ಯಾವುದೇ ತನಿಖೆಗೆ ಹೆದರುವುದಿಲ್ಲ, ಪಲಾಯನ ಮಾಡುವುದಿಲ್ಲ, ಯಡಿಯೂರಪ್ಪ ಸರಕಾರ ಮಾಡಲು ಬಿಡುವುದಿಲ್ಲ; ಡಿಕೆಶಿ ಗುಡುಗು

ಡಿಜಿಟಲ್ ಕನ್ನಡ ಟೀಮ್:

ಕೇಂದ್ರೀಯ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನನ್ನನ್ನು ಜೈಲಿಗೆ ಕಳುಹಿಸಿ, ರಾಜ್ಯದಲ್ಲಿ ಸರಕಾರ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ. ಅವರ ಕೀಳುಮಟ್ಟದ ರಾಜಕೀಯ ಫಲ ನೀಡಲು ನಾನು ಬಿಡುವುದಿಲ್ಲ, ಅವರು ಹೇಗೆ ಸರಕಾರ ಮಾಡುತ್ತಾರೋ ನಾನೂ ನೋಡುತ್ತೇನೆ ಎಂದು ಜಲ ಸಂಪನ್ಮೂಲ ಹಾಗೂ ವೈದ್ಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

ಇನ್ನೆರಡು ಮೂರು ದಿನಗಳಲ್ಲಿ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ. ಆಮೇಲೆ ಸರಾಗವಾಗಿ ಸರಕಾರ ಮಾಡಬಹುದು ಎಂದು ಯಡಿಯೂರಪ್ಪ ಬಿಜೆಪಿ ಮುಖಂಡರ ಸಭೆಯಲ್ಲಿ ಹೇಳಿದ್ದಾರೆ. ಆದಾಯ ತರಿಗೆ ಇಲಾಖೆ ಅಧಿಕಾರಿಗಳು ನನ್ನ, ನನ್ನ ಕುಟುಂಬ ಸದಸ್ಯರ, ಸ್ನೇಹಿತರು, ಬಂಧು ಬಳಗದವರ ಮನೆ, ಕಚೇರಿ ಸೇರಿ ಒಟ್ಟು 82 ಕಡೆ ದಾಳಿ ನಡೆಸಿದ ಒಂದು ವರ್ಷ ಒಂದು ತಿಂಗಳ ನಂತರ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ಕೈಗೆತ್ತಿಕೊಂಡಿದೆ. ಅದೇ ಕಾಲಕ್ಕೆ ಯಡಿಯೂರಪ್ಪ ಸರಕಾರ ರಚನೆ ಮಾತಾಡುತ್ತಿದ್ದಾರೆ. ಒಂದಕ್ಕೊಂದು ಹೇಗೆ ಬೆಸೆದುಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಆರೋಪಿಸಿದರು. ಸಂಸದ ಡಿ.ಕೆ. ಸುರೇಶ್ ಈ ಸಂದರ್ಭದಲ್ಲಿದ್ದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಬುಧವಾರ ಬೆಳಗ್ಗೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಹವಾಲಾ ವ್ಯವಹಾರ ಆರೋಪ ಮಾಡಿದ್ದರು. ಇದಕ್ಕೆ ಉತ್ತರ ನೀಡಲೆಂದೇ, ವಿಷಯುಕ್ತ ಆಹಾರ ಸೇವನೆಯಿಂದ ಅಸ್ವಸ್ಥರಾಗಿ ನಿನ್ನೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಗೃಹಕಚೇರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ಆಸ್ಪತ್ರೆಗೆ ಮರಳಿದ ಶಿವಕುಮಾರ್ ಒಟ್ಟಾರೆ ಹೇಳಿದ್ದಿಷ್ಟು:

ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ನನ್ನ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರು ಎಳೆದು ತಂದಿದ್ದಾರೆ. ಅವರ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸಿದ್ದಾರೆ. ಡೈರಿಯಲ್ಲಿ ಎಸ ಜಿ, ಆರ್ ಜಿ ಅಂತ ಇದೆಯಂತೆ, ಯಾವ ಆರ್ ಜಿ? ಯಾವ ಎಸ್ ಜಿ? ರಾಹುಲ್ ಗಾಂಧಿ ಅವರಿಗೂ, ಸೋನೀಯಾ ಗಾಂಧಿ ಅವರಿಗೂ ನನ್ನ ವಿರುದ್ಧದ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಯಾವ ಹವಾಲಾ ನಡೆದಿದೆಯೋ ಎಲ್ಲಿ ನಡೆದಿದೆಯೋ ಗೊತ್ತಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಉತ್ತರ ಕೊಡಬೇಕು ಎಂದು ಸಂಬೀತ್ ಹೇಳಿದ್ದಾರೆ. ಅವರು ಉತ್ತರ ಕೊಡುವ ಅಗತ್ಯವಿಲ್ಲ. ಸಂಬೀತ್ ನನ್ನನ್ನು ಅರಗಿಸಿಕೊಳ್ಳಲಿ ಸಾಕು. ತನಿಖಾಧಿಕಾರಿಗಳಿಗೆ ನಾನೇನು ಮಾಹಿತಿ ನೀಡಿದ್ದೇನೆ ಎಂಬುದು ಸಂಬೀತ್ ಅವರಿಗೆ ಗೊತ್ತಿಲ್ಲ ಎಂದು ಕಾಣುತ್ತದೆ. ಹೋಗಿ ಮಾಹಿತಿ ಪಡೆದುಕೊಳ್ಳಲಿ. ಐಟಿ ದಾಳಿಯಾದಾಗ ದಿಲ್ಲಿಯಲ್ಲಿ ಸಿಕ್ಕಿದ್ದು ನನಗೆ ಸೇರಿದ 41 ಲಕ್ಷ ರುಪಾಯಿಗಳು ಮಾತ್ರ. ಕೃಷಿ ಮತ್ತಿತರ ವ್ಯಾಪಾರ ವ್ಯವಹಾರಗಳಿಂದ ಸಾಕಷ್ಟು ಹಣ ಬರುತ್ತದೆ. ನಾನು ಮತ್ತು ನನ್ನ ಕುಟುಂಬದವರು ವರ್ಷಕ್ಕೆ 30 ಕೋಟಿ ರುಪಾಯಿ ತೆರಿಗೆ ಕಟ್ಟುತ್ತೇವೆ. 41 ಲಕ್ಷ ಎಲ್ಲಿಂದ ಬಂತು ಎಂದು ಐಟಿ ಇಲಾಖೆಗೆ ಲೆಕ್ಕ ಕೊಟ್ಟಿದ್ದೇನೆ. ನನಗೆ ಸೇರಿದ ಆರು ಕೋಟಿ ಸಿಕ್ಕಿತು, ಎಂಟು ಕೋಟಿ ಸಿಕ್ಕಿತು ಎಂಬುದೆಲ್ಲ ಸುಳ್ಳು. ಒಂದು ಕೋಟಿ ರುಪಾಯಿ ತಮ್ಮದೆಂದು ವ್ಯಾಪಾರದ ಪಾಲುದಾರ ಶರ್ಮಾ ಹೇಳಿದ್ದಾರೆ. ಸಂಬೀತ್ ಪಾತ್ರ ಹೇಳಿರುವಂತೆ ಅಪಾರ ಹಣ ಎಲ್ಲಿ ಸಿಕ್ಕಿದೆಯೋ ನನಗೆ ಗೊತ್ತಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳ ವಿಚಾರಣೆ ಮಾಹಿತಿಗಳು ಪಾತ್ರಾ ಅವರಂಥವರಿಗೆ ಸುಲಭವಾಗಿ ಸಿಗುವುದು, ನನ್ನ ಮನೆ ಮೇಲೆ ಐಟಿ ದಾಳಿಯಾದ ಹತ್ತೇ ನಿಮಿಷದಲ್ಲಿ ದಾಖಲೆ ಪ್ರತಿಗಳು ಲೋಕಸಭೆಯಲ್ಲಿ ಪ್ರದರ್ಶನ ಆಗುವುದು, ಐಟಿ ವಶದಲ್ಲಿದ್ದ ಗೋವಿಂದರಾಜ್ ಡೈರಿ ಮಾಹಿತಿಗಳನ್ನು ಯಡಿಯೂರಪ್ಪ ಪ್ರದರ್ಶಿಸುವುದು – ಇವೆಲ್ಲ ಬಿಜೆಪಿಗೂ ಸ್ವಾಯತ್ತ ತನಿಖಾ ಸಂಸ್ಥೆಗಳಿಗೂ ಇರುವ ನೆಂಟಿನ ಪ್ರತೀಕ. ನನಗೆ ಈ ನೆಲದ ಕಾನೂನು. ನ್ಯಾಯಾಂಗ ವ್ಯವಸ್ಥೆ, ತನಿಖಾ ಸಂಸ್ಥೆಗಳ ಬಗ್ಗೆ ಅಪಾರ ಗೌರವವಿದೆ. ಆದರೆ ಸಂಬೀತ್ ಪಾತ್ರರಂಥವರು ಇಲ್ಲ-ಸಲ್ಲದ ಆರೋಪಗಳನ್ನು ಮಾಡುವ ಮೂಲಕ ನ್ಯಾಯದಾನ ವ್ಯವಸ್ಥೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ 2008-09 ರ ಹಣಕಾಸು ವರ್ಷದ ಆದಾಯ ತೆರಿಗೆ ವಿವರ ಸಲ್ಲಿಸಿದ ಸಂದರ್ಭದಲ್ಲಿ ಒಂದು ಕೋಟಿ ರುಪಾಯಿಯನ್ನು ಚೆಕ್ ಮೂಲಕ ಲಂಚ ಸ್ವರೂಪದಲ್ಲಿ ಸ್ವೀಕರಿಸಿದ್ದನ್ನು ಮುಚ್ಚಿಟ್ಟಿರುವುದು ಐಟಿ ಇಲಾಖೆ ದಾಖಲೆಗಳಲ್ಲಿ ನಮೂದಾಗಿದೆ. ಅಂತ ಅನೇಕ ದಾಖಲೆಗಳು ನನ್ನ ಬಳಿಯೂ ಇವೆ. ಸಮಯ ಬಂದಾಗ ಬಹಿರಂಗ ಮಾಡುತ್ತೇನೆ. ಸಹರಾ ಪ್ರಕರಣದಲ್ಲಿ ನರೇಂದ್ರ ಮೋದಿ ಹೆಸರು ಡೈರಿಯಲ್ಲಿ ದಾಖಲಾಗಿರಲಿಲ್ಲವೇ? ಜೈನ್ ಸಹೋದರರ ಡೈರಿಯಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಅವರ ಹೆಸರು ಇರಲಿಲ್ಲವೇ? ಸಂಬೀತ್ ಪಾತ್ರಾ ಇದಕ್ಕೇನೆನ್ನನ್ನುತ್ತಾರೆ? ಇಷ್ಟಕ್ಕೂ ಮಿಗಿಲಾಗಿ ಈ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ಏನು? ಡೈರಿಯಲ್ಲಿ ಸಿಕ್ಕ ಹೆಸರು, ಇನಿಷಿಯಲ್, ಮಾಹಿತಿಗಳನ್ನು ಸಾಕ್ಷಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿರುವುದರ ಬಗ್ಗೆ ಸಂಬೀತ್ ಪಾತ್ರ ಅವರಿಗೆ ಅರಿವಿಲ್ಲ ಎಂದ ಕಾಣುತ್ತದೆ. ಬಿಜೆಪಿ ಮುಖಂಡರಿಗೆ ಒಂದು ನ್ಯಾಯ, ಕಾಂಗ್ರೆಸ್ ಮುಖಂಡರಿಗೆ ಮತ್ತೊಂದು ನ್ಯಾಯವೇ?

ಇಡಿ ಎಫ್ಐಆರ್ ದಾಖಲಿಸಿದೆ ಎಂಬುದು ಮಾಧ್ಯಮ ವರದಿಗಳಿಂದ ಮಾತ್ರ ಗೊತ್ತಾಗಿದೆ. ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನನಗೆ ಯಾವುದೇ ನೋಟಿಸ್ ಬಂದಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನೋಟಿಸ್ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಗೌರವಯುತವಾಗಿ ಉತ್ತರ ಕೊಡುತ್ತೇನೆ. ಆದರೆ ಯಾವುದೇ ಒತ್ತಡಗಳಿಗೆ ಬಗ್ಗುವುದಿಲ್ಲ. ಮಂತ್ರಿ ಪದವಿಗೆ ರಾಜೀನಾಮೆ ಕೊಡುವುದಿಲ್ಲ. ನಾನೇಕೆ ರಾಜೀನಾಮೆ ಕೊಡಲಿ? ನಾನೇನು ತಪ್ಪು ಮಾಡಿದ್ದೇನೆ? ನಾನೇನು ಕೊಲೆ ಮಾಡಿದ್ದೇನಾ? ಅತ್ಯಾಚಾರ ಮಾಡಿದ್ದೇನಾ? ಮತ್ತಿನ್ಯಾವುದೇ ಅಪರಾಧ ಎಸಗಿದ್ದೇನಾ? ಚೆಕ್ಕಲ್ಲಿ ಲಂಚ ಪಡೆದು ಜೈಲಿಗೆ ಹೋಗಿ ಬಂದವರು ಒಂದು ಪಕ್ಷದ ರಾಜ್ಯಾಧ್ಯಕ್ಷರಾಗುತ್ತಾರೆ. ಜೈಲಲ್ಲಿದ್ದುಕೊಂಡು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಜೈಲಿಗೆ ಹೋಗಿ ಬಂದವರು ಒಂದು ರಾಷ್ಡ್ರೀಯ ಪಕ್ಷದ ಅಧ್ಯಕ್ಷರೂ ಆಗುತ್ತಾರೆ. ಹೀಗಿರುವಾಗ ಯಾವ ತಪ್ಪು ಮಾಡಿದ್ದೇನೆ ಎಂದು ರಾಜೀನಾಮೆ ಕೊಡಲಿ? ನನ್ನ ವಿರುದ್ಧ ಪ್ರಕರಣ ಇದ್ದರೆ ತನಿಖೆಗೆ ಸಹಕರಿಸುತ್ತೇನೆ. ಕೇಳಿದ ವಿವರ ಕೊಡುತ್ತೇನೆ. ಅದನ್ನು ಬಿಟ್ಟು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ.

ಕಳೆದ ವರ್ಷ ರಾಜ್ಯಸಭೆ ಚುನಾವಣೆ ಸಂದರ್ಭ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಟ್ಟುಕೊಂಡ ನಂತರ ಬಿಜೆಪಿ ರಾಷ್ಡ್ರೀಯ ಹಾಗೂ ರಾಜ್ಯ ನಾಯಕರು ನನ್ನ ಬೆನ್ನು ಬಿದ್ದಿದ್ದಾರೆ. ನನ್ನ ರಕ್ತಕ್ಕಾಗಿ ಹಪಾಹಪಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನನ್ನ ಮತ್ತು ನನ್ನ ಪಕ್ಷದ ವರ್ಚಸ್ಸಿಗೆ ಮಸಿ ಬಳಿಯಲು ಹೊರಟಿದ್ದಾರೆ. ಒತ್ತಡ ಹಾಕಿ ಐಟಿ ದಾಳಿಗಳನ್ನು ನಡೆಸಿದ್ದಾರೆ. ದಾಳಿಗೆ ಒಳಗಾದ ಬಂಧುಗಳು, ಸ್ನೇಹಿತರ ಮೇಲೆ ಒತ್ತಡ ಹಾಕಿ ಸಿಕ್ಕ ಹಣವೆಲ್ಲ ನನ್ನದೇ ಎಂದು ಹೇಳಿಸಿ ಸಹಿ ಮಾಡಿಸಿಕೊಂಡಿದ್ದಾರೆ. ಸಹಿ ಮಾಡದಿದ್ದರೆ ಬಂಧಿಸುವುದಾಗಿ, ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರತಿಷ್ಠೆ ರಾಜಕಾರಣಕ್ಕೆ ನನ್ನನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಸರಕಾರ ಮಾಡಲು ಬಿಡಬಾರದು ಎಂದು ಪ್ರಯತ್ನ ಪಟ್ಟರು. ಅದು ಸಫಲವಾಗಲಿಲ್ಲ. ಈಗ ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡಿ ಉರುಳಿಸಲು ಯತ್ನಿಸುತ್ತಿದ್ದಾರೆ. ಯಾರ್ಯಾರು, ಯಾರ್ಯಾರಿಗೆ ಎಷ್ಟೆಷ್ಟು ಹಣದ ಆಮಿಷವೊಡ್ಡಿದ್ದರು ಎಂಬುದನ್ನು ಅವರ ಬಾಯಿಂದಲೇ ಹೇಳಿಸುತ್ತೇನೆ. ಮೈತ್ರಿ ಸರಕಾರದ ಬಂಡೆಗಲ್ಲಾಗಿ ನಿಂತಿರುವ ನನ್ನನ್ನು ನಿವಾರಿಸಿಕೊಳ್ಳಲು ಏನೆಲ್ಲ ಆಟಗಳನ್ನು ಹೂಡುತ್ತಿದ್ದಾರೆ? ಜೈಲಿಗೆ ಕಳುಹಿಸಲು ಏನೆಲ್ಲ ಸಂಚು ಮಾಡಿದ್ದಾರೆ ಎಲ್ಲವನ್ನು ಬಯಲಿಗೆಳೆಯುತ್ತೇನೆ. ನನ್ನ ವಿರುದ್ಧದ ಪ್ರತಿ ನಡೆಯಲ್ಲೂ ರಾಜಕೀಯ ಅಡಗಿದೆ. ಆದರೆ ಈ ಶಿವಕುಮಾರ್ ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ. ನಾನು ಹೇಡಿಯಲ್ಲ. ಹೆದರಿ ಪಲಾಯನ ಮಾಡುವುದಿಲ್ಲ. ಅದು ನನ್ನ ಜಾಯಮಾನದಲ್ಲೇ ಇಲ್ಲ.

ನನ್ನ ಮೇಲೆ ಬಿಜೆಪಿಯವರು ಹಿಂದೆ ಸಾಕಷ್ಟು ಒತ್ತಡ ಹಾಕಿದ್ದರು. ಆಮಿಷಗಳನ್ನು ಒಡ್ಡಿದ್ದರು. ಅದೇನೆಂದು ಸಮಯ ಬಂದಾಗ ಹೇಳುತ್ತೇನೆ. ಅವರ ಜತೆ ರಾಜೀ ಮಾಡಿಕೊಳ್ಳದೇ ಹೋದದ್ದಕ್ಕೆ ಈಗ ಏನೇನು ಅನುಭವಿಸುತ್ತಿದ್ದೇನೆ ಎಂದು ನೀವೇ (ಮಾಧ್ಯಮ) ನೋಡುತ್ತಿದ್ದೀರಿ. ನಾನು ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಹಿತ ಬಲಿಕೊಟ್ಟು ರಾಜೀ ಮಾಡಿಕೊಳ್ಳಲಾರೆ. ಬಿಜೆಪಿಯವರು ಏನೇನು ಕಿರುಕುಳ ಕೊಡುತ್ತಾರೋ ಕೊಡಲಿ ಎದುರಿಸುತ್ತೇನೆ, ಅದನ್ನು ಎದುರಿಸುವ ತಾಕತ್ತು ನನಗಿದೆ. ಯಾರಿಗೂ ಬೆದರುವುದಿಲ್ಲ, ಜಗ್ಗುವುದಿಲ್ಲ.

ಐಟಿಯವರಿಂದ ಸಿಬಿಐ ಮಾಹಿತಿ ಪಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಅವರೇನು ನನ್ನನ್ನು ಸಂಪರ್ಕಿಸಿಲ್ಲ. ನನ್ನ ತಮ್ಮನನ್ನು (ಸಂಸದ ಸುರೇಶ್) ಕರೆದಿದ್ದರು.  ನೋಟೀಸ್ ಕೊಟ್ಟಿದ್ದರು. ಅದಕ್ಕವರು ಉತ್ತರ ಕೊಟ್ಟಿದ್ದಾರೆ.

Leave a Reply