ಕೇಂದ್ರ ಅವಕಾಶ ಕೊಟ್ರೆ 35ರಿಂದ 40 ರು.ಗೆ ಪೆಟ್ರೋಲ್ ಮಾರುತ್ತಾರಂತೆ ಬಾಬಾ ರಾಮ್ ದೇವ್! ಆದ್ರೆ ಷರತ್ತು ಅನ್ವಯ!

ಡಿಜಿಟಲ್ ಕನ್ನಡ ಟೀಮ್:

ದಿನೇ ದಿನೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಶತಕದ ಗಡಿ ಮುಟ್ಟುವ ಆತಂಕವನ್ನು ಸೃಷ್ಟಿಸಿದೆ. ಪರಿಣಾಮ ಕೇಂದ್ರ ಸರಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಮಧ್ಯೆ ಬಿಜೆಪಿ ಪರ ಸದಾ ಬ್ಯಾಟಿಂಗ್ ಮುವ ಯೋಗ ಗುರು ರಾಮ್ ದೇವ್ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಸದಿದ್ದರೇ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ಮಾಡುವುದಿಲ್ಲ ಎಂದು ಒತ್ತಡ ಹಾಕಿದ್ದಾರೆ.

ಇಷ್ಟೇ ಅಲ್ಲದೆ ಕೇಂದ್ರ ಸರಕಾರ ತಮಗೆ ಅವಕಾಶ ನೀಡಿದರೆ, ತಮ್ಮ ಪತಂಜಲಿ ಸಂಸ್ಥೆ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕೇವಲ 35ರಿಂದ 40 ರು.ಗೆ ಮಾರಾಟ ಮಾಡುವುದಾಗಿ ಆಫರ್ ಸಹ ಕೊಟ್ಟಿದ್ದಾರೆ. ಆದ್ರೆ ಷರತ್ತುಗಳು ಅನ್ವಯಿಸುತ್ತವೆ!

ಹೌದು, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ‘ಒಂದು ವೇಳೆ ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಿದರೆ, ಕೆಲವು ತೆರಿಗೆ ವಿನಾಯಿತಿ ಕೊಟ್ಟರೆ 35-40 ರು.ಗಳಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ಮಾಡಬಲ್ಲೆ. ತೈಲ ದರಗಳು ಜನರ ಜೇಬನ್ನು ಬರಿದುಗೊಳಿಸುತ್ತಿರುವುದರಿಂದ ಅವುಗಳನ್ನು ಜಿಎಸ್ ಟಿಯಡಿಗೆ ತರಬೇಕು. ಆದರೆ, ಸರ್ಕಾರ ಚಿಂತಿಸುತ್ತಿರುವಂತೆ ಶೇ.28 ತೆರಿಗೆ ಶ್ರೇಣಿ ಹಾಕಬಾರದು, ಅತಿ ಕಡಿಮೆ ತೆರಿಗೆ ಶ್ರೇಣಿಗೆ ಹಾಕಬೇಕು. ಒಂದೊಮ್ಮೆ ಆದಾಯ ನಷ್ಟವಾದರೆ ಸರ್ಕಾರವೇನೂ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಅದರ ಬದಲು ಶ್ರೀಮಂತರಿಗೆ ತೆರಿಗೆ ಹಾಕಿ ಆದಾಯ ಪಡೆಯಬಹುದು. ಒಂದೆಡೆ ಹೆಚ್ಚುತ್ತಿರುವ ತೈಲ ದರ, ಮತ್ತೊಂದೆಡೆ ಕುಸಿಯುತ್ತಿರುವ ರೂಪಾಯಿ ದರ ಮೋದಿ ಸರ್ಕಾರಕ್ಕೆ ದೊಡ್ಡ ಕಂಟಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಇನ್ನು ದರ ಇಳಿಕೆ ವಿಚಾರವಾಗಿ ಕೇಂದ್ರದ ವಿರುದ್ಧ ಒತ್ತಡ ಹೇರುವ ಪ್ರಯತ್ನ ಮಾಡಿರುವ ರಾಮ್ ದೇವ್, ‘ಕೇಂದ್ರ ಸರ್ಕಾರ ಆದಷ್ಟು ಬೇಗ ತೈಲ ದರ ಇಳಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ಮಾಡುವುದಿಲ್ಲ. ಮೋದಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ನಾನು ಬಲಪಂಥೀಯನೂ ಅಲ್ಲ ಎಡಪಂಥೀಯನೂ ಅಲ್ಲ. ನಾನು ಇಬ್ಬರ ವಿಚಾರಧಾರೆಗಳನ್ನೂ ಗೌರವಿಸುತ್ತೇನೆ. ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ. ನಾನು ಸ್ವತಂತ್ರ. ಆದ್ದರಿಂದಲೇ ಹಲವು ವಿಷಯಗಳಲ್ಲಿ ಮೌನ ಯೋಗವನ್ನು ಅನುಕರಿಸಿದ್ದೇನೆ’ ಎಂದರು.

Leave a Reply