ಡಿಕೆಶಿ ಕಾಂಗ್ರೆಸ್ ಶಕ್ತಿ! ಬಿಜೆಪಿಯವರು ನಮ್ಮನ್ನು ಟಚ್ ಮಾಡಕ್ಕೆ ಆಗಲ್ಲ: ಕಂಪ್ಲಿ ಶಾಸಕ ಗಣೇಶ್

ಡಿಜಿಟಲ್ ಕನ್ನಡ ಟೀಮ್:

‘ಡಿಕೆ ಶಿವಕುಮಾರ್ ಅವರು ಬಂಡೆಗಲ್ಲಿನಂತೆ. ಕಾಂಗ್ರೆಸ್ ಗೆ ಅವರೊಂದು ಶಕ್ತಿ. ಅವರಿರುವಾಗ ಬಿಜೆಪಿಯವರು ನಮ್ಮನ್ನು ಟಚ್ ಕೂಡ ಮಾಡಲು ಸಾಧ್ಯವಿಲ್ಲ…’  ಇದು ಬಳ್ಳಾರಿಯ ಕಂಪ್ಲಿ ಶಾಸಕ ಗಣೇಶ್ ಅವರು ಶುಕ್ರವಾರ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಕೊಟ್ಟ ಹೇಳಿಕೆ.

ಬಳ್ಳಾರಿಯ ಎಲ್ಲಾ ಶಾಸಕರು ಒಟ್ಟಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವಕುಮಾರ್ ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ನ ಆರು ಮಂದಿ ಶಾಸಕರಿದ್ದೇವೆ. ಹೀಗಾಗಿ ನಮ್ಮ ಜಿಲ್ಲೆಗೊಂದು ಸಚಿವ ಸ್ಥಾನ ಬೇಕು. ಈ ಹಿಂದಿನಿಂದಲೂ ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ. ನಮಗೆ ಶಿವಕುಮಾರ್ ಅವರು ಇರುವುದರಿಂದ ಭಯವಿಲ್ಲ. ಅವರ ಮೇಲೂ ಸಾಕಷ್ಟು ಒತ್ತಡ ಇದೆ. ಆರು ಶಾಸಕರನ್ನು ಒಟ್ಟಾಗಿ ಕೂರಿಸಿಕೊಂಡು ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ಯಾರಿಗೇ ಸಚಿವ ಸ್ಥಾನ ಸಿಕ್ಕರೂ ಸಂತೋಷಪಡುತ್ತೇವೆ. ನಾವೆಲ್ಲರೂ ಒಟ್ಟಾಗಿದ್ದೇವೆ’ ಎಂದರು.

ಆಪರೇಷನ್ ಕಮಲಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯವರು ನನ್ನನ್ನು ಸಂಪರ್ಕಿಸಲು ಸಾಧ್ಯವೇ ಇಲ್ಲ. ನಾನು ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ. ದುರ್ಬಲ ಮನಸ್ಥಿತಿ ಇರುವವರನ್ನು ಮಾತ್ರ ಅವರು ಸಂಪರ್ಕಿಸುತ್ತಾರೆ. ನಾವೆಲ್ಲರೂ ಗಟ್ಟಿಯಾಗಿದ್ದೇವೆ. ಹೀಗಾಗಿ ಬಿಜೆಪಿ ಅವರು ನಮ್ಮನ್ನು ಟಚ್ ಕೂಡ ಮಾಡಲು ಆಗುವುದಿಲ್ಲ’ ಎಂದರು.

Leave a Reply