ಡಿಜಿಟಲ್ ಕನ್ನಡ ಟೀಮ್:
ಜಮ್ಮು ಕಾಶ್ಮೀರ ಪೊಲೀಸರ ಸರಣಿ ಹತ್ಯೆ ಮಾಡಿ ಸರ್ಕಾರಿ ಕೆಲಸ ಬಿಡುವಂತೆ ಬೆದರಿಕೆ ಹಾಕುತ್ತಿದ್ದ ಉಗ್ರರಿಗೆ ಭಾರತೀಯ ಸೇನೆ ನರಕದ ದಾರಿ ತೋರಿಸಿದ್ದಾರೆ.
ಶುಕ್ರವಾರ ಮೂವರು ಪೊಲೀಸರನ್ನು ಹತ್ಯೆಗೈದಿದ್ದ ಉಗ್ರರು ಅಟ್ಟಹಾಸ ಮೆರೆದಿದ್ದರು. ಇಂದು ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹೊಡೆದುರುಳಿಸಿದೆ.
ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗಡಿ ದಾಟುವ ಮೂಲಕ ಪರಾರಿಯಾಗುವ ಪ್ರಯತ್ನದಲ್ಲಿದ್ದ ಐವರು ಲಷ್ಕರ್ ಉಗ್ರರನ್ನು ಸೇನೆ ಕೊಂದು ಹಾಕಿದೆ.
ಸೇನೆ ಜತೆ ಜಮ್ಮು-ಕಾಶ್ಮೀರ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದು, ಉಗ್ರರ ನಿದ್ದೆಗೆಡಿಸಿದೆ.
ಇತ್ತೀಚೆಗೆ ಭದ್ರತಾ ಪಡೆ, ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರಿ ನೌಕರರಾಗಿರುವ ಕಾಶ್ಮೀರಿಗರಿಗೆ ಬೆದರಿಕೆ ಹಾಕಿ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ನೀವು ಶೀಘ್ರದಲ್ಲಿ ಕೆಲಸ ಬಿಡದಿದ್ದರೆ, ನಿಮ್ಮ ಹಾಗೂ ನಿಮ್ಮ ಮನೆಯವರನ್ನು ನಿರ್ಣಾಮ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು.
ಅದರ ಭಾಗವಾಗಿ ಶುಕ್ರವಾರ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರರು ನಾಲ್ವರು ಪೊಲೀಸರನ್ನು ಅಪಹರಣ ಮಾಡಿ ಮೂವರನ್ನು ಕೊಂದು ಹಾಕಿದ್ದರು. ಒಬ್ಬರನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಿಸಲಾಗಿತ್ತು. ಈಗ ನಮ್ಮ ಸೇನೆ ಉಗ್ರರ ಬೇಟೆಯಾಡಿ ಪ್ರತೀಕಾರ ತೀರಿಸಿಕೊಂಡಿದೆ.