ಯೋಗೀಶ್ವರ್ ಮಾತು ಕೇಳಿ ಪಕ್ಷದ ಮರ್ಯಾದೆ ಕಳೆಯಬೇಡಿ: ಯಡಿಯೂರಪ್ಪನವರಿಗೆ ಹೈಕಮಾಂಡ್ ತಾಕೀತು!

ಡಿಜಿಟಲ್ ಕನ್ನಡ ವಿಶೇಷ:

ಅನ್ಯಪಕ್ಷಗಳ ಎಂಟು ಮಂದಿಯನ್ನು ಅಡ್ಜಸ್ಟ್ ಮಾಡಿಕೊಂಡು ಮೇಲ್ಮನೆ ಚುನಾವಣೆ ಕಣಕ್ಕೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದ ದೈನೇಸಿ ಸ್ಥಿತಿ ತಂದುಕೊಂಡ ಬಿಜೆಪಿ ತಿಂಗಳೊಪ್ಪತ್ತಿಂದ ಆಪರೇಷನ್ ಕಮಲದ ಹೆಸರಲ್ಲಿ 18 ರಿಂದ 25 ಶಾಸಕರು ತಮ್ಮ ಪಾರ್ಟಿಗೆ ಬರುತ್ತಾರೆ ಎಂದು ಬಿಟ್ಟಿದ್ದೆಲ್ಲ ಬರೀ ಬೂರಿಯೇ? ಮಾಡಿದ್ದೆಲ್ಲ ಕೇವಲ ಭಜನೆಯೇ?!

ಹೌದು ಎನ್ನದೇ ವಿಧಿಯಿಲ್ಲ. ಒಂದೊಮ್ಮೆ ಕಾಂಗ್ರೆಸ್, ಜೆಡಿಎಸ್ನ ಹದಿನೆಂಟೋ, ಇಪ್ಪತ್ತೈದೋ ಮಂದಿ ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿರುವುದು ನಿಜವೇ ಆಗಿದ್ದಲ್ಲಿ ಎಂಟು ಮತಗಳಿಂದ ಮೇಲ್ಮನೆ ಚುನಾವಣೆ ಗೆಲ್ಲುವುದು ಅದೆಷ್ಟು ಹೊತ್ತಿನ ವಿಷಯವಾಗಿತ್ತು? ಮುಖೇಡಿಗಳಾಗಿ ಓಡಿ ಹೋಗುವ ಪ್ರಮೇಯವಾದರೂ ಎಲ್ಲಿಂದ ಉದ್ಭವಿಸುತ್ತಿತ್ತು?

ಇದೇ ಅಂಶವನ್ನು ಮುಂದಿಟ್ಟುಕೊಂಡು ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಬೆಂಡೆತ್ತಿದ್ದಾರೆ. ಹೋಗಿ, ಹೋಗಿ ಪಕ್ಷನಿಷ್ಠೆ, ನೀತಿ-ನಿಯತ್ತು ಇಲ್ಲದ ಸಿ.ಪಿ. ಯೋಗೇಶ್ವರ ಮಾತು ಕೇಳಿಕೊಂಡು ಬಿಜೆಪಿ ಮರ್ಯಾದೆ ಕಳೆಯುತ್ತಿದ್ದೀರಿ. ಅದೂ ಲೋಕಸಭೆ ಚುನಾವಣೆ ಮನೆಬಾಗಿಲಿಗೆ ಬಂದಿರುವ ಹೊತ್ತಿನಲ್ಲಿ. ಇನ್ನಾದರೂ ಇಂಥ ಆಟಗಳನ್ನು ಪಕ್ಕಕ್ಕಿಟ್ಟು ಸಂಘಟನೆಯಲ್ಲಿ ತೊಡಗಿಸಿಕೊಂಡು ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ತರುವುದರತ್ತ ಗಮನ ಹರಿಸಿ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಹಾಗೇ ನೋಡಿದರೆ ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಸೋಮವಾರ ಗಡವು ಮುಗಿಯುವ ಎರಡು ತಾಸು ಮೊದಲು ಯೋಗೀಶ್ವರ ಅಂತಿಮ ಕ್ಷಣದ ಆಟ ಹೂಡಿದ್ದರು. ಸಚಿವ ಆರ್. ಶಂಕರ್, ಕಾಂಗ್ರೆಸ್ ಶಾಸಕರಾದ ಪ್ರಭು ಚೌಹಾಣ್, ಬಿ.ಸಿ. ಪಾಟೀಲ್, ಸುಧಾಕರ ಹಾಗೂ ಪಕ್ಷೇತರ ನಾಗೇಶ್ ಅಡ್ಡಮತದಾನಕ್ಕೆ ಒಪ್ಪಿದ್ದಾರೆ. ಇನ್ನು ಉಳಿದ ಮೂವರನ್ನು ಹೊಂದಿಸುವ ಜವಾಬ್ದಾರಿ ತಮಗೆ ಬಿಡಿ ಎಂದು ಯಡಿಯೂರಪ್ಪನವರ ಮನವೊಲಿಸಿದ್ದರು. ಯೋಗೇಶ್ವರ್, ಬಿ.ಜೆ. ಪುಟ್ಟಸ್ವಾಮಿ, ಮಾಲೀಕಯ್ಯ ಗುತ್ತೇದಾರ್ ಅಥವಾ ಡಿ.ಎಸ್. ವೀರಯ್ಯ ಅಭ್ಯರ್ಥಿಗಳೆಂದು ಅಂತಿಮಗೊಳಿಸಲಾಗಿತ್ತು. ಬಿಜೆಪಿಗೆ ಗೆಲ್ಲಲು ಬೇಕಿದ್ದದು 112 ಮತಗಳು. ಅವರ ಬಳಿ ಇರುವುದು 104. ಎಂಟು ಅಡ್ಡಮತದಾನದಿಂದಲೇ ಬರಬೇಕು. ಆದರೆ ರಾಜ್ಯದ ಅನ್ಯ ಹಿರಿಯ ನಾಯಕರು ವರಿಷ್ಠರಿಗೆ ಇದು ಆಗದ ಕೆಲಸ ಎಂದು ಕಿವಿಯೂದಿದರು. ‘ಕಾಂಗ್ರೆಸ್-ಜೆಡಿಎಸ್ ನಾಯಕರು ಸುಮ್ಮನೆ ಕೂತಿಲ್ಲ. ಅವರೂ ಬಿಜೆಪಿ ಪಾಳೆಯಕ್ಕೆ ಕೈ ಹಾಕಿದ್ದಾರೆ. ನಂಬಿದ ಬೇರೆ ಪಕ್ಷದವರು ಮತ ಹಾಕುವ ಗ್ಯಾರಂಟಿ ಇಲ್ಲ. ನಮ್ಮವರೂ ಅತ್ತ ಕಡೆ ವಾಲುವ ಸಂಭವ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಕಣಕ್ಕಿಳಿಸಿ ಪಕ್ಷದ ಮರ್ಯಾದೆ ಹರಾಜು ಹಾಕಿಕೊಳ್ಳುವುದು ಬೇಡ’ ಎಂದು ಮಾಡಿದ ಸಲಹೆಯನ್ನು ವರಿಷ್ಠರು ಪರಿಗಣಿಸಿದ ಪರಿಣಾಮ ಅಂತಿಮ ಕ್ಷಣದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಕಣದಿಂದ ದೂರು ಉಳಿದರು.

ಈ ಮಧ್ಯೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಅವರು ‘ಆಪರೇಷನ್ ಕಮಲ’ದ ಬಗ್ಗೆಯೂ ರಾಜ್ಯದ ಅನ್ಯ ನಾಯಕರಿಂದ ಮಾಹಿತಿ ಪಡೆದು, ಯೋಗೀಶ್ವರ್ ಅವರನ್ನು ದೂರ ಇಡುವಂತೆ ಯಡಿಯೂರಪ್ಪನವರಿಗೆ ಕೊಂಚ ಗಟ್ಟಿಯಾಗಿಯೇ ಹೇಳಿದ್ದಾರೆ. ಚುನಾವಣೆಗೊಂದು ಪಕ್ಷ ಬದಲಿಸುವ, ಯಾವುದೇ ಪಕ್ಷದ ಬಗ್ಗೆ ನಿಷ್ಠರಾಗಿರದ, ಪಕ್ಷಾಂತರದಲ್ಲೂ ಬರೀ ಸ್ವಾರ್ಥ ಹುಡುಕುವ ಯೋಗೀಶ್ವರ್ ಮಾತು ಕೇಳಿಕೊಂಡು ಯಡಿಯೂರಪ್ಪನವರು ತಮ್ಮ ಹಿರಿತನಕ್ಕೂ ಚ್ಯುತಿ ತಂದುಕೊಳ್ಳುತ್ತಿದ್ದಾರೆ. ಪಕ್ಷದ ವರ್ಚಸ್ಸಿಗೂ ಮಸಿ ಬಳಿಯುತ್ತಿದ್ದಾರೆ. ಯೋಗೀಶ್ವರ್ ಅವರಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವುದಕ್ಕಿಂತ ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ ಸಿ.ಎಂ. ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ಕಿಚ್ಚು ಆಡಗಿದೆ. ಹೀಗಾಗಿ ‘ಆಪರೇಷನ್ ಕಮಲ’ ಕುರಿತು ಅಸಂಭವನೀಯ ಐಡಿಯಾಗಳನ್ನು ಕೊಟ್ಟು ಯಡಿಯೂರಪ್ಪನವರ ತಲೆ ಕೆಡಿಸುತ್ತಿದ್ದಾರೆ. ಮೊದಲೇ ಅಧಿಕಾರದ ಹಪಾಹಪಿಯಲ್ಲಿರುವ ಯಡಿಯೂರಪ್ಪನವರು ಯೋಗೀಶ್ವರ್ ಮಾತು ಕೇಳಿಕೊಂಡು ಥಕಥಕ ಕುಣಿಯುತ್ತಿದ್ದಾರೆ. ಭೂಗತ ಜಗತ್ತಿನವರು, ದಂಧೆಕೋರರನ್ನು ಮುಂದಿಟ್ಟುಕೊಂಡು ‘ಆಪರೇಷನ್ ಕಮಲ’ ಮಾಡಲು ಹೋಗಿ ಪಕ್ಷದ ಘನತೆಗೂ ಕುಂದು ತಂದಿದ್ದಾರೆ. ಅವರ ವೈಯಕ್ತಿಕ ಕಿಚ್ಚಿಗೆ ಬಿಜೆಪಿ ಗೌರವ ಸುಟ್ಟು ಕರಕಲಾಗವುದು ಬೇಡ ಎಂದು ರಾಜ್ಯದ ಇತರ ಮುಖಂಡರು ಕೊಟ್ಟ ಸಲಹೆ ಹಿನ್ನೆಲೆಯಲ್ಲಿ ರಾಮಲಾಲ್ ಅವರು ಯಡಿಯೂರಪ್ಪನವರಿಗೆ ಈ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ಅತ್ತ ಆಪರೇಷನ್ ಕಮಲವೂ ಇಲ್ಲ, ಇತ್ತ ಮೇಲ್ಮನೆ ಚುನಾವಣೆಯಲ್ಲಿ ಒಂದು ಪಿಳ್ಳೆಯನ್ನೂ ಗೆಲ್ಲಿಸಿಕೊಳ್ಳಲಾಗಲಿಲ್ಲ. ಹಾದಿ-ಬೀದೀಲಿ ಹೋಗುವವರ ಮಾತು ಕೇಳಿ ಇಂಥ ಅತಂತ್ರ ಸನ್ನಿವೇಶ ನಿರ್ಮಾಣ ಮಾಡಿಕೊಂಡದ್ದಕ್ಕೆ ಯಡಿಯೂರಪ್ಪನವರು ತಮ್ಮ ಅದೃಷ್ಟವನ್ನು ತಾವೇ ಹಳಿದುಕೊಳ್ಳುತ್ತಿದ್ದಾರೆ.

Leave a Reply