ಆಧಾರ್ ಗೆ ಮಾನ್ಯತೆ ಇದೆ: ಸುಪ್ರೀಂ ತೀರ್ಪು! ಯಾವುದಕ್ಕೆ ಬೇಕು, ಯಾವುದಕ್ಕೆ ಬೇಡ?

ಡಿಜಿಟಲ್ ಕನ್ನಡ ಟೀಮ್:

‘ಆಧಾರ ವಿರುದ್ಧದ ದಾಳಿ ಭಾರತೀಯ ಸಂವಿಧಾನಕ್ಕೆ ವಿರೋಧವಾದುದು…’ ಎಂದು ಹೇಳುವ ಮೂಲಕ ಆಧಾರ್ ಸಂಖ್ಯೆಗೆ ಇರುವ ಸಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಆಧಾರ್ ಕಾರ್ಡ್ ಯೋಜನೆಯಿಂದ ಸಂವಿಧಾನದ ಖಾಸಗಿತನ ಹಕ್ಕು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ 31 ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಈ ಮಹತ್ವ ತೀರ್ಪು ನೀಡಿದೆ.

ಆಧಾರ್ ಸಂಖ್ಯೆ ಕಡ್ಡಾಯ ವಿರೋಧಿಸಿ, ಖಾಸಗಿತನವು ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದೆ. ಆದರೆ ಆಧಾರ್ ಸಂಖ್ಯೆಯಿಂದ ಇದಕ್ಕೆ ಧಕ್ಕೆಯಾಗಲಿದೆ ಎಂಬ ವಿರೋಧ ಪಕ್ಷ ಹಾಗೂ ಆಧಾರ ಕಡ್ಡಾಯ ವಿರೋಧಿಸುವವರ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಇದರ ಜತೆಗೆ ಸಮಾಜದ ಹಿತದೃಷ್ಟಿಯಿಂದ ಆಧಾರ್‍ಗೆ ಕೆಲವು ನಿರ್ಬಂಧಗಳ ಅಗತ್ಯವಿದೆ ಎಂದು ಕೂಡ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಈ ಮಹತ್ವದ ತೀರ್ಪಿನೊಂದಿಗೆ ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತು ತಲೆದೋರಿದ್ದ ಗೊಂದಲ ಈಗ ನಿವಾರಣೆಯಾದಂತಾಗಿದೆ.

ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಂ.ಕನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರುಗಳನ್ನೊಳಗೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಈ ಪೀಠ ತೀರ್ಪಿನಲ್ಲಿ ಹೇಳಿದ್ದಿಷ್ಟು…

‘ಆಧಾರ್ ದೇಶದ ಬಹು ಚರ್ಚಿತ ವಿಷಯವಾಗಿದೆ. ವಿಶಿಷ್ಟವಾದ ಗುರುತಿರುವಂತಹ ವ್ಯವಸ್ಥೆಯ ಅಗತ್ಯವಿದೆ. ಆಧಾರ್‍ನಿಂದ ಫಲಾನುಭವಿಗಳಿಗೆ ಪ್ರಯೋಜನವಾಗಿದೆ. ಇದು ದುರ್ಬಲರ ಸಬಲೀಕರಣಕ್ಕೆ ನೆರವಾಗುತ್ತದೆ. ಆಧಾರ್‍ನನ್ನು ತಿರುಚಲು, ನಕಲು ಮಾಡಲು ಸಾಧ್ಯವಿಲ್ಲ. ಆಧಾರ್ ಮಾಹಿತಿ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಡಬೇಕು. ಆಧಾರ್ ಪ್ರಾಧಿಕಾರದಿಂದಲೂ ಗೌಪ್ಯತೆಯ ಭರವಸೆ ಈಗಾಗಲೇ ನೀಡಲಾಗಿದೆ. ಹೀಗಾಗಿ ಆಧಾರ್ ಗೆ ಸಂವಿಧಾನಿಕ ಮಾನ್ಯತೆ ಇದ್ದು, ಆಧಾರ ವಿರುದ್ಧದ ದಾಳಿ ಭಾರತೀಯ ಸಂವಿಧಾನಕ್ಕೆ ವಿರೋಧವಾಗಲಿದೆ.’

ಯಾವುದಕ್ಕೆ ಬೇಕು? ಯಾವುದಕ್ಕೆ ಬೇಡ?

  • ಪ್ಯಾನ್ ಕಾರ್ಡ್ ಹಾಗೂ ಆದಾಯ ತೆರಿಗೆ ಪಾವತಿ ವಿಚಾರದಲ್ಲಿ ಆಧಾರ್ ಬಳಕೆ ಅಗತ್ಯ.
  • ಸರ್ಕಾರಿ ಯೋಜನೆಗಳ ಪಡೆಯಲು ಆಧಾರ್ ಬೇಕು.
  • ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಅನಗತ್ಯ.
  • ಸೆಲ್ ಫೋನ್ ಕಂಪನಿಗಳು ಆಧಾರ್ ಪಡೆಯುವಂತಿಲ್ಲ.
  • ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಕೇಳಬಾರದು.
  • ಶಾಲೆಗಳು ಮಕ್ಕಳ ಆಧಾರ್ ಸಂಖ್ಯೆ ಕೇಳುವಂತಿಲ್ಲ.

Leave a Reply