ನಿಮ್ಮತ್ರ ರಾಜ್ಯ ಸರ್ಕಾರವಿದ್ದರೆ ನಮ್ಮ ಬಳಿ ಕೇಂದ್ರ ಸರ್ಕಾರವಿದೆ: ಬಿಎಸ್ ವೈ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

‘ಕುಮಾರಸ್ವಾಮಿ ಅವರೇ ಸಿಎಂ ಸ್ಥಾನ ಶಾಶ್ವತವಲ್ಲ. ದ್ವೇಷದ ರಾಜಕೀಯ ಮಾಡಬೇಡಿ. ನಿಮ್ಮ ಬಳಿ ರಾಜ್ಯ ಸರ್ಕಾರವಿದ್ದರೆ ನಮ್ಮ ಬಳಿ ಕೇಂದ್ರದ ಮೋದಿ ಸರ್ಕಾರ ಇದೆ. ನಮಗೂ ಏನು ಮಾಡಬೇಕು ಅಂತಾ ಗೊತ್ತು’ ಇದು ಬಿಜೆಪಿ ರಾಜ್ಯ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸಿಎಂ ಕುಮಾರಸ್ವಾಮಿಗೆ ಕೊಟ್ಟ ತಿರುಗೇಟು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದ್ದು ಇಷ್ಟು…
‘ಮಾಜಿ ಮುಖ್ಯಮಂತ್ರಿಯಾಗಿ, ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿ ನನ್ನ ಇತಿಮಿತಿ ಏನು ಅಂತಾ ಗೊತ್ತಿದೆ. ನಿಮ್ಮ ಕುಟುಂಬದ ಬಗ್ಗೆ ಕಾಂಗ್ರೆಸ್ ನಾಯಕ ಮಂಜು ಅವರ ಆರೋಪದ ಬಗ್ಗೆ ನೀವು ಮೌನ ವಹಿಸಿರುವುದೆಕೇ? ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿ. ಇಂದು ಸಂಜೆ 4 ಗಂಟೆಗೆ ನಮ್ಮ ನಾಯಕರು ಸುದ್ದಿಗೋಷ್ಠಿ ನಡೆಸಿ, ಈ ಕುರಿತ ದಾಖಲೆ ಬಿಡುಗಡೆ ಮಾಡುತ್ತೇವೆ. ಆ ಬಗ್ಗೆ ಉತ್ತರ ಕೊಡಿ.

ಮೈಸೂರಿನಲ್ಲಿ ದೇವೇಗೌಡರ ಕುಟುಂಬ ಎರಡೂವರೆ ಎಕರೆ ಭೂ ಹಗರಣದ ಬಗ್ಗೆ ನಾವು ಪುಸ್ತಕ ಮಾಡಿ ರಾಜ್ಯದಲ್ಲಿ ಹಂಚಿದ್ದೇವೆ. ಇದರಲ್ಲಿ ಮುಚ್ಚಿಡುವ ಅಂಶವಿಲ್ಲ. ರಾಜ್ಯದಲ್ಲಿ ನಿಮ್ಮ ಕುಟುಂಬ ಮಾಡಿರುವಷ್ಟು ಭೂ ಹಗರಣ ಬೇರೆ ಯಾರು ಮಾಡಿಲ್ಲ.

ಶಿವರಾಮ ಕಾರಂತ್ ಬಡಾವಣೆ ವಿಚಾರವಾಗಿ ಸಮಗ್ರ ತನಿಖೆ ನಡೆಸಿ. ನಿಮ್ಮದೇ ಸರ್ಕಾರ ಇದೆ. ನೀವು ದ್ವೇಷದ ರಾಜಕಾರಣ ಮಾಡಲು ಹೊರಟಿದ್ದೀರಿ. ಸಿಎಂ ಸ್ಥಾನ ಶಾಶ್ವತವಲ್ಲ. ನಾವೂ ನಮ್ಮ ಐದು ವರ್ಷಗಳ ಆಡಳಿತದಲ್ಲಿ ಯಾವತ್ತು ದ್ವೇಷದ ರಾಜಕಾರಣ ಮಾಡಿಲ್ಲ.

ನನ್ನ ಇತಿಮಿತಿ ಬಗ್ಗೆ ಮಾತನಾಡುವ ಬದಲು ನಿಮ್ಮ ಇತಿಮಿತಿ ಬಗ್ಗೆ ಗಮನ ಕೊಡಿ. ನಿಮ್ಮ ಬಳಿ ಸರ್ಕಾರ ಇದೇ ಎಂದು ಧಮಕಿಗೆ ಯಡಿಯೂರಪ್ಪ ಬಗ್ಗುವುದಿಲ್ಲ. ನಿಮ್ಮ ಬಳಿ ರಾಜ್ಯ ಸರ್ಕಾರ ಇದ್ದರೆ, ನಮ್ಮ ಬಳಿ ಕೇಂದ್ರದಲ್ಲಿ ಮೋದಿ ಸರ್ಕಾರ ಇದೆ. ನಮಗೂ ಏನು ಮಾಡಬೇಕು ಗೊತ್ತಿದೆ.’

Leave a Reply