ಡಿಕೆಶಿ ಜತೆ ಗುರುವಾರವೂ ಚರ್ಚೆ ನಡೆಸಿದ ರಮೇಶ್ ಜಾರಕಿಹೊಳಿ! ಏನಿದರ ಮಹತ್ವ?

ಡಿಜಿಟಲ್ ಕನ್ನಡ ಟೀಮ್:

ಮಲ್ಲೇಶ್ವರಂನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ನಿನ್ನೆಯಷ್ಟೇ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಮತ್ತೆ ಗುರುವಾರ ಮಧ್ಯಾಹ್ನ ಬಳ್ಳಾರಿ ಶಾಸಕ ನಾಗೇಂದ್ರ ಅವರ ಜತೆ ಆಗಮಿಸಿ ಒಂದು ತಾಸು ಮಾತುಕತೆ ನಡೆಸಿದರು.

ರಮೇಶ್ ಜಾರಕಿಹೊಳಿ ಅವರ ಈ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಆಪರೇಷನ್ ಕಮಲಕ್ಕೆ ಮಣಿದು ರಮೇಶ್ ಜಾರಕಿಹೊಳಿ ಗುರುವಾರ ಬೆಳಗ್ಗೆ ರಾಜಿನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ಡಿಕೆಶಿ ಅವರನ್ನು ಭೇಟಿಯಾದ ರಮೇಶ್ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ‘ನಾನು ರಾಜಿನಾಮೆ ನೀಡಿಲ್ಲ. ಕಾಂಗ್ರೆಸ್ ಬಿಟ್ಟು ಹೋಗಲ್ಲ. ಇದು ಕೇವಲ ವದಂತಿ’ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಪಕ್ಷದ ಹೈಕಮಾಂಡ್ ಮುಂದೆ ನಾಗೇಂದ್ರ ಅವರನ್ನು ಮಂತ್ರಿ ಮಾಡಬೇಕು, ನಾಯಕ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಕ್ಕೆ ಬಳ್ಳಾರಿ ಕಾಂಗ್ರೆಸ್ ನಾಯಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಹೀಗಾಗಿ ನಾಗೇಂದ್ರ ಅವರ ಜತೆಗೆ ಬಳ್ಳಾರಿ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಡಿಕೆಶಿ ಅವರನ್ನು ಭೇಟಿ ಮಾಡಿರುವುದರ ಹಿಂದೆ ಇರುವ ರಾಜಕೀಯ ಲೆಕ್ಕಾಚಾರಗಳ ಬಗ್ಗೆಯೂ ಚರ್ಚೆಯಾಗುತ್ತಿದೆ.

ನಾಗೇಂದ್ರ ಅವರಿಗೂ ಬಿಜೆಪಿ ಗಾಳ ಹಾಕಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಅದೇ ರೀತಿ ಬಿಜೆಪಿ ಸಂಪರ್ಕಿಸಿರುವ ಶಾಸಕರಾದ ಶಿವಳ್ಳಿ, ಸುರೇಶ್ ಗೌಡ ಮತ್ತಿತರರೂ ಶಿವಕುಮಾರ್ ಭೇಟಿ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

Leave a Reply