ಜಾರಕಿಹೊಳಿ ಸಹೋದರರ ಜತೆ ಕುಮಾರಸ್ವಾಮಿ ಸಂಧಾನ ಯಶಸ್ವಿ!

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ವಾರಗಳಿಂದ ಸಮ್ಮಿಶ್ರ ಸರಕಾರದ ಬುಡ ಅಲ್ಲಾಡಿಸುತ್ತಿದ್ದ ಜಾರಕಿಹೊಳಿ ಸಹೋದರರ ಜತೆಗ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ನಡೆಸಿದ ಸಂಧಾನ ಯಶಸ್ವಿಯಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಮತ್ತೊಂದು ಮಂತ್ರಿ ಸ್ಥಾನ ಸೇರಿದಂತೆ ಸಹೋದರರು ಇಟ್ಟಿದ್ದ ಕೆಲವು ಬೇಡಿಕೆಗಳ ಈಡೇರಿಕೆಗೆ ಸಿಎಂ ಅಸ್ತು ಎಂದಿದ್ದಾರೆ.

ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಸುಮಾರು ಒಂದೂವರೇ ತಾಸು ಈ ಮಾತುಕತೆ ನಡೆಯಿತು. ವಿದೇಶ ಪ್ರವಾಸದಿಂದ ಕರ್ನಾಟಕಕ್ಕೆ ಹಿಂತಿರುಗಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸೋಮವಾರ ಮಾತುಕತೆ ನಡೆಸಿದ್ದ ಜಾರಕಿಹೊಳಿ ಸಹೋದರರ ಜತೆ ಕುಮಾರಸ್ವಾಮಿ ಇವತ್ತು ಚರ್ಚೆ ನಡೆಸಿ ಅವರ ಆಹವಾಲುಗಳನ್ನು ಆಲಿಸಿದರು.

ಜಾರಕಿಹೊಳಿ ಸಹೋದರರು ಪ್ರತಿನಿಧಿಸುವ ವಾಲ್ಮೀಕಿ ಸಮುದಾಯಕ್ಕೆ ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮತ್ತೊಂದು ಸ್ಥಾನ ನೀಡಬೇಕು. ತಾವು ಹೇಳಿದ ಅಧಿಕಾರಿಗಳ ವರ್ಗಾವಣೆ ಮಾಡಬೇಕು. ರಮೇಶ್ ಜಾರಕಿಹೊಳಿ ಸಹೋದರರು ನಿರ್ವಹಿಸುತ್ತಿರುವ ಪೌರಾಡಳಿತ ಇಲಾಖೆಗೆ ಹೆಚ್ಚಿನ ಅನುದಾನ ನೀಡಬೇಕು ಎಂಬುದು ಬೇಡಿಕೆ ಆಗಿತ್ತು. ಇದನ್ನು ಈಡೇರಿಸುವುದಾಗಿ ಕುಮಾರಸ್ವಾಮಿ ಹೇಳುವುದರೊಂದಿಗೆ ಗೊಂದಲಕ್ಕೆ ತೆರೆ ಬಿದ್ದಿದೆ.

ಮುಖ್ಯಮಂತ್ರಿ ಜತೆಗಿನ ಮಾತುಕತೆ ತಮಗೆ ಸಮಾಧಾನ ತಂದಿದೆ. ತಮ್ಮ ಸಮುದಾಯಕ್ಕೆ ಮತ್ತೊಂದು ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಬಳ್ಳಾರಿಗೇ ಪ್ರಾತಿನಿಧ್ಯ ನೀಡಬೇಕೆಂಬ ಷರತ್ತನ್ನು ತಾವೇನೂ ವಿಧಿಸಿಲ್ಲ. ತಾವು ಕೋರಿದವರ ವರ್ಗಾವಣೆಗೂ ಸಮ್ಮತಿ ನೀಡಿದ್ದಾರೆ. ಎಲ್ಲ ಬೇಡಿಕೆಗಳನ್ನು ಒಂದೇ ಬಾರಿ ಈಡೇರಿಸಲು ಸಾಧ್ಯವಿಲ್ಲ. ಎಲ್ಲ ಹಂತ-ಹಂತವಾಗಿ ಈಡೇರುತ್ತದೆ. ಅವರಿಗೂ ಕಾಲಾವಕಾಶ ನೀಡಬೇಕು. ತಾವ್ಯಾರು ಉಪಮುಖ್ಯಮಂತ್ರಿ ಸ್ಥಾನ ಕೇಳಿಲ್ಲ. ಹೈಕಮಾಂಡ್ ಕರೆ ಮೇರೆಗೆ ನಾನು ಬುಧವಾರ ದಿಲ್ಲಿಗೆ ತೆರಳುತ್ತಿದ್ದೇನೆ. ರಮೇಶ್ ಜಾರಕಿಹೊಳಿ ಬರುತ್ತಿಲ್ಲ. ಒಂದು ಸರಕಾರ ಎಂದ ಮೇಲೆ ಗೊಂದಲಗಳು, ಸಮಸ್ಯೆಗಳು ಇದ್ದೇ ಇರುತ್ತವೆ. ಈಗ ತಮ್ಮಲ್ಲಿ ಯಾವುದೇ ಅಸಮಾಧಾನ ಉಳಿದಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಂತರ ಸುದ್ದಿಗಾರರಿಗೆ ತಿಳಿಸಿದರು.

Leave a Reply