ಆಪರೇಷನ್ ಕಮಲ; ಕೊಟ್ಟವನು ಕೋಡಂಗಿ, ಈಸಿಕೊಂಡವನು ಈರಭದ್ರ!

ದುರ್ಗ

ಈ ಹಿಂದೆ ಅಡಿಗಡಿಗೂ ತಮ್ಮೊಂದಿಗಿದ್ದ ಸಹೋದ್ಯೋಗಿ ಪ್ರತಿಭೆಗಳನ್ನು ಪಕ್ಕಕ್ಕಿಟ್ಟು ಚಿತ್ರಕತೆ, ಸಂಭಾಷಣೆ, ಹಿನ್ನೆಲೆ ಸಂಗೀತ, ನಿರ್ಮಾಣ, ನಿರ್ದೇಶನ, ಪ್ರಚಾರ, ಪ್ರಸಾದನ – ಈ ಎಲ್ಲ ಜವಾಬ್ದಾರಿಯನ್ನೂ ಏಕಾಂಗಿಯಾಗಿ ಮೈಮೇಲೆ ಎಳೆದುಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಬಹುನಿರೀಕ್ಷಿತ ‘ಆಪರೇಷನ್ ಕಮಲ’ ಚಲನಚಿತ್ರ ಬಿಡುಗಡೆಗೆ ಮೊದಲೇ ‘ಸೂಪರ್ ಡೂಪರ್’ ಆಗಿ ಮಗುಚಿ ಬಿದ್ದಿದೆ.

ಮುಂಬರುವ ಲೋಕಸಭೆ ಚುನಾವಣೆ ನಂತರ ತಮ್ಮ ರಾಜಕೀಯ ಭವಿಷ್ಯ ಎಂತೋ-ಏನೋ, ಅದಕ್ಕೆ ಮೊದಲು ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಲೇಬೇಕೆಂದು ಯಡಿಯೂರಪ್ಪನವರು ಹಿಡಿದಿರುವ ಹಠಕ್ಕೆ‘ರಾಜಕೀಯ ಶಕುನ’ಗಳು ಸಹಕರಿಸುತ್ತಿಲ್ಲ. ದಿಲ್ಲಿ ವರಿಷ್ಠರ ಕೃಪಾಕಟಾಕ್ಷವೂ ಸಿಕ್ಕಿಲ್ಲ, ಜತೆಗೆ ರಾಜ್ಯದ ಹಿರಿಯ ನಾಯಕರ ವಿಶ್ವಾಸವನ್ನೂ ದಕ್ಕಿಸಿಕೊಂಡಿಲ್ಲ. ಒಂದಿಬ್ಬರು ‘ಲೈಟ್’ ಬಾಯ್ಸ್, ಒಬ್ಬರು ಕ್ಯಾಮರಾ ವುಮೆನ್, ಕೆಲವು ‘ಸಪ್ಲೈಯರ್ಸ್’ ಮುಂದಿಟ್ಟಿಕೊಂಡು ಚಿತ್ರ ಮಾಡಲು ಹೋದ ಯಡಿಯೂರಪ್ಪನವರು ‘ಕೈ’ ಸುಟ್ಟುಕೊಂಡಿದ್ದಾರೆ.

ರಾಜ್ಯದ ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮೇಲೆ ಯಡಿಯೂರಪ್ಪನವರ ‘ಸರ್ಜಿಕಲ್ ಸ್ಟೈಕ್’ ಸಾಕಷ್ಟು ಪೂರ್ವಸಿದ್ಧತೆ ಕೊರತೆಯಿಂದ ‘ಯೂ ಟರ್ನ್’ ತೆಗೆದುಕೊಂಡಿದೆ. ಕೇವಲ ನಾಲ್ಕು ತಿಂಗಳಲ್ಲಿ ಎರಡು ಬಾರಿ ಸರಕಾರ ರಚನೆಗೆ ವಿಫಲ ಯತ್ನ ನಡೆಸಿ ನಗೆಪಾಟಲಿಗೆ ಒಳಗಾಗಿದ್ದಾರೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ, ಮತ್ತೆ ಮಾಡುತ್ತಿರುವ ಯತ್ನಕ್ಕೆ ಹೆಗಲಿಗೆ ಜೋತುಬೀಳುವ ಬೇತಾಳವಷ್ಟೇ ಸಿಕ್ಕಿರೋ ಫಲ. ಸಿಎಂ ಆಗಬೇಕೆಂಬ ಅವರ ಹೆಬ್ಬಯಕೆಗೆ ಅಂಕಿ-ಸಂಖ್ಯೆಗಳ ಬೆಂಬಲ ಇಲ್ಲದಿರುವುದರಿಂದ ಸ್ವಪಕ್ಷೀಯರೇ ಒಳಗೊಳಗೇ ಮುಸಿಮುಸಿ ನಗುತ್ತಿದ್ದಾರೆ.

ಒಂದೆಡೆ ರಾಜ್ಯ ಸರಕಾರದ ಹೆಬ್ಬಂಡೆಯಾಗಿ ನಿಂತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಹಣಿಯುವ, ಇನ್ನೊಂದೆಡೆ ‘ಆಪರೇಷನ್ ಕಮಲ’ದ ಮೂಲಕ ಮೈತ್ರಿ ಸರಕಾರ ಅಸ್ಥಿರಗೊಳಿಸುವ – ಏಕಕಾಲಿಕ ಎರಡೆರಡು ಅಸ್ತ್ರಗಳ ಪ್ರಯೋಗದಿಂದ ಸಿಎಂ ಆಗಬೇಕೆಂಬ ಅದಮ್ಯ ಬಯಕೆ ಹೊಂದಿರುವ ಯಡಿಯೂರಪ್ಪನವರು ಅದಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ಸಿನ ಸಾಕಷ್ಟು ಮಂದಿಯನ್ನು ನೇರವಾಗಿ, ತಮ್ಮ ಹಿಂಬಾಲಕರ ಮೂಲಕ ಸಂಪರ್ಕಿಸಿದ್ದಾರೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸಾರಥ್ಯ. ಮಾಜಿ ಸಚಿವ ಸಿ.ಪಿ.ಯೋಗೀಶ್ವರ, ಶಾಸಕ ಡಾ. ಅಶ್ವತ್ಧನಾರಾಯಣ ಮತ್ತಿತರರ ಕಾರ್ಯಾಚರಣೆ. ಎಲ್ಲ ಶಾಸಕರಿಗೂ ಒಂದೇ ಡೈಲಾಗ್ – ‘ಈಗಾಗಲೇ 18 ಮಂದಿ ರೆಡಿ ಆಗಿದ್ದಾರೆ. ನೀವು ಬಂದರೆ 19ನೇಯವರು. ನೀವು ಈಗಲೇ ಬಂದರೆ ಕೋಟ್ಯಂತರ ಹಣದ ಜತೆಗೆ ಸಂಪುಟದಲ್ಲಿ ಸ್ಥಾನ. ತಡಮಾಡಿದರೆ ಸಚಿವರಾಗೋದು ಡೌಟು. ಆಮೇಲೆ ಕೈ-ಕೈ ಹಿಸುಕಿಕೊಳ್ಳಬೇಡಿ.’

ಆದರೆ ಇಂಥ ‘ಆಫರ್’ ಪಡೆದವರೇನೂ ರಾಜಕೀಯದಲ್ಲಿ ಚಳ್ಳೆ-ಪಿಳ್ಳೆಗಳಲ್ಲ. ಅವರಿಗೂ ಅವರದೇ ಆದ ಸಂಪರ್ಕಗಳಿವೆ. ಅವರಿಗೆ ಸಿಕ್ಕಿರುವ ಮಾಹಿತಿ ಕೇವಲ ಆರು ಮಂದಿ ಮಾತ್ರ ಯಡಿಯೂರಪ್ಪನವರ ಗಾಳಕ್ಕೆ ಸಿಕ್ಕಿದ್ದಾರೆ. 30 ರಿಂದ 50 ಕೋಟಿ ರುಪಾಯಿವರೆಗೂ ‘ತಲೆಬೆಲೆ’ ನಿಗದಿ ಮಾಡಿ,ಐದರಿಂದ ಹತ್ತು ಕೋಟಿ ರುಪಾಯಿವರೆಗೂ ಅಡ್ವಾನ್ಸ್ ಪೇಮೆಂಟ್ ಕೂಡ ಮಾಡಲಾಗಿದೆಯಂತೆ. ಆದರೆ 18, 19 ಮಂದಿ ಶಾಸಕರು ರೆಡಿ ಆಗಿದ್ದಾರೆ ಎಂಬುದೆಲ್ಲ ಸುಳ್ಳು. ಹೀಗಾಗಿ, ‘18 ಮಂದಿ ತೋರಿಸಿ, ಆಮೇಲೆ ರೆಸಾರ್ಟ್ಗೆ ಬರುತ್ತೇವೆ’ ಎಂದು ಅಡ್ವಾನ್ಸ್ ಪಡೆದವರು ನುಣುಚಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅದೆಲ್ಲಿಂದ 18 ಶಾಸಕರನ್ನು ತಂದು ತೋರಿಸುತ್ತಾರೆ?ಅಷ್ಟು ಮಂದಿ ಇದ್ದರೇ ತಾನೇ? ಇದ್ದಿದ್ದರೆ ಇಷ್ಟೊತ್ತಿಗೆ ಸರಕಾರ ಬಿದ್ದೋಗಿ ಎಷ್ಟೋ ದಿನವಾಗಿರುತ್ತಿತ್ತು. ಅಡ್ವಾನ್ಸ್ ಪೇಮೆಂಡ್ ಪಡೆದವರು,‘ಕೊಟ್ಟವನು ಕೋಡಂಗಿ, ಈಸಿಕೆಂಡವನು ಈರಭದ್ರ’ ಎಂಬಂತೆ ‘ದಿಮ್ಮಾಲೆ ರಂಗ’ ಅಂತ ತಮ್ಮ-ತಮ್ಮ ‘ರೆಸ್ಪೆಕ್ಟಡ್ ಪಾರ್ಟಿ’ಯಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಬಿಜೆಪಿ ಸ್ಥಿತಿ ‘ಕಾಸೂ ಬೋಳು, ಮಂಡೆಯೂ ಬೋಳು’ ಎಂಬಂತಾಗಿದೆ.

ಕಾಸೀಸಿಕೊಂಡ ಶಾಸಕರಿಗೂ ಚೆನ್ನಾಗಿ ಗೊತ್ತು. ಯಡಿಯೂರಪ್ಪನವರ ಮಾತು ಕೇಳಿ ರಾಜೀನಾಮೆ-ಗೀಜಿನಾಮೆ ಕೊಟ್ರೆ, ರೆಸಾರ್ಟ್-ಗಿಸಾರ್ಟ್ ಅಂತ ಹೋದರೆ, ಕಾಂಗ್ರೆಸ್-ಜೆಡಿಎಸ್ ಮುಖಂಡರು ‘ರಿವರ್ಸ್ ಆಪರೇಷನ್’ ಮಾಡೋದಲ್ಲದೆ, ಚುನಾವಣೆಯಲ್ಲಿ ತಮ್ಮನ್ನು ಮಟ್ಟಸವಾಗಿ ಬಲಿ ಹಾಕುತ್ತಾರೆ ಅಂತ. ಒಂದೊಂದು ಪಾರ್ಟಿಯವರನ್ನೇ ಎದುರಿಸೋದು ಕಷ್ಟ. ಹೀಗಿರುವಾಗ ಕಾಂಗ್ರೆಸ್-ಜೆಡಿಎಸ್ ಸಂಗಮ ಪ್ರವಾಹದ ವಿರುದ್ಧ ಈಸಲಾದೀತೇ? ತಮ್ಮ ಪಾಡು ಅಳಿವೆಗೆ ಸಿಕ್ಕ ನಾಯಿಮರಿಯಂತಾಗುವುಲ್ಲವೇ ಅಂತ ಹುಷಾರಾಗಿ ಹೋಗಿದ್ದಾರೆ.ಮೇಲಾಗಿ ಚುನಾವಣೆ ರಾಜಕೀಯ ಭವಿಷ್ಯವನ್ನೇ ಪಣವಾಗಿಡುವಷ್ಟು ಮೂರ್ಖರೂ ಅವರಲ್ಲ. ಏನೋ ಅಪ್ರಯತ್ನಪೂರ್ವಕವಾಗಿ ನಾಲ್ಕು ಕಾಸು ಬಂತು ಅಂತ ಬೆಂಡು-ಬತಾಸು ಮೆಲ್ಲುತ್ತಿದ್ದಾರೆ. ಹಾಗಂತ ರಾಜಕೀಯ ಪಡಸಾಲೆಯಲ್ಲಿ ಅವರೇ ಪರಿಹಾಸ್ಯ ಮಾಡಿಕೊಂಡು ತಿರುಗುತ್ತಿದ್ದಾರೆ. ಇವರಿಗಾಗುವ ಗತಿಯೇ ತಮಗೂ ಆಗುತ್ತದೆ ಎಂದು ಎಚ್ಚೆತ್ತಿರುವ ಇತರ ಶಾಸಕರು ‘ಆಪರೇಷನ್ನೂ ಬೇಡ, ಈ ಯಡಿಯೂರಪ್ಪನವರ ಸಹವಾಸವೂ ಬೇಡ. ಇರೋ ಎಂಎಲ್ಎ ಗಿರಿ ಉಳಿಸಿಕೊಂಡು ಹೆಂಗೋ ರಾಜಕೀಯ ಮಾಡಿಕೊಂಡು ಹೋಗೋಣ’ ಅಂತ ತೆಪ್ಪಗಾಗಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ಯಡಿಯೂರಪ್ಪನವರ ಏಕಪಕ್ಷೀಯ ರಣಾತುರ ದಿಲ್ಲಿ ಹಾಗೂ ರಾಜ್ಯ ಬಿಜೆಪಿ ನಾಯಕರನ್ನು ಕಂಗೆಡಿಸಿದೆ, ಕೆಂಗಣ್ಣಾಗಿಸಿದೆ.‘ಜಾರಿ ಬೀಳೋದನ್ನೆ ಜಾರುಬಂಡೆ ಆಟ’ ಮಾಡಿಕೊಂಡಿರುವ ಯಡಿಯೂರಪ್ಪನವರು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಪಕ್ಷದ ಮಾನ ಮತ್ತು ವರ್ಚಸ್ಸು ಎರಡನ್ನೂ ಹರಾಜು ಹಾಕುತ್ತಿದ್ದಾರೆ ಎಂದು ಒದ್ದಾಡುತ್ತಿದ್ದಾರೆ. ಆವರ ಆತಂಕಕ್ಕೆ ಸಕಾರಣಗಳು ಇಲ್ಲದಿಲ್ಲ. ಈವರೆಗೂ ಯಡಿಯೂರಪ್ಪನವರು ತಾವೇನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ರಾಜ್ಯದ ಹಿರಿಯ ನಾಯಕರ ಜತೆ ಸಮಾಲೋಚನೆಯನ್ನೇ ಮಾಡಿಲ್ಲ. ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಷಿ, ಈಶ್ವರಪ್ಪ, ಅಶೋಕ್, ಸಂತೋಷ್, ಸುರೇಶ್ ಕುಮಾರ್, ಸಿ.ಟಿ. ರವಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಂಥ ದಿಗ್ಗಜರನ್ನು ಆಪರೇಷನ್ ಕಮಲ ಕಾರ್ಯಾಚರಣೆ ಚೌಕಟ್ಟಿಗೆ ಬಿಟ್ಟುಕೊಂಡಿಲ್ಲ. ಇದಕ್ಕೆ ಕಾರಣ ಬರೀ ಅನುಮಾನ. ಇವರೆಲ್ಲ ಎಲ್ಲಿ ತಮ್ಮ ಕಾರ್ಯತಂತ್ರಕ್ಕೆ ಕಲ್ಲಾಕುತ್ತಾರೋ ಎಂಬ ವಿಕಲ್ಪ ಭೀತಿ. ಹಿಂದೆಲ್ಲ ಯಾರ ಕಾರಣಕ್ಕೆ ಇವರೆಲ್ಲ ಯಡಿಯೂರಪ್ಪನವರಿಂದ ಅಂತರ ಕಾಯ್ಡುಕೊಂಡಿದ್ದರೋ, ಆ ಶೋಭಾ ಕರಂದ್ಲಾಜೆ ಅವರನ್ನೇ ಈಗಲೂ ಯಡಿಯೂರಪ್ಪನವರು ‘ವಿಶ್ವಾಸದ ಗಣಿ’ಎಂದು ಭಾವಿಸಿರುವುದು ಅನ್ಯ ನಾಯಕರಲ್ಲಿ ಬೇಸರ ಮೂಡಿಸಿದೆ. ಹಾಗಾದರೆ ‘ಪಕ್ಷದಲ್ಲಿ ನಾವೆಲ್ಲರೂ ಏನೂ ಅಲ್ಲವೇ’ ಎಂಬ ದಿಗ್ಮೂಢತೆಗೆ ಒಳಗಾಗಿರುವ ಈ ನಾಯಕರೆಲ್ಲ ‘ಆಪರೇಷನ್ ಕಮಲ’ ಪ್ರಕ್ರಿಯೆಗೂ ತಮಗೂ ಸಂಬಂಧವಿಲ್ಲ ಎಂಬಂತೆ ದೂರ ಉಳಿದಿದ್ದಾರೆ. ‘ಸುಖಾಸುಮ್ಮನೆ ಆಗದ ಕೆಲಸಕ್ಕೆ ಕೈ ಹಾಕಿ ಮುಖಕ್ಕೆ ಕೆಸರು ಬಳಿದುಕೊಳ್ಳುವುದು ಏಕೆ?ಒಂದೊಮ್ಮೆ ಯಡಿಯೂರಪ್ಪನವರ ‘ಗೆರಿಲ್ಲಾ ಸಮರ’ಕ್ಕೆ ಜಯ ಸಿಕ್ಕರೆ ಆಮೇಲೆ ನೋಡಿಕೊಂಡರಾಯಿತು’ ಎಂಬುದು ಅವರ ಮನದಿಂಗಿತ.

ಎಲ್ಲಕ್ಕಿಂತ ಮಿಗಿಲಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಲಿ, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ಯಡಿಯೂರಪ್ಪನವರ ಕಾರ್ಯಾಚರಣೆಗೆ ಅಸ್ತು ಎಂದಿಲ್ಲ. ಬದಲಿಗೆ ಲೋಕಸಭೆ ಚುನಾವಣೆ ಮೇಲೆ ಇದರಿಂದ ಆಗಬಹುದಾದ ಹಾನಿ ಬಗ್ಗೆ ಅವರೆಲ್ಲ ಚಿಂತಿತರಾಗಿದ್ದಾರೆ. ಈ ಬಗ್ಗೆ ರಾಜ್ಯದ ಆಯ್ದ ನಾಯಕರಿಂದ ಮಾಹಿತಿಯನ್ನೂ ಪಡೆದಿದ್ದಾರೆ. ಅವರೆಲ್ಲರೂ ನಕಾರಾತ್ಮಕ ವರದಿಯನ್ನೇ ಕೊಟ್ಟಿದ್ದಾರೆ. ಮಾಹಿತಿ ಪಡೆಯುವಾಗ ಯಡಿಯೂರಪ್ಪನವರ ‘ಲಿಮಿಟೆಡ್ ಎಡಿಷನ್’ ಬಳಗವನ್ನು ನಿರ್ಲಕ್ಷಿಸಿದ್ದಾರೆ. ಸಿಕ್ಕ ಮಾಹಿತಿ ಆಧರಿಸಿ ‘ಏನು ದಬ್ಬಾಕಿದಿರಿ..ಯಡಿಯೂರಪ್ಪನವರೇ..?’ ಎಂದು ತರಾಟೆಗೂ ತೆಗೆದುಕೊಂಡಿದ್ದಾರೆ.

ಆತುರಕ್ಕೆ ಬಿದ್ದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ, ವಿಶ್ವಾಸಮತ ಸಾಬೀತುಪಡಿಸಲಾಗದೆ ಒಂದೂವರೇ ದಿನಕ್ಕೆ ರಾಜೀನಾಮೆ ಕೊಟ್ಟ ಯಡಿಯೂರಪ್ಪನವರು ಈಗ ನಾಲ್ಕೇ ತಿಂಗಳಲ್ಲಿ ಮತ್ತೊಂದು ಬಾರಿ ಎಡವಿ ಬಿದ್ದಿದ್ದಾರೆ. ಸಿಎಂ ಆಗೋದಿರಲಿ, ಇರೋ ಮರ್ಯಾದೆಯನ್ನು ಕಳೆದುಕೊಂಡು, ಪಕ್ಷದ ವರ್ಚಸ್ಸನ್ನೂ ಶ್ರೀರಾಮನವಮಿ ಪಾನಕದಂತೆ ದಾರೀಲಿ ಹೋಗೋರು, ಬರೋರಿಗೆಲ್ಲ ಹಂಚಿ, ತಮ್ಮ ರಾಜಕೀಯ ಬದುಕಿನ ಇಳಿಸಂಜೆಯಲ್ಲಿ ನೋವು,ಅವಮಾನ, ಹತಾಶೆ, ಮುಜುಗರದಲ್ಲಿ ಇನ್ನಿಲ್ಲದಂತೆ ಬೇಯುತ್ತಿದ್ದಾರೆ!

Leave a Reply