ಸರ್ಕಾರಿ ನೌಕರಿ ಬಡ್ತಿಯಲ್ಲಿ ಮೀಸಲಾತಿ ಅನಗತ್ಯ: ಸುಪ್ರೀಂ ಐತಿಹಾಸಿಕ ತೀರ್ಪು!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎನ್ನುವ ಬಡ್ತಿ ಮೀಸಲಾತಿ 2017ರ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವ ಹೊತ್ತಲ್ಲೇ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗುರುವಾರ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ಈ ಹಿಂದೆ 2006ರಲ್ಲಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ತೀರ್ಪು ಮರು ಪರಿಶೀಲಿಸುವಂತೆ ಮತ್ತು ಷರತ್ತುಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳು ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.

ತೀವ್ರ ಕುತೂಹಲ ಕೆರಳಿಸಿದ್ದ ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಕೆ ಸಿಕ್ರಿ ನೇತೃತ್ವದ ಪಂಚ ಸದಸ್ಯ ಪೀಠ, ತನ್ನ ತೀರ್ಪಿನಲ್ಲಿ ಹೇಳಿದ್ದಿಷ್ಟು

‘ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ. 2006ರ ಎಂ.ನಾಗರಾಜು ಅವರ ತೀರ್ಪಿನ ಮರು ಪರಿಶೀಲನೆ ಮಾಡುವ ಅಗತ್ಯವಿಲ್ಲ. ಈ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ಏಳು ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ.’

‘ಎಸ್‌ಸಿ ಮತ್ತು ಎಸ್‌ಟಿ ಸಮುದಾಯವು ಒಮ್ಮೆ ಉದ್ಯೋಗಕ್ಕೆ ಸೇರಿದ ಮೇಲೆ ಅವರ ಹಿಂದುಳಿದಿರುವಿಕೆ ನಿವಾರಣೆಯಾಗಿರುತ್ತದೆ. ದರ್ಜೆ-3 ಮತ್ತು ದರ್ಜೆ-4ರ ಹುದ್ದೆಗಳಿಗೆ ಮಾತ್ರ ಬಡ್ತಿ ಮೀಸಲಾತಿ ನೀಡಬಹುದು. ಉನ್ನತ ಹುದ್ದೆಗಳಲ್ಲಿರುವವರಿಗೆ ಬಡ್ತಿ ಮೀಸಲು ಸೌಲಭ್ಯ ಕಲ್ಪಿಸಬಾರದು’ ಎಂದು ಉದ್ಯೋಗದಲ್ಲಿ ಬಡ್ತಿ ಮೀಸಲು ವಿರೋಧಿಸುತ್ತಿರುವ ಅರ್ಜಿದಾರರ ಪರ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ವಾದಿಸಿದ್ದರು.

ಇನ್ನು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌, ‘ದೀರ್ಘ ಕಾಲದಿಂದ ಶೋಷಣೆಗೆ ಒಳಗಾಗಿರುವ ಈ ಸಮುದಾಯಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲೇಬೇಕು’ ಎಂದು ವಾದಿಸಿದ್ದರು. ಈ ವಿಚಾರಣೆ ಬಳಿಕ ತೀರ್ಪು ನೀಡಿರುವ ಕೋರ್ಟ್, ಈ ಪ್ರಕರಣದ ವಿಚಾರಣೆಯನ್ನು ಸಪ್ತ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲು ಸಂವಿಧಾನಿಕ ಪೀಠ ನಿರಾಕರಿಸಿದೆ.

Leave a Reply