ಪ್ರಧಾನಿ ನರೇಂದ್ರ ಮೋದಿರನ್ನು ಕಳ್ಳ ಎಂದ ರಾಹುಲ್‌ ಗಾಂಧಿ! ಬಿಜೆಪಿಯಿಂದ ತಿರುಗೇಟು!

ಡಿಜಿಟಲ್ ಕನ್ನಡ ಟೀಮ್:

‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚೌಕಿದಾರ (ಕಾವಲುಗಾರ) ಆಗುವುದಾಗಿ ಹೇಳಿದ್ದರು. ಆದರೆ ಈಗ ಕಾವಲುಗಾರನೇ ಕಳ್ಳ ಎಂಬುದು ನಮಗೆ ಮನವರಿಕೆಯಾಗಿದೆ…’ ಇದು ಚುನಾವಣಾ ಕಣವಾಗಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ನಡೆಸಿದ ವಾಗ್ದಾಳಿ.

ಆಡಳಿತ ವಿರೋಧಿ ಅಲೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಪರಯತ್ನದಲ್ಲಿರುವ ಕಾಂಗ್ರೆಸ್ ಅಧ್ಯಕ್ಷರು ಪ್ರಧಾನಿ ಅವರನ್ನು ಟೀಕಿಸುವ ಭರದಲ್ಲಿ ಅವರೊಬ್ಬ ‘ಕಳ್ಳ’ ಎಂದು ಕರೆದು ವಿವಾದಕ್ಕೆ ಸಿಲುಕಿದ್ದಾರೆ.

ರಾಜಸ್ಥಾನದಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಡುಂಗರ್‌ಪುರ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ರಾಹುಲ್, ರಾಫೆಲ್ ಡೀಲ್ ಹಾಗೂ ಮಲ್ಯ ಸಾಲ ತೀರಿಸದೇ ಪರಾರಿಯಾಗಿರುವುದನ್ನು ಉಲ್ಲೇಕಿಸುತ್ತಾ ‘ಹಿಂದೂಸ್ಥಾನದ ಕಾವಲುಗಾರ ಕಳ್ಳ’ ಎಂದಿದ್ದಾರೆ.
‘ದೇಶದ ಚೌಕಿದಾರ (ವಾಚ್‌ಮ್ಯಾನ್‌) ಆಗಲು ಬಯಸುತ್ತಿದ್ದಾರೆ. ಆದರೆ ಚೌಕಿದಾರನೇ ಕಳ್ಳ ಎಂಬುದು ನಮಗೆ ಮನವರಿಕೆಯಾಗಿದೆ. ದೇಶದ ಜನರೆಲ್ಲಾ ಚೌಕಿದಾರನೇ ಕಳ್ಳನಾಗಿದ್ದಾನೆ ಎಂದು ದನಿ ಎತ್ತುತ್ತಿದ್ದಾರೆ’ ಎಂದರು.

ರಾಹುಲ್ ಅವರ ಹೇಳಿಕೆಗೆ ಬಿಜೆಪಿಯಿಂದ ತಿರುಗೇಟು ನೀಡಲಾಗಿದ್ದು, ‘ಕಾಂಗ್ರೆಸ್‌ ನಾಯಕನಿಗೆ ಪ್ರಧಾನಿ ಹುದ್ದೆಯ ಕುರಿತು ಯಾವುದೇ ಗೌರವ ಇಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುಟುಕಿದ್ದಾರೆ.

Leave a Reply