ಮೇಲ್ಮನೆ ಚುನಾವಣೆ; ಯುದ್ಧಕ್ಕಿಳಿಯದೆ ಸೋಲು ಒಪ್ಪಿಕೊಂಡ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭೆಯಿಂದ 3 ವಿಧಾನ ಪರಿಷತ್ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದೆ. ಇವತ್ತು ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಸೋಲು ಒಪ್ಪಿಕೊಂಡಿದೆ.

ಅಖಾಡಕ್ಕೆ ಇಳಿದು ಸೋಲುಂಡ ಬಳಿಕ ಅವಮಾನ ಅನುಭವಿಸುವುದಕ್ಕಿಂತ ಯುದ್ಧ ಮಾಡದೆ ಸೋಲು ಒಪ್ಪಿಕೊಳ್ಳುವುದೇ ಉತ್ತಮ ಎಂದು ಬಿಜೆಪಿ ನಾಯಕರು ತೀರ್ಮಾನ ಮಾಡಿರುವಂತೆ ಕಾಣುತ್ತಿದೆ.

ಬಿಜೆಪಿಯ ಈ ನಿರ್ಧಾರದಿಂದ ಮೈತ್ರಿ ಸರ್ಕಾರದ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಅಷ್ಟೇ ಬಾಕಿ ಉಳಿದಿದೆ.

ಕಾಂಗ್ರೆಸ್ ಎಂ.ಸಿ ವೇಣುಗೋಪಾಲ್ ಹಾಗೂ ನಸೀರ್ ಅಹಮ್ಮದ್ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ್ದು, ಉಪಮುಖ್ಯಮಂತಿ ಜಿ ಪರಮೇಶ್ವರ್, ಸಚಿವರಾದ ಕೆ.ಜೆ ಜಾರ್ಜ್, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಶಾಸಕರು, ಸಂಸದರ ಜೊತೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಜೆಡಿಎಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ ಅಂತಿಮ ಕ್ಷಣದವರೆಗೂ ಸರಿಯಾಗಲಿಲ್ಲ. ಕೊನೆಗೂ ಇಬ್ಬರು ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಸಿದ್ಧ ಇರುವಂತೆ ನಾಯಕರು ಸೂಚನೆ ನೀಡಿದ್ರು. ಹೀಗಾಗಿ ರಮೇಶ್ ಗೌಡ ಹಾಗೂ ಕೋನರೆಡ್ಡಿ ಇಬ್ಬರೂ ಬೇಕಾಗಿರುವ ಎಲ್ಲಾ ದಾಖಲೆಗಳೊಂದಿಗೆ ಸಿದ್ಧವಾಗಿ ವಿಧಾನಸೌಧದಲ್ಲಿ ಇದ್ರು. ಬಳಿಕ ಕೊನೇ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ರಮೇಶಗೌಡ ನಾಮಪತ್ರ ಸಲ್ಲಿಸಿದ್ರು. ವಿಶೇಷ ಅಂದ್ರೆ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಪಕ್ಷದಿಂದ ಯಾರೊಬ್ಬರೂ ಹಾಜರು ಇರಲಿಲ್ಲ.. ಏಕಾಂಗಿಯಾಗಿ ಆಗಮಿಸಿ ರಮೇಶಗೌಡ ನಾಮಪತ್ರ ಸಲ್ಲಿಸಿದ್ರು. ಈ ಮೂವರು ಅವಿರೋಧ ಆಯ್ಕೆಯಾಗಿದ್ದು, ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಆದ್ರೆ ಇನ್ನಿಬ್ಬರು ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ನಾಳೆ ನಾಮಪತ್ರ ಪರಿಶೀಲನೆ ಬಳಿಕ ಚುನಾವಣೆ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

ಪರಿಷತ್ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವೇಣುಗೋಪಾಲ್, ಮೊದಲ ಬಾರಿಗೆ ಸವಿತಾ ಸಮಾಜದ ನನ್ನನ್ನು ಗುರುತಿಸಿ ಪರಿಷತ್ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನ ಕಾಂಗ್ರೆಸ್ ಗುರುತಿಸುತ್ತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನನ್ನಂಥವರನ್ನ ಗುರುತಿಸಿದ್ದು ಕಟ್ಟಕಡೆಯ ಕಾರ್ಯಕರ್ತರನಿಗೆ ಒಳ್ಳೆಯ ಸಂದೇಶ ರವಾನೆಯಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ಗೆ ಕೋಟಿ ಕೋಟಿ ನಮಸ್ಕಾರ ಹೇಳ್ತೇನೆ.

ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಮೇಶಗೌಡ ಮಾತನಾಡಿ, ಕುಮಾರಣ್ಣ, ರೇವಣ್ಣ ಹಾಗೂ ದೇವೇಗೌಡರ ಆಶೀರ್ವಾದದಿಂದ ನಾನು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ವರಿಷ್ಠರ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ ಎಂದಿದ್ದಾರೆ. ಏಕಾಂಗಿಯಾಗಿ ನಾಮಪತ್ರ ಸಲ್ಲಿಸಿದ ವಿಚಾರದ ಬಗ್ಗೆ ಮಾತನಾಡಿ ಎಲ್ಲರೂ ಬೇರೆ ಬೇರೆ ಕೆಲಸದಿಂದ ಬ್ಯುಸಿಯಾಗಿದ್ದರಿಂದ ಬರಲಾಗಿಲ್ಲ. ಆದ್ರೆ ಸೂಚಕರಾಗಿ 10 ಜನ ಶಾಸಕರು ಸಹಿ ಮಾಡಿದ್ದಾರೆ. ಎಂದಿದ್ದಾರೆ.

ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸೇರಿದಂತೆ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ನಿನ್ನೆ ನಿರ್ಧಾರ ಕೈಗೊಂಡಿದ್ದ ಬಿಜೆಪಿ ಇವತ್ತು ವ್ಯತಿರಿಕ್ತ ನಿರ್ಧಾರಕ್ಕೆ ಬಂದಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನಾಯಕರಾದ ಅರವಿಂದ್ ಲಿಂಬಾವಳಿ, ಸಿ.ಪಿ ಯೋಗೇಶ್ವರ್, ರವಿಕುಮಾರ್, ಸಂಸದ ಪಿ.ಸಿ ಮೋಹನ್, ರವಿ ಸುಬ್ರಹ್ಮಣ್ಯ ಸೇರಿದಂತೆ ಹಲವು ಆಪ್ತ ನಾಯಕರ ಜೊತೆ ಚರ್ಚಿಸಿದ ಬಿಎಸ್‌ವೈ, ಸಂಖ್ಯಾಬಲದ ಕೊರತೆ ಹಿನ್ನೆಲೆಯಲ್ಲಿ ಸ್ಪರ್ಧೆಯಿಂದ ದೂರ ಉಳಿಯುವ ನಿರ್ಧಾರ ಮಾಡಿತು. ಗೆಲುವಿಗೆ ಬೇಕಾದ ಅಗತ್ಯ ಸಂಖ್ಯಾಬಲ ಕೊರತೆ ಇರೋದ್ರಿಂದ ಸೋಲು ನಿಶ್ಚಿತ. ಹೀಗಾಗಿ ಅಭ್ಯರ್ಥಿಗಳ ಕಣಕ್ಕಿಳಿಸಿ ಮುಖಭಂಗ ಅನುಭವಿಸುವುದಕ್ಕಿಂತ, ಅಭ್ಯರ್ಥಿಗಳನ್ನೆ ಕಣಕ್ಕಿಳಿಸದೆ ಸೋಲು ಒಪ್ಪಿಕೊಳ್ಳುವುದು ಒಳಿತು ಎಂಬ ನಿರ್ಧಾರಕ್ಕೆ ಬರಲಾಯ್ತು.

ನಂಬರ್ ಗೇಮ್‌ನಲ್ಲಿ ಬಿಜೆಪಿಗೆ ಸೋಲು..!

ನಂಬರ್ ಗೇಮ್‌ನಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗಿದೆ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯಾಬಲ 104 ಇದ್ದು, ಪರಿಷತ್‌ಗೆ ಮೂವರು ಅಭ್ಯರ್ಥಿ ಆಯ್ಕೆ ಮಾಡಲು 112 ಸದಸ್ಯರ ಮತಗಳ ಅವಶ್ಯಕತೆ ಇದೆ. ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು 8 ಶಾಸಕರ ಮತಗಳು ಕೊರತೆಯಾಗಿದ್ದು, ಕ್ರಾಸ್ ವೋಟಿಂಗ್ ಮೂಲಕ ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಖರೀದಿಗೆ ಯೋಜನೆ ರೂಪಿಸಿತ್ತು. ಆದ್ರೆ ಎರಡೂ ಪಕ್ಷಗಳು ತಮ್ಮ ತಮ್ಮ ಶಾಸಕರನ್ನ ಬಿಗಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ಹಾಕಲು ಯಾವ ಶಾಸಕರೂ ಮುಂದೆ ಬಾರಲಿಲ್ಲ. ಇವತ್ತು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಅಂತಿಮ ಕ್ಷಣದ ತನಕ ಬಿಜೆಪಿಗೆ ಯಾವ ಶಾಸಕರ ಭರವಸೆ ನೀಡಲಿಲ್ಲ ಆದ್ದರಿಂದ ಬಿಜೆಪಿ ಹಿಂದೆ ಸರಿಯುವ ನಿರ್ಧಾರ ಮಾಡಿದೆ ಎನ್ನಲಾಗಿದೆ. ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದ್ದ ಶಾಸಕರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾದ್ರು. ಅಂತಿಮವಾಗಿ ಸೋಲು ನಿಶ್ಚಯವಾಗ್ತಿದ್ದ ಹಾಗೆ ಬಿಜೆಪಿ ಕಣದಿಂದ ಹಿಂದೆ ಸರಿದಿದೆ.

Leave a Reply