3 ದಿನಗಳ ಕಾಲ ಜೈಲಲ್ಲಿ ಕರಿ ಚಿರತೆ ವಿಲವಿಲ..!

ಡಿಜಿಟಲ್ ಕನ್ನಡ ಟೀಮ್:

ದುನಿಯಾ ಸಿನಿಮಾ ಮೂಲಕ ಜನರ ಮನಸ್ಸಲ್ಲಿ ಮನೆ ಮಾಡಿದ್ದ ನಟ ವಿಜಯ್, ಇದೀಗ ನಿಜ ಜೀವನದಲ್ಲಿ ಜೈಲು ಪಾಲಾಗಿದ್ದಾರೆ. ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡನ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಕಿಡ್ನಾಪ್ ಕೇಸ್‌ನಲ್ಲಿ ನಟ ದುನಿಯಾ ವಿಜಯ್ ಜೈಲು ಸೇರಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ 8ನೇ ಎಸಿಎಂಎಂ ಕೋರ್ಟ್ ಜಾಮೀನು ಅರ್ಜಿಯನ್ನು ಇದೇ ತಿಂಗಳ 26ಕ್ಕೆ ಮುಂದೂಡಿಕೆ ಮಾಡಿದೆ. ಇಂದು ದುನಿಯಾ ವಿಜಯ್ ಪರ ವಕೀಲರು ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ರು. ಆದ್ರೆ ಇದೊಂದು ಅಮಾನವೀಯ ಘಟನೆಯಾಗಿದ್ದು, ನಟ ವಿಜಯ್ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಹೀಗಾಗಿ ಜಾಮೀನು ನೀಡಬಾರದು ಎಂದು ಪೊಲೀಸ್ರು ಕೋರ್ಟ್‌ಗೆ ಮನವಿ ಮಾಡಿದ್ರು.

ಪೊಲೀಸ್ರು ಏನೆಲ್ಲಾ ಆಕ್ಷೇಪಣೆ ಸಲ್ಲಿಸಿದ್ರು ಅನ್ನೋದನ್ನು ನೋಡೋದಾದ್ರೆ..

* ಆರೋಪಿಗಳು ಗಾಂಜಾ ಸೇವಿಸಿ ಹಲ್ಲೆ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ.
* ರಕ್ತ ಮಾದರಿ ಸಂಗ್ರಹಿಸಲಾಗಿದೆ, ಜಾಮೀನು ಮಂಜೂರು ಆದ್ರೆ ಕಷ್ಟವಾಗುತ್ತೆ.
* ಆರೋಪಿ ಪದೇ ಪದೇ ಇದೇ ರೀತಿಯ ಗಲಾಟೆಯಲ್ಲಿ ಭಾಗಿಯಾಗ್ತಿದ್ದಾನೆ.
* ಇದೇ ರೀತಿಯ ಗಲಾಟೆಯಲ್ಲಿ 3 ಬಾರಿ ಸ್ಟೇಷನ್ ಬೇಲ್ ಪಡೆದಿದ್ದಾರೆ.
* ಈ ಬಾರಿಯೂ ಜಾಮೀನು ಸಿಕ್ಕರೆ ಕಾನೂನು ಭಯ ಹೊರಟು ಹೋಗುತ್ತೆ.
* ಸಮಾಜದಲ್ಲಿ ಪ್ರಭಾವ ಬೀರಬಲ್ಲ ವ್ಯಕ್ತಿ ಆಗಿರೋದ್ರಿಂದ ಸಾಕ್ಷಿ ನಾಶ ಸಾಧ್ಯತೆ.
* ಪೊಲೀಸ್ ಠಾಣೆ ಮುಂದೆಯೇ ದೊಡ್ಡ ಗಲಾಟೆ ಮಾಡಿದ್ದಾನೆ.

ಇಷ್ಟು ಅಂಶಗಳನ್ನು ಪಟ್ಟಿ ಮಾಡಿದ ಹೈಗ್ರೌಂಡ್ಸ್ ಪೊಲೀಸ್ರು ಜಾಮೀನು ನೀಡದಂತೆ ನ್ಯಾಯಾಧೀಶರ ಎದುರು ಮನವಿ ಮಾಡಿದ್ರು. ಜೊತೆಗೆ ದುನಿಯಾ ವಿಜಿ ಸೇರಿದಂತೆ ಆರೋಪಿಗಳ ಪರ ವಕೀಲರು ಆರೋಪಿಗಳು ಯಾವುದೇ ದುರುದ್ದೇಶದಿಂದ ಹಲ್ಲೆ ಮಾಡಿಲ್ಲ, ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳದಲ್ಲಿ ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ. ನೇರವಾಗಿ ಆರೋಪಿ ಸ್ಥಾನದಲ್ಲಿ ಇರುವವರು ಹಲ್ಲೆ ಮಾಡಿಲ್ಲ ಎಂದು ವಾದಿಸಿದ್ರು. ಪೊಲೀಸರ ಪರ ಹಾಗೂ ಆರೋಪಿಗಳ ವಕೀಲರ ವಾದ ಆಲಿಸಿದ ಜಡ್ಜ್, ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಹೀಗಾಗಿ ಚಂಡ ಖ್ಯಾತಿಯ ನಟ ಕರಿಚಿರತೆ ವಿಜಯ್ ಇನ್ನೂ ಮೂರು ದಿನಗಳ ಕಾಲ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆ.

ಏನಿದು ಪ್ರಕರಣ..?
ಮೊನ್ನೆ ಶನಿವಾರ ರಾತ್ರಿ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡರ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದುನಿಯಾ ವಿಜಯ್ ಕೂಡ ತನ್ನ ಸಹಚರರ ಜೊತೆ ಆಗಮಿಸಿದ್ರು. ಇನ್ನು ಕಾರ್‍ಯಕ್ರಮ ನೋಡಲು ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಕೂಡ ಆಗಮಿಸಿದ್ರು. ಈ ವೇಳೆ ಪಾನಿಪೂರಿ ಕಿಟ್ಟಿ ಮೇಲಿನ ದ್ವೇಷದಿಂದ ಮಾರುತಿಗೌಡನನ್ನು ವಿಜಯ್ ಹಾಗೂ ಆತನ ಸಹಚರರು ರೇಗಿಸಿದ್ದಾರೆ, ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಅವರನ್ನು ವಿರೋಧಿಸಿದ್ದಕ್ಕೆ ಬೆಂಬಲಿಗರ ಜೊತೆ ಸೇರಿಕೊಂಡು ಹಿಗ್ಗಾಮುಗ್ಗಾ ಬಾರಿಸಿ. ಒಂದೂವರೆ ಗಂಟೆಗಳ ಕಾಲ ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿದ್ದಾರೆ. ಬಳಿಕ ಕಂಪ್ಲೆಂಟ್ ಆದ ಮೇಲೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಅನ್ನೋದು ಆರೋಪ. ಠಾಣೆಗೆ ಬರುವ ಮುಂಚೆ, ದುನಿಯಾ ವಿಜಯ್ ಹಲ್ಲೆ ಮಾಡಿಲ್ಲ, ಅಭಿಮಾನಿಗಳು ಹೊಡೆದರು, ವಿಜಯ್ ಬಿಡಿಸಿ ಕರೆದುಕೊಂಡು ಬಂದರು ಎಂದು ಬೆದರಿಸಿ ವೀಡಿಯೋ ಕೂಡ ಮಾಡಿದ್ದಾರೆ ಎಂದು ದೂರಲಾಗಿದೆ. ಒಟ್ಟಾರೆ ತೆರೆ ಮೇಲಿನ ಹೀರೋ ತಾನು ನಡೆದು ಬಂದ ಕಷ್ಟದ ದಿನಗಳನ್ನು ಮರೆತರೆ ಏನಾಗಲಿದೆ ಅನ್ನೋದಕ್ಕೆ ದುನಿಯಾ ವಿಜಯ್ ಕೂಡ ಸಾಕ್ಷಿ ಎಂದರೆ ತಪ್ಪಾಗಲ್ಲ.

Leave a Reply