ಜಾರಕಿಹೊಳಿ ಬ್ರದರ್ಸ್ ವಿರುದ್ಧ ತಿರುಗಿ ಬಿದ್ದ ಬಳ್ಳಾರಿ ಕಾಂಗ್ರೆಸ್ ನಾಯಕರು!

ಡಿಜಿಟಲ್ ಕನ್ನಡ ಟೀಮ್:

ಸದ್ಯ ರಾಜ್ಯ ಕಾಂಗ್ರೆಸ್ ಸಮಸ್ಯೆಗಳಿಂದ ಮುಕ್ತಿ ಹೊಂದುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜಾರಕಿಹೊಳಿ ಸಹೋದರರ ಅತೃಪ್ತಿ ಶಮನವಾಗುತ್ತಿದಂತೆ, ಈಗ ಬಳ್ಳಾರಿ ಕಾಂಗ್ರೆಸ್ ನಾಯಕರು ಕಿಡಿಕಾರಲು ಆರಂಭಿಸಿದ್ದಾರೆ. ಅದೂ ಜಾರಕಿಹೊಳಿ ಸಹೋದರರ ವಿರುದ್ಧ!

ಹೌದು, ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಹೊರಗಿನವರು ಮೂಗು ತೂರಿಸಬಾರದು ಎಂದು ಬಂಡಾಯ ಎದ್ದಿದ್ದ ಜಾರಕಿಹೊಳಿ ಸಹೋದರರ ವಿರುದ್ಧ ಈಗ ಬೇರೆ ಜಿಲ್ಲೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ ಜಿಲ್ಲೆ ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಹಸ್ತಕ್ಷೇಪವನ್ನು ಖಂಡಿಸಿದ್ದ ಜಾರಕಿಹೊಳಿ ಸಹೋದರರು, ಕಾಂಗ್ರೆಸ್ ಹೈಕಮಾಂಡ್ ಮುಂದೆ ಹಲವು ಷರತ್ತುಗಳನ್ನು ಇಟ್ಟಿದ್ದು, ಅದರಲ್ಲಿ ಬಳ್ಳಾರಿಯ ನಾಗೇಂದ್ರ ಅವರಿಗೇ ಮಂತ್ರಿ ಸ್ಥಾನ ನೀಡಬೇಕು, ನಾಯಕ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆ ಮೂಲಕ ಬಳ್ಳಾರಿ ಜಿಲ್ಲಾ ರಾಜಕೀಯದಲ್ಲಿ ತಲೆ ಹಾಕಿದ್ದಾರೆ.

ಜಾರಕಿಹೊಳಿ ಸಹೋದರರ ಈ ನಡೆಯನ್ನು ಬಳ್ಳಾರಿ ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ಬೆಳಗಾವಿ ರಾಜಕೀಯದಲ್ಲಿ ಬೆರೇಯವರು ತಲೆ ಹಾಕುವುದು ಬೇಡ ಎನ್ನುವವರು, ಬಳ್ಳಾರಿಯಲ್ಲಿ ಇಂತಹವರನ್ನೇ ಮಂತ್ರಿ ಮಾಡಬೇಕು ಎಂದು ನಮ್ಮ ಜಿಲ್ಲಾ ರಾಜಕೀಯಕ್ಕೆ ಮೂಗು ತೂರಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಬಳ್ಳಾರಿ ಕಾಂಗ್ರೆಸ್ ನಾಯಕರು ಹಾಗೂ ಶಾಸಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಜಾರಕಿಹೊಳಿ ಸಹೋದರರನ್ನು ಸಮಾಧಾನ ಪಡಿಸಲು ಹರಸಾಹಸಪಟ್ಟಿದ್ದ ಕಾಂಗ್ರೆಸ್ ಪ್ರಮುಖ ನಾಯಕರು ನೆಮ್ಮದಿಯ ಉಸಿರು ಬಿಡುವ ಹೊತ್ತಿಗೆ ಬಳ್ಳಾರಿ ನಾಯಕರ ಭಿನ್ನರಾಗ ಚಿತ್ತ ಕೆಡಿಸಿದೆ.

Leave a Reply