ಬಿಎಸ್ ವೈ ಪರ್ಸೆಂಟೆಜ್ ಜನಕ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಹೆಚ್ ಡಿಕೆ ಕಿಡಿ!

ಡಿಜಿಟಲ್ ಕನ್ನಡ ಟೀಮ್:

‘ಬಿಎಸ್ ಯಡಿಯೂರಪ್ಪ ಪರ್ಸೆಂಟೆಜ್ ಜನಕ. ಅವರ ಆಡಳಿತ ಅವಧಿಯಲ್ಲಿ ರಾಜ್ಯದ ಲೂಟಿ ಮಾಡಿದ್ದಾರೆ. ಹೀಗೆ ಗಾಜಿನ ಮನೆಯಲ್ಲಿ ನಿಂತಿರುವ ಅವರು ಬೇರೆಯವರ ಮೇಲೆ ಕಲ್ಲು ಎಸೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಯಸ್ಸಿಗೆ ತಕ್ಕಂತೆ ಮಾತನಾಡುವುದನ್ನು ಅವರು ಕಲಿಯಬೇಕು…’ ಇದು ತಮ್ಮ ಹಾಗೂ ತಮ್ಮ ಕುಟುಂಬದವರ ಬಗ್ಗೆ ಟೀಕೆ ಮಾಡಿದ ಯಡಿಯೂರಪ್ಪ ಅವರ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ಮಾಡಿದ ಟೀಕೆ.

ಮಲ್ಲೇಶ್ವರಂನ ಅಪೊಲೊ ಆಸ್ಪತ್ರೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಹಾಗೂ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಅವರು ಮಾಡಿದ ಟೀಕೆ ಹೀಗಿದೆ…

‘ಪರ್ಸೆಂಟೆಜ್ ಪದ್ಧತಿ ಹುಟ್ಟುಹಾಕಿದ ಮಹಾನುಭಾವ ಯಡಿಯೂರಪ್ಪ. ಅವರು ನಮ್ಮ ಮೇಲೆ ಆರೋಪ ಮಾಡುವ ಮೊದಲು ತಾವು ಗಾಜಿನ ಮನೆಯಲ್ಲಿ ನಿಂತಿರುವುದನ್ನು ಮರೆಯಬಾರದು. ಅವರ ಇತಿಹಾಸ ನನಗೆ ಗೊತ್ತಿಲ್ವ? ಅಪ್ಪ ಮಕ್ಕಳನ್ನು ಜೈಲಿಗೆ ಕಳಿಸ್ತೀನಿ ಅಂತಾ ಹೇಳುತ್ತಾ ಅವರೇ ಜೈಲಿಗೆ ಹೋದರು. ಈಗ ಡಿಕೆ ಶಿವಕುಮಾರ್ ಅವರು ಎರಡು ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ ಅಂತಿದ್ದಾರೆ.

ಯಡಿಯೂರಪ್ಪ ನನಗಿಂತಲೂ ಹಿರಿಯರು. ಇನ್ನಾದರೂ ಅವರು ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡುವುದನ್ನು ಕಲಿಯಬೇಕು. ಅವರು ಬಳಸುವ ಪದಗಳ ಮೇಲೆ ಹಿಡಿತ ಇರಬೇಕು. ಅವರ ಆಡಳಿತದ ಅವಧಿಯಲ್ಲಿ ರಾಜ್ಯವನ್ನು ಲೂಟಿ ಮಾಡಲಾಗಿದೆ. ನಾವು ರಾಜ್ಯದ ಸಂಪತ್ತು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ರಾತ್ರಿ ವೇಳೆ ಫೋನ್ ಮಾಡಿ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಾರೆ. ನನಗೆ ಪ್ರತಿ ಮಾಹಿತಿಯೂ ಬರುತ್ತದೆ. ಸರ್ಕಾರವನ್ನು ಕೆಡವಲು ಇವರು ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ. ಅಲ್ಲಿ ಬೌರಿಂಗ್ ಇನ್ಸ್ ಟಿಟ್ಯೂಟ್ ನಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಶಿವಳ್ಳಿ ಅವರೊಂದಿಗೆ ಚರ್ಚೆ ನಡೆಯುತ್ತಿದೆ. ನಿನ್ನೆ ರಾತ್ರಿ ಕರೆ ಮಾಡಿ ತಮ್ಮ ಜತೆ ಬರಲು ಹೇಳುತ್ತಿದ್ದಾರೆ. 5 ಕೋಟಿ ಹಣ ನೀಡುತ್ತೇವೆ. 18ಕ್ಕೂ ಹೆಚ್ಚು ಶಾಸಕರು ನಮ್ಮ ಜತೆ ಬಂದಿದ್ದಾರೆ. ನೀವು ಬಂದುಬಿಡಿ. ಕೆಲವು ಶಾಸಕರನ್ನು ಪುಣೆ ರೆಸಾರ್ಟ್ ಗೆ ಕರೆದುಕೊಂಡು ಹೋಗುತ್ತೇವೆ. ನಂತರ ಮಿಲಿಟರಿ ಭದ್ರತೆಯೊಂದಿಗೆ ವಿಧಾನ ಸೌಂಧಕ್ಕೆ ಕರೆ ತರುತ್ತೇವೆ ಎಂದೆಲ್ಲಾ ಆಮಿಷ ನೀಡುತ್ತಿದ್ದಾರೆ. ಜತೆಗೆ ಶಿವಳ್ಳಿ ಅವರಿಗೂ ಇದೇ ರೀತಿ ಆಮಿಷ ತೋರಿಸುತ್ತಿದ್ದಾರೆ.’

Leave a Reply