ಭಾರತ – ಪಾಕ್ ಮಾತುಕತೆ ರದ್ದು! ಪೈಶಾಚಿಕ ಕೃತ್ಯ ನಡೆಸಿದಕ್ಕೆ ಬಿಸಿ ಮುಟ್ಟಿಸಿದ ಕೇಂದ್ರ!

ಡಿಜಿಟಲ್ ಕನ್ನಡ ಟೀಮ್:

ಒಂದೆಡೆ ಭಾರತ ಮತ್ತು ಪಾಕಿಸ್ತಾನ ನಡುವಣ ಶಾಂತಿ ಮಾತುಕತೆ ಪುನರಾರಂಭಕ್ಕೆ ಮನವಿ ಪತ್ರ. ಮತ್ತೊಂದೆಡೆ ಗಡಿಯಲ್ಲಿ ಭಾರತೀಯ ಯೋಧರ ಬರ್ಬರ ಹತ್ಯೆ ಹಾಗೂ ಪಾಕ್ ಪ್ರಾಯೋಜಿತ ಉಗ್ರರಿಂದ ಕಾಶ್ಮೀರದಲ್ಲಿ ಪೊಲೀಸರ ಸರಣಿ ಹತ್ಯೆ ಮೂಲಕ ಮತ್ತೊಮ್ಮೆ ತನ್ನ ಕುತಂತ್ರ ಬುದ್ಧಿ ತೋರುತ್ತಿರುವ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಬಿಸಿ ಮುಟ್ಟಿಸಿದೆ.

ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿದ್ದ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆ (ಯುಎನ್‌ಜಿಸಿ)ಯಲ್ಲಿ ಭಾರತ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವರ ಭೇಟಿಯನ್ನು ಭಾರತ ರದ್ದುಗೊಳಿಸಿದೆ.

ಮೊನ್ನೆಯಷ್ಟೇ ಉಭಯ ದೇಶಗಳ ನಡುವಣ ಶಾಂತಿಯುತ ಮಾತುಕತೆ ಮತ್ತೇ ಆರಂಭಿಸಬೇಕು, ಎರಡೂ ದೇಶಗಳ ಸಂಬಂಧ ವೃದ್ಧಿಯಲ್ಲಿ ಹೊಸ ಅಧ್ಯಾಯ ಆರಂಭಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇದಕ್ಕೆ ಭಾರತ ಒಪ್ಪಿಗೆ ನೀಡಿ ಸೆ.27ರಂದು ನ್ಯೂಯಾರ್ಕ್ ನಲ್ಲಿ ಎರಡೂ ರಾಷ್ಟ್ರಗಳ ವಿದೇಶಾಂಗ ಸಚಿವರ ಭೇಟಿಗೆ ಒಪ್ಪಿತ್ತು. ಆದರೆ ಈಗ ಗಡಿಯಲ್ಲಿನ ಅಶಾಂತಿ ವಾತಾವರಣದಿಂದಾಗಿ ಭಾರತ ಮತ್ತೆ ಮಾತುಕತೆಯನ್ನು ರದ್ದು ಮಾಡಿ ಕಠಿಣ ನಿಲುವು ತೆಗೆದುಕೊಂಡಿದೆ.

ಇತ್ತೀಚೆಗೆ ಬಿಎಸ್‌ಎಫ್ ಯೋಧನ ಅಪಹರಿಸಿ ಕುತ್ತಿಗೆ ಸೀಳಿ ಹತ್ಯೆ ಮಾಡಿ ಅಮಾನವೀಯತೆ ಮೆರೆದಿತ್ತು. ಇನ್ನು ಪಾಕಿಸ್ತಾನ ಪ್ರಾಯೋಜಿತ ಉಗ್ರರು ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಮೂವರು ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದಾರೆ. ಭಾರತದ ವಿರುದ್ಧ ಪರೋಕ್ಷ ದಾಳಿ ಮಾಡುತ್ತಿರುವ ಪಾಕಿಸ್ತಾನದ ನಂಬಿಕೆಗೆ ಅರ್ಹವಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಹೀಗಾಗಿ ಉಭಯ ದೇಶಗಳ ವಿದೇಶಾಂಗ ಸಚಿವರ ನಡುವಿನ ಮಾತುಕತೆಗೆ ಭಾರತ ಎಳ್ಳುನೀರು ಬಿಟ್ಟಿದೆ.

Leave a Reply