ಸಾಲ ಮನ್ನಾ ಹೆಸರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಕಾಂಗ್ರೆಸ್ ಬಂದ್ ಗೆ ಬೆಂಬಲ ನೀಡಿರೋದೇಕೆ? ರಾಜ್ಯ ಸರ್ಕಾರವೇ ಪೆಟ್ರೋಲ್ ಬೆಲೆ ಇಳಿಸಲಿ ನೋಡೋಣ…’ ಎಂದು.

ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರಾಜ್ಯ ಸರ್ಕಾರ ಹೇರಿರುವ ಸೆಸ್ ಅನ್ನು ಕಡಿತಗೊಳಿಸಿದ್ದು, ಈಗ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ ರು.2ರಷ್ಟು ಕಡಿಮೆಯಾಗಿದೆ.

ಕಲಬುರಗಿಯಲ್ಲಿ ನಡೆಯುತ್ತಿರುವ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ವೇಳೆ ಭಾಷಣ ಮಾಡಿದ ಸಿಎಂ ಈ ನಿರ್ಧಾರ ಪ್ರಕಟಿಸಿದ್ದು, ಈ ವೇಳೆ ಅವರು ಹೇಳಿದಿಷ್ಟು…, ‘ತೈಲ ದರ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಅದಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಅನ್ನು ಎರಡು ರೂಪಾಯಿ ಇಳಿಕೆಯಾಗುವಂತೆ ಇಳಿಕೆ ಮಾಡಲು ಸೂಚಿಸಿದ್ದೇನೆ’ ಎಂದು ಘೋಷಣೆ ಮಾಡಿದ್ರು. ಈ ಬಗ್ಗೆ ಸಿಎಂ ಅಧಿಕೃತ ಟ್ವಿಟರ್​ ಖಾತೆಯಿಂದಲೂ ಮಾಹಿತಿ ನೀಡಲಾಗಿದ್ದು, ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ರಾಜ್ಯದ ಜನರಿಗೆ ಸಿಎಂ ಹೆಚ್​ಡಿ ಕುಮಾರಸ್ವಾಮಿ ಭರ್ಜರಿ ಗಿಫ್ಟ್​ ನೀಡಿದ್ದಾರೆ.

ಇಡೀ ಭಾರತಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ‌ ಮಾತ್ರವೇ ಸೆಸ್‌ ಕಡಿಮೆ ಇರುವುದು. ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ ತೊಂಬತ್ತರ ಆಸುಪಾಸಿನಲ್ಲಿದೆ. ಆದರೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಬೇರೆಲ್ಲಾ ಮೂಲಭೂತ ವಸ್ತುಗಳೂ ಕೂಡ ಗಗನಕ್ಕೆ ಏರುತ್ತಿವೆ. ಹೀಗಾಗಿ ಈಗ ಕುಮಾರಸ್ವಾಮಿ ಅವರ ಈ ನಿರ್ಧಾರ ಜನ ಸಾಮಾನ್ಯನಿಗೆ ಕೊಂಚ ನೆಮ್ಮದಿ ತರುವುದರ ಜತೆಗೆ ಟೀಕಾಕಾರರ ಬಾಯಿಗೆ ಬೀಗ ಹಾಕಿದಂತಾಗಿದೆ.

Leave a Reply