ಪಾಕ್ ಸೇನೆ ನಮ್ಮ ಯೋಧರನ್ನು ಹತ್ಯೆ ಮಾಡುತ್ತಿದ್ದರೂ ಶಾಂತಿ ಮಾತುಕತೆಗೆ ಆಹ್ವಾನ ನೀಡುತ್ತಿರುವ ಇಮ್ರಾನ್!

ಡಿಜಿಟಲ್ ಕನ್ನಡ ಟೀಮ್:

ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ದಾಳಿ ಮೂಲಕ ಭಾರತೀಯ ಯೋಧರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡುತ್ತಿದ್ದರೂ ಇತ್ತ ಪ್ರಧಾನಿ ಇಮ್ರಾನ್ ಖಾನ್ ಶಾಂತಿ ಮಾತುಕತೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡುತ್ತಿದ್ದಾರೆ. ಈ ಮೂಲಕ ತಾನು ವಿಶ್ವಾಸಕ್ಕೆ ಯೋಗ್ಯನಲ್ಲ ಎಂದು ಪಾಕ್ ಮತ್ತೊಮ್ಮೆ ಸಾಬೀತುಪಡಿಸಿದೆ.

ನಿನ್ನೆಯಷ್ಟೇ ಕಾಶ್ಮೀರದ ಗಡಿಯಲ್ಲಿ ಭಾರತೀಯ ಯೋಧನ ಕುತ್ತಿಗೆ ಸೀಳಿ ಪಾಕ್ ಸೇನೆ ತನ್ನ ಕ್ರೌರ್ಯ ಮೆರೆದಿತ್ತು. ಇಂದು ಇಮ್ರಾನ್ ಖಾನ್ ಶಾಂತಿ ಮಾತುಕತೆ ನಡೆಸಲು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ‘ಎರಡೂ ದೇಶಗಳ ನಡುವಣ ಶಾಂತಿಯುತ ಮಾತುಕತೆ ಮತ್ತೆ ಆರಂಭವಾಗಿ ಪರಿಣಾಮಕಾರಿ ರೀತಿಯಲ್ಲಿ ನಡೆಯಬೇಕು. ಸದ್ಯದಲ್ಲಿ ವಿಶ್ವಸಂಸ್ಥೆ ಮಹಾಸಭೆ ಆರಂಭವಾಗಲಿದ್ದು, ಈ ವೇಳೆ ಉಭಯ ದೇಶಗಳ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಹಾಗೂ ಶಾಹ್ ಮೆಹಮೂದ್ ಖುರೇಶಿ ಅವರ ನಡುವೆ ಮಾತುಕತೆ ನಡೆಯಬೇಕು’ ಎಂದು ಮನವಿ ಮಾಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರು ಶೀಘ್ರದಲ್ಲೇ ಭೇಟಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಮಧ್ಯೆ ಇದೇ ಮೊದಲ ಬಾರಿಗೆ ಉಭಯದೇಶಗಳ ನಡುವಣ ಮಾತುಕತೆ ವಿಚಾರವಾಗಿ ಪಾಕಿಸ್ತಾನ ಮೊದಲ ಬಾರಿಗೆ ಅಧಿಕೃತ ಆಹ್ವಾನ ನೀಡಿದೆ. ಗಡಿಯಲ್ಲಿ ಯೋಧರು ಪ್ರಾಣ ಬಿಡುತ್ತಿರುವ ಹೊತ್ತಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನ ಆಹ್ವಾನ ಪುರಸ್ಕರಿಸುವುದೇ? ಎಂಬ ಪ್ರಶ್ನೆ ಉದ್ಭವಿಸಿದೆ.

Leave a Reply