ಮಹದಾಯಿ ಒಂದು ಹನಿಯೂ ವ್ಯರ್ಥವಾಗಲು ಬಿಡಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಮಹದಾಯಿ ನದಿಯ ಒಂದು ಹನಿ ನೀರು ವ್ಯರ್ಥವಾಗಲು ಬಿಡುವುದಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ.‌..’ ಇದು ಉತ್ತರ ಕರ್ನಾಟಕ ಜನರಿಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೀಡಿರುವ ಅಭಯ!

ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿ, ಕಳಸಾ ನಾಲಾ ವೀಕ್ಷಣೆ ಮಾಡಿದ ನಂತರ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಮಹದಾಯಿ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸಿ ರಾಜ್ಯದ ಜನರಿಗೆ ನ್ಯಾಯ ಒದಗಿಸುತ್ತೇವೆ’ ಎಂದು ತಿಳಿಸಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು…

‘ಕಣಕುಂಬಿಗೆ ಇಂದು ಭೇಟಿ ನೀಡ್ತಾ ಇದ್ದೇನೆ. ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡುತ್ತೇನೆ. ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ನೀರು ತರಲು ಕಾನೂನು ತಜ್ಞರ ಅಭಿಪ್ರಾಯ ಕೇಳಿದ್ದೇವೆ.‌ ನ್ಯಾಯಾಧೀಕರಣ ತೀರ್ಪು ಬಂದ ಮೇಲೆ ನಾವು ಸುಮ್ಮನೆ ಕುಳಿತಿಲ್ಲ. ಕಾನೂನು ಮತ್ತು ತಾಂತ್ರಿಕ ತಜ್ಙರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಾವೇರಿಗೆ ಇರುವ ಕಾಳಜಿ ಮಹದಾಯಿಗೆ ಇಲ್ಲ ಎನ್ನುವುದು ಸತ್ಯಕ್ಕೆ ದೂರವಾದುದು. ನಮಗೆ ಮಹಾದಾಯಿ ವಿಚಾರದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ. ಇಂದಿನ ಭೇಟಿ ಬಳಿಕ ಸರ್ವ ಪಕ್ಷಗಳ ಸಭೆ ಕರೆಯಲಾಗುವುದು. ರಾಜ್ಯದ ಒಂದೇ ಒಂದು ಹನಿ ನೀರು ಸಮುದ್ರ ಸೇರಲು ಬಿಡುವುದಿಲ್ಲ.

ಮಹದಾಯಿ ವಿಚಾರವಾಗಿ ನಾವು ಮತ್ತೆ ಕೋರ್ಟ್ ಮುಂದೆ ಹೋಗುತ್ತೇವೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ, ಗೆಜೆಟ್ ನೋಟಿಫಿಕೇಶನ್, ಕೇಂದ್ರ ಪರಿಸರ ಪೀಠದಿಂದ ನಿರಾಕ್ಷೇಪಣೆ ಪತ್ರ ಸಿಕ್ಕರೇ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಮಹದಾಯಿ ಹೋರಾಟದಲ್ಲಿ ರಾಜ್ಯ ಸರಕಾರದ ಪರವಾಗಿ ನಿಂತ ರಾಜ್ಯದ ರೈತರು, ನಾನಾ ಸಂಘಟನೆಗಳು, ನಾಡಪ್ರೇಮಿಗಳಿಗೆ ನಾನು ಋಣಿಯಾಗಿದ್ದೇನೆ. ಅವರ ನೆರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಸಹಕಾರ ಅವಿಸ್ಮರಣೀಯ.

ಮಹದಾಯಿ ನ್ಯಾಯಾಧೀಕರಣ ತೀರ್ಪಿನಿಂದ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯವಾಗಿದೆ‌. ಇದೊಂದೇ ತೀರ್ಪಿನಿಂದ ದೊಡ್ಡ ಖುಷಿಯಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ನಾವು ಕ್ರಮಿಸಬೇಕಾದ ದಾರಿ ಇನ್ನೂ ಇದೆ. ಈಗ ಬಂದಿರುವ ತೀರ್ಪಿನ ಅನ್ವಯ ನಮಗೆ ಬಂದಿರುವ ನೀರಿನ ಲಾಭ ಈ ಭಾಗದ ರೈತರಿಗೆ ದೊರಕಿಸಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬೇರೆ ಕೆಲಸ ನಿಂತರೂ, ಮಹದಾಯಿ ಯೋಜನೆ ನಿಲ್ಲಿಸುವುದಿಲ್ಲ. ನಿಲ್ಲಲು ಬಿಡುವುದಿಲ್ಲ. ಆದಷ್ಟು ಬೇಗ ಕಾಮಗಾರಿಯನ್ನು ಆರಂಭಿಸಲಾಗುವುದು.

ಕಳಸಾ‌ ಮತ್ತು‌ ಬಂಡೂರಿಗೆ 431 ಹೆಕ್ಟೇರ್ ಜಮೀನು ಬೇಕು. 191 ಹೆಕ್ಟೇರ್ ಖಾಸಗಿ ಜಮೀನು ಅವಶ್ಯಕತೆ ಇದೆ. ಖಾಸಗಿ ಜಮೀನು ಸ್ವಾಧೀನಕ್ಕೆ ಸಿದ್ಧತೆ ನಡೆಯುತ್ತಿದೆ. ರಾಜ್ಯದ ಹಿತ‌ ಕಾಪಾಡಲು ಸರಕಾರ ಬದ್ಧವಾಗಿದೆ. ನ್ಯಾಯಾಲಯಕ್ಕೆ ನಾವು ಗೌರವ ಕೋಡುತ್ತೇವೆ. ಆದರೆ 148 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತಿದೆ. ಈ ನೀರಿನ ಪ್ರಯೋಜನ ಈ ಭಾಗದ ರೈತರಿಗೆ ದೊರಕಿಸಿಕೊಡುವ ಏಕೈಕ ಉದ್ದೇಶ ಸರಕಾರದ್ದಾಗಿದೆ. ಗೋವಾದ ಸಮುದ್ರ ಸೇರಿ ಪೋಲಾಗುತ್ತಿರುವ ನೀರಿನಲ್ಲಿ ನಮಗೂ ಹಕ್ಕಿದೆ. ಈ ನೀರಿನ ಹಕ್ಕು ಪಡೆಯಲು ನಮ್ಮ ಹೋರಾಟ ಮುಂದುವರೆಯಲಿದೆ.

ನಾವೂ ಪರಿಸರ ಪ್ರೇಮಿಗಳು. ಪರಿಸರಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಯೋಜನೆ ಜಾರಿಗೆ ಪರಿಸರ ಪ್ರೇಮಿಗಳ ವಿರೋಧ ಇಲ್ಲ.

ಈಗಾಗಲೇ ಕಳಸಾ-ಬಂಡೂರಿ ಕಾಮಗಾರಿಗೆ ರಾಜ್ಯ ಸರಕಾರ 250 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ನಾಲೆಯ ಸರ್ವೆ ಮಾಡಲು 50 ಲಕ್ಷ ರು. ವೆಚ್ಚ ಮಾಡಿದೆ. ಇನ್ನೂ ಎಷ್ಟು ಕೋಟಿ ರು. ಬೇಕಾದರೂ ಖರ್ಚು ಮಾಡಲು ಸರಕಾರ ಸಿದ್ಧವಾಗಿದೆ.’

ಇದೇ ಸಂದರ್ಭದಲ್ಲಿ ಸಚಿವರು ಖಾನಾಪುರ ತಾಲೂಕಿನ ಕಳಸಾ ನಾಲಾ‌ ವೀಕ್ಷಣೆ ಮಾಡಿ ಮಹದಾಯಿ ನದಿ‌ ನೀರು ಕುಡಿದರು. ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೇ ಸ್ಥಳೀಯ ರೈತರ ಅಹವಾಲುಗಳನ್ನು ಆಲಿಸಿದರು. ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ್, ಜೆಡಿಎಸ್ ಮುಖಂಡರಾದ ಕೋನರೆಡ್ಡಿ, ಶಂಕರ್ ಮಾಡಲಗಿ ಹಾಜರಿದ್ದರು.

Leave a Reply