ಗರ್ಭಾವಸ್ಥೆಯಲ್ಲಿ ‘ಡೌನ್ ಸಿಂಡ್ರೋಮ್’ (ಬುದ್ಧಿಮಾಂದ್ಯತೆ) ಪತ್ತೆ ಹಚ್ಚುವುದು ಹೇಗೆ?

ಡಾ.ಬಿ.ರಮೇಶ್
ಪ್ರತಿಯೊಬ್ಬ ದಂಪತಿಗಳು ತಮಗೆ ಆರೋಗ್ಯವಂತ ಮಗು ಜನಿಸಬೇಕೆಂಬ ಅಪೇಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲ ಕುಟುಂಬಗಳಲ್ಲಿ ಬುದ್ಧಿಮಾಂದ್ಯ ಮಕ್ಕಳು ಜನಿಸಿ ಆ ಕುಟುಂಬದ ಸ್ಥಿತಿ ಅಯೋಮಯವಾಗುತ್ತದೆ. ಬುದ್ಧಿಮಾಂದ್ಯ ಸ್ಥಿತಿಯಲ್ಲಿ ಜನಿಸುವ ಮಕ್ಕಳನ್ನು ವೈದ್ಯ ಭಾಷೆಯಲ್ಲಿ ಡೌನ್ ಸಿಂಡ್ರೋಮ್ಎಂದು ಹೇಳಲಾಗುತ್ತದೆ.

ಏನಿದು ಡೌನ್ ಸಿಂಡ್ರೋಮ್?
ಗರ್ಭಾವಸ್ಥೆಯಲ್ಲಿರುವಾಗಲೇ ಬೆಳವಣಿಗೆಯ ಹಂತದಲ್ಲಿ ಕ್ರೋಮೋಸೋಮು ಅಥವಾ ವರ್ಣತಂತುಗಳ ದೋಷದಿಂದ ಡೌನ್ ಸಿಂಡ್ರೋಮ್ಸ್ಥಿತಿ ಉಂಟಾಗುತ್ತದೆ. ಇದನ್ನು ಟ್ರೈಸೋಮಿ 21′ ಎಂದೂ ಹೇಳಲಾಗುತ್ತದೆ. ಇದು ಸಾಮಾನ್ಯ ಸ್ಥಿತಿಯಿಂದ ಹಿಡಿದು ಗಂಭೀರ ಸ್ವರೂಪದ್ದಾಗಿರಬಹುದು.

ಬುದ್ಧಿಮಾಂದ್ಯತೆ ಸ್ಥಿತಿಯೊಂದಿಗೆ ಹುಟ್ಟುವ ಮಗುವಿನ ಲಾಲನೆ ಪಾಲನೆ ಪಾಲಕರಿಗೆ ಬಹುದೊಡ್ಡ ಸವಾಲಿನ ಕೆಲಸ. ಅದರ ನಿರ್ವಹಣೆ, ಆರೈಕೆ ಬಲು ಕಷ್ಟಕರ. ಮಗು ಕೂಡ ತನ್ನ ಪ್ರತಿಯೊಂದು ಚಟುವಟಿಕೆಗೂ ಇತರರನ್ನು ಅವಲಂಬಿಸುವ ದಯನೀಯ ಸ್ಥಿತಿ. ಹುಟ್ಟುವಾಗ ಇರುವಷ್ಟೇ ತೊಂದರೆಗಳೇ ಕ್ರಮೇಣ  ಮುಂದುವರಿಯುವುದಿಲ್ಲ. ಆ ತೊಂದರೆಗಳಿಗೆ ಮತ್ತಷ್ಟು ತೊಂದರೆಗಳು ಹೊಸದಾಗಿ ಸೇರುತ್ತ ಹೋಗಿ ಮಗು ಬಹು ಅಂಗವೈಕಲ್ಯದ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ.

ಬುದ್ಧಿಮಾಂದ್ಯತೆ ಸಮಸ್ಯೆಯಿರುವ ಮಗು ಕರುಳಿನ ಸಮಸ್ಯೆ, ಹೃದಯದ ತೊಂದರೆ ಇಟ್ಟುಕೊಂಡು ಹುಟ್ಟಿರಬಹುದು. ಕ್ರಮೇಣ ಅದಕ್ಕೆ ಕಿವಿ ಕೇಳಿಸದೇ ಇರುವ, ಕಣ್ಣು ಕಾಣಿಸದೇ ಇರುವ ಸಮಸ್ಯೆಗಳು ಹೆಚ್ಚುವರಿಯಾಗಿ ಸೇರಿಕೊಳ್ಳಬಹುದು. ಹೀಗೆ ಬಹು ಅಂಗಗಳ ಸಮಸ್ಯೆಯೊಂದಿಗೆ ಅದು ಕುಟುಂಬದ ನೆಮ್ಮದಿಗೆ ಭಂಗ ಎಂಬಂತಾಗುತ್ತದೆ. ಪೋಷಕರಿಗೆ ಆರ್ಥಿಕವಾಗಿಯೂ ಹೊರೆ ಎನಿಸುತ್ತದೆ.

ಗರ್ಭಾವಸ್ಥೆಯಲ್ಲಿಯೇ ಪತ್ತೆ ಹಚ್ಚಬಹುದು!
ಮಹಿಳೆಯೊಬ್ಬಳು ಗರ್ಭ ಧರಿಸಿದಾಗ ತನ್ನ  ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಬುದ್ಧಿಮಾಂದ್ಯ ಮಗು ಅಲ್ಲ ತಾನೆ ಎಂಬುದನ್ನು ಈಗ ಬಗೆಬಗೆಯ ವೈದ್ಯಕೀಯ ಪರೀಕ್ಷೆಗಳಿಂದ  ಖಚಿತಪಡಿಸಿಕೊಳ್ಳಬಹುದಾಗಿದೆ.

ರಕ್ತಪರೀಕ್ಷೆ, ಸ್ಕ್ಯಾನಿಂಗ್ಗಳಿಂದ, ಭ್ರೂಣದ ಸುತ್ತ ಇರುವ ಗರ್ಭಜಲದಿಂದ ಹಾಗೂ ಗರ್ಭಿಣಿಯ ರಕ್ತ ಪರೀಕ್ಷೆಯಿಂದ ಬುದ್ಧಿಮಾಂದ್ಯತೆಯ ಅಸ್ತಿತ್ವವನ್ನು ಪತ್ತೆ ಹಚ್ಚಬಹುದಾಗಿದೆ. ಆದರೆ ಅದರ ಅಸ್ತಿತ್ವ ಪರೀಕ್ಷೆ ಒಂದೇ ಸಲಕ್ಕೆ ಮಾಡಿ ಮುಗಿಸಲು ಆಗುವಂಥದ್ದಲ್ಲ. ಗರ್ಭದಲ್ಲಿ ಭ್ರೂಣ ಬೆಳೆಯುತ್ತ ಹೋದಂತೆ ಅದರ ಅವಯವದ ರಚನೆಗಳಿಂದ ಅದನ್ನು ಪತ್ತೆ ಹಚ್ಚಬಹುದಾಗಿದೆ.

ಪತ್ತೆ ಹಚ್ಚುವುದು ಹೇಗೆ?
ಗರ್ಭಿಣಿಯೊಬ್ಬಳು ಆರಂಭಿಕ ಹಂತದಲ್ಲಿ ವೈದ್ಯರ ಬಳಿ ತಪಾಸಣೆಗೆ ಬಂದಾಗ, ಆಕೆಯ ಕುಟುಂಬದ, ರೋಗಗಳ ಇತಿಹಾಸ, ಹಿಂದೆ ಗರ್ಭ ಧರಿಸಿದ ಇತಿಹಾಸದ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಹಿಂದಿನ ಸಲದ ಗರ್ಭಾವಸ್ಥೆ ಹಾಗೂ ಮಹಿಳೆಯೊಬ್ಬಳ ವಯಸ್ಸು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಿಣಿಯ ವಯಸ್ಸು 35 ದಾಟಿದ್ದರೆ ಆಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ 35ರ ಮೇಲ್ಪಟ್ಟ ವಯಸ್ಸಿನ ಮಹಿಳೆಯರಿಗೆ ಬುದ್ಧಿಮಾಂದ್ಯ ಮಕ್ಕಳು ಜನಿಸುವ ಸಾಧ್ಯತೆಗಳು ಹೆಚ್ಚು ಎಂದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. ಆದರೆ ಈಗ ಕುಟುಂಬದಲ್ಲಿ ಬುದ್ಧಿಮಾಂದ್ಯತೆ ಅಥವಾ ಬೇರಾವುದೇ ಕಾಯಿಲೆಗಳ ಇತಿಹಾಸ ಇರದಿದ್ದರೂ ಕೂಡ ಪ್ರತಿಯೊಬ್ಬ ಗರ್ಭಿಣಿಗೂ ಡೌನ್ಸಿಂಡ್ರೊಮ್ ಸ್ಕ್ರೀನಿಂಗ್ ಬಗ್ಗೆ ಮಾಹಿತಿ ನೀಡಿ ಆಕೆ ಪರೀಕ್ಷೆಗೊಳಪಟ್ಟು ತನ್ನ ಹೊಟ್ಟೆಯಲ್ಲಿ ಹುಟ್ಟುವ ಮಗು ಬುದ್ಧಿಮಾಂದ್ಯ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

ಏನೇನು ಪರೀಕ್ಷೆ?
ಡೌನ್ ಸಿಂಡ್ರೊಮ್ ಸ್ಥಿತಿಯನ್ನು ಕಂಡುಕೊಳ್ಳಲು 11ರಿಂದ 14 ವಾರಗಳ ಗರ್ಭಾವಸ್ಥೆಯಲ್ಲಿ ಹಾಗೂ ಆ ಬಳಿಕ 15ರಿಂದ 20 ವಾರಗಳಲ್ಲಿ ಹೀಗೆ ಎರಡು ಹಂತಗಳಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಿ ವೈದ್ಯರು ಬುದ್ಧಿಮಾಂದ್ಯತೆಯ ಅಸ್ತಿತ್ವವನ್ನು ಪತ್ತೆ ಹಚ್ಚುತ್ತಾರೆ.

ಮೊದಲ ಹಂತದಲ್ಲಿ ಎನ್ಟಿ ಸ್ಕ್ಯಾನಿಂಗ್ ಅಂದರೆ ಕತ್ತಿನಿಂದ ಬೆನ್ನು ಹುರಿಯ ತನಕ ಇರುವ ದ್ರವ ಪದಾರ್ಥದ ಪ್ರಮಾಣವನ್ನು ಕಂಡುಕೊಳ್ಳಲಾಗುತ್ತದೆ. ಇದರಲ್ಲಿ ಸ್ವಲ್ಪ ಸಂದೇಹ ಉಂಟಾದರೆ ಗರ್ಭಿಣಿಯ ರಕ್ತ ಪರೀಕ್ಷೆಗೆ ಸಲಹೆ ನೀಡಲಾಗುತ್ತದೆ. ಇದರಲ್ಲಿ ಸಂದೇಹ ಇನ್ನಷ್ಟು ಬಲಗೊಂಡರೆ ಮುಂದಿನ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.

ಮುಂದಿನ ಪರೀಕ್ಷೆ ಏನೇನು?
ಆರಂಭಿಕ ಹಂತದಲ್ಲಿ ಒಂದಷ್ಟು ಅಸಾಮಾನ್ಯತೆ ಕಂಡುಬಂದರೆ ಮಗುವಿನ ಸುತ್ತ ಇರುವ Amnio centesis ಗರ್ಭಜಲವನ್ನು ಸೂಜಿಯಿಂದ ಪಡೆದು ಅದನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗುತ್ತದೆ. ಇದರಿಂದ ಹುಟ್ಟುವ ಮಗುವಿನ ಅಥವಾ ಕ್ರೋಮೋಸೋಮುಗಳ ಅಧ್ಯಯನ ಕೈಗೊಳ್ಳಲಾಗುತ್ತದೆ. ಇದೊಂದು ದೀರ್ಘಾವಧಿಯ ಅಧ್ಯಯನ. ಇದರ ವರದಿ ಬರಲು 2 ವಾರಗಳ ಸಮಯ ಬೇಕಾಗುತ್ತದೆ. ಮೈಕ್ರೋಸ್ಕೋಪ್ಗಳ ಮೂಲಕ ವಂಶವಾಹಿಗಳ ಅಧ್ಯಯನ ಮಾಡಲಾಗುತ್ತದೆ.

ಗರ್ಭದಿಂದ ಸ್ಯಾಂಪಲ್ಗಳನ್ನು ಸೂಜಿಯಿಂದ ಪಡೆಯುವ ಸಂದರ್ಭದಲ್ಲಿ ಶೇ. 1ರಿಂದ 2ರಷ್ಟು ಗರ್ಭಪಾತದ ಸಂದರ್ಭ ಎದುರಾಗಬಹುದು.  ಬುದ್ಧಿಮಾಂದ್ಯತೆಯನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ಕಾರ್ಡೋ ಸೆಂಟೊಸಿಸ್ಅಂದರೆ ಕರುಳು ಬಳ್ಳಿಯ ಚಿಕ್ಕ ಸ್ಯಾಂಪಲ್ ಪಡೆದು ಅದನ್ನು ಪರೀಕ್ಷೆಗೊಳಪಡಿಸಿ ವೈದ್ಯರು ಅಂತಿಮ ತೀರ್ಮಾನಕ್ಕೆ ಬರುತ್ತಾರೆ.

ಪರೀಕ್ಷೆಯ ಪರಿಣಾಮ ಸಕಾರಾತ್ಮಕವಾಗಿದ್ದರೆ ಮುಂದೇನು?
ಬಹುತೇಕ ಎಲ್ಲ ಪರೀಕ್ಷೆಗಳು ಹುಟ್ಟುವ ಮಗು ಅಸಾಮಾನ್ಯ ಸ್ಥಿತಿ ಹೊಂದಿದೆ ಎನ್ನುವುದನ್ನು ಖಚಿತಪಡಿಸಿದರೆ ಗರ್ಭಪಾತವೊಂದೇ ಸೂಕ್ತ ಪರ್ಯಾಯ. ಮುಂದಿನ ಗರ್ಭದಲ್ಲಾದರೂ ಆರೋಗ್ಯವಂತ ಮಗುವನ್ನು ಪಡೆಯುವ ಅಭಿಲಾಷೆ ಇಟ್ಟುಕೊಳ್ಳಬೇಕು.

ಮಾಹಿತಿಗೆ :
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

altiushospital@yahoo.com, altiushospital.com

Leave a Reply