ಡಾ.ರಾಜ್ ಅಪಹರಣ ಪ್ರಕರಣದಲ್ಲಿ ವೀರಪ್ಪನ್ ಸೇರಿ ಎಲ್ಲರೂ ನಿರ್ದೋಷಿ!

ಡಿಜಿಟಲ್ ಕನ್ನಡ ಟೀಮ್:

18 ವರ್ಷಗಳ ಹಿಂದೆ ಕನ್ನಡ ಕಣ್ಮಣಿ ಡಾ. ರಾಜಕುಮಾರ್ ಅಪಹರಣ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು, ಪ್ರಕರಣದ ಎಲ್ಲಾ ಆರೋಪಿಗಳು ದೋಷಮುಕ್ತ ಎಂದು ಕೋರ್ಟ್ ಆದೇಶ ನೀಡಿದೆ!

ಕಾಡುಗಳ್ಳ ವೀರಪ್ಪನ್ ಮತ್ತು ಆತನ ಸಹಚರರು ಡಾ.ರಾಜ್ ಅವರನ್ನು ಅಪಹರಿಸಿದ್ದು, ಈ ಪ್ರಕರಣದ 8 ಮಂದಿಯಲ್ಲಿ 5 ಆರೋಪಿಗಳನ್ನು ನಿರ್ದೋಷಿ ಎಂದು ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಪ್ರಕಟಿಸಿದೆ.

2000ನೇ ಇಸವಿ ಜುಲೈ 30ರಂದು ತಮಿಳುನಾಡಿನ ಗಡಿಭಾಗದಲ್ಲಿರುವ ಗಾಜನೂರಿನ ಮನೆಯಿಂದ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಈ ವಿಷಯ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ರಾಜ್ ಬಿಡಿಸಲು ಉಭಯ ರಾಜ್ಯಗಳ ಸರ್ಕಾರ ಭಾರೀ ಶ್ರಮವಹಿಸಿದ್ದವು. ಅಂತಿಮವಾಗಿ 108 ದಿನದ ಬಳಿಕ ರಾಜ್‌ರನ್ನು, ವೀರಪ್ಪನ್ ಯಾವುದೇ ತೊಂದರೆ ಇಲ್ಲದೆ ಬಿಡುಗಡೆ ಮಾಡಿದ್ದ.

ಈ ಪ್ರಕರಣದಲ್ಲಿ ವೀರಪ್ಪನ್ ಸೇರಿದಂತೆ 8 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಆದರೆ ವಿಚಾರಣೆ ವೇಳೆ ವೀರಪ್ಪನ್, ಸೇತುಕುಡಿ ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಉಳಿದ 5 ಜನ ಪ್ರಕರಣ ಸಂಬಂಧ ಜೈಲು ಸೇರಿದ್ದರು. ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸುವ ಮೂಲಕ ಡಾ.ರಾಜ್ ಪ್ರಕರಣದಲ್ಲಿ ವೀರಪ್ಪನ್ ನಿರ್ದೋಷಿಯಾಗಿದ್ದಾನೆ. ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಕೆ. ಮಣಿ, ಸೂಕ್ತ ಸಾಕ್ಷ್ಯಾಧಾರದ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸುತ್ತಿರುವುದಾಗಿ ತಿಳಿದರು.

ಇಡೀ ದೇಶವೇ ಡಾ.ರಾಜ್ ಅಪಹರಣಕ್ಕೆ ಸಾಕ್ಷಿಯಾಗಿದ್ದರೂ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸಾಕ್ಷಿ ಇಲ್ಲ ಎಂದು ಹೇಳುವುದಾದರೆ ಈ ಪ್ರಕರಣದಲ್ಲಿ ಅದ್ಯಾವ ರೀತಿಯ ತನಿಖೆ ನಡೆಸಲಾಗಿದೆ ಎಂಬ ಅನುಮಾನ ಹಾಗೂ ಬೇಸರ ಅಭಿಮಾನಿಗಳಲ್ಲಿ ವ್ಯಕ್ತವಾಗುತ್ತಿದೆ.

Leave a Reply