ಡಿಜಿಟಲ್ ಕನ್ನಡ ಟೀಮ್:
ಯಾವ ಆಕಾಂಕ್ಷಿಯೂ ಬಂದು ನನ್ನನ್ನು ಮಂತ್ರಿ ಮಾಡಿಸಿ ಅಂತ ಕೇಳಿಲ್ಲ. ನಾನು ಯಾರನ್ನೂ ಮಂತ್ರಿ ಮಾಡುವವನೂ ಅಲ್ಲ. ಮಾಡಿಸುವವನೂ ಅಲ್ಲ ಎಂದು ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂತ್ರಿ ಪದವಿ ನಿರೀಕ್ಷೆಯಲ್ಲಿರುವ ಎಂ.ಟಿ.ಬಿ. ನಾಗರಾಜ್, ಶಿವರಾಮ ಹೆಬ್ಬಾರ್ ಸೇರಿದಂತೆ ಶಾಸಕರ ದಂಡು ತಮ್ಮನ್ನು ಭೇಟಿ ಮಾಡುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಶಿವಕುಮಾರ್ ಬೆಂಗಳೂರಿನಲ್ಲಿ ಮಂಗಳವಾರ ಕೊಟ್ಟ ಉತ್ತರವಿದು.
ಎಂ.ಟಿಬಿ. ನಾಗರಾಜ್ ಮತ್ತು ನಾನು ನಲ್ವತ್ತು ವರ್ಷಗಳ ಖಾಸಗಿ ಸ್ನೇಹಿತರು. ಹೀಗಾಗಿ ಬಂದು ನನ್ನನ್ನು ಭೇಟಿ ಮಾಡಿದ್ದಾರೆ. ರಾಜಕಾರಣ ಇವತ್ತು ಇರುತ್ತದೆ, ನಾಳೆ ಹೋಗುತ್ತದೆ. ಆದರೆ ಸ್ನೇಹ ಅನ್ನೋದೇ ಬೇರೆ ಎಂದು ತಿಳಿಸಿದರು.
ತಮ್ಮ ಕ್ಷೇತ್ರಗಳಿಗೆ ಸಮರ್ಪಕ ಅನುದಾನ ನೀಡಿಲ್ಲ ಎಂದು ಅನೇಕ ಶಾಸಕರು ಮುನಿದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವನ್ನೂ ಇತ್ಯರ್ಥ ಮಾಡುತ್ತೇವೆ. ಸರಕಾರ ಮತ್ತು ರಾಜಕಾರಣದಲ್ಲಿ ಪರಿಹಾರ ಇಲ್ಲದ ಯಾವುದೇ ಸಮಸ್ಯೆಗಳು ಇಲ್ಲ. ಎಲ್ಲವೂ ಸರಿ ಹೋಗುತ್ತವೆ ಎಂದರು.
ಹಿರಿಯ ಸಚಿವ ಎಚ್.ಡಿ. ರೇವಣ್ಣ ಅವರು ತಮ್ಮನ್ನು ಭೇಟಿ ಮಾಡಿದ್ದರಲ್ಲಿ ವಿಶೇಷವೇನೂ ಇಲ್ಲ. ಇಲಾಖೆಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅಭಿವೃದ್ಧಿ ವಿಷಯ ಕುರಿತು ಅವರು ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಅಷ್ಟೇ ಹೊರತು ಬೇರೇನೂ ಇಲ್ಲ ಎಂದರು.