ರಾಮ ಮಂದಿರಕ್ಕೆ ಶೀಘ್ರವೇ ಮುಹೂರ್ತ! ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ ಎಂದ ಸುಪ್ರೀಂ!

ಡಿಜಿಟಲ್ ಕನ್ನಡ ಟೀಮ್:

‘ಮಸೀದಿ ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ. ನಮಾಜ್ ಮಾಡಲು ಮಸೀದಿಯೇ ಬೇಕಿಲ್ಲ…’ ಎಂದು ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.

1994ರ ಇಸ್ಮಾಯಿಲ್ ಫಾರುಕಿ ತೀರ್ಪನ್ನು ಮರುಪರಿಶೀಲಿಸಬೇಕೆ ಎಂಬ ಕುರಿತ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಮಸೀದಿ ಕುರಿತು ಫಾರೂಕಿ ತೀರ್ಪಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗಾಗಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ ಎಂದು ತಿಳಿಸಿದೆ. ಇದರೊಂದಿಗೆ ರಾಮಜನ್ಮ ಭೂಮಿ ವಿವಾದ ಪ್ರಕರಣದ ಕುರಿತು ತ್ವರಿತ ವಿಚಾರಣೆ ನಡೆಯಲಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಶೀಘ್ರವೇ ಮುಹೂರ್ತ ನಿಗದಿಯಾಗಲಿದೆ.

ಅದರೊಂದಿಗೆ 1994 ರ ಫಾರೂಕಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಎತ್ತಿ ಹಿಡಿದಿದೆ. ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದು ಇಸ್ಮಾಯಿಲ್ ಫಾರೂಕಿ ಅವರು ತೀರ್ಪು ನೀಡಿದ್ದರು.

ತ್ರಿಸದಸ್ಯ ಪೀಠದ ಪೈಕಿ ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ. ದೀಪಕ್ ಮಿಶ್ರಾ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, 1994 ರ ಫಾರೂಕಿ ಪ್ರಕರಣದ ತೀರ್ಪನ್ನೇ ಎತ್ತಿ ಹಿಡಿದೆ. ಅಷ್ಟೇ ಅಲ್ಲದೇ 1994 ರ ಪ್ರಕರಣದ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಿಲ್ಲ. ಯಾವುದೇ ಧರ್ಮದ ಸ್ಥಳಗಳನ್ನು ಸರ್ಕಾರಗಳು ವಶಕ್ಕೆ ಪಡೆಯಬಹುದು ಎಂಬುದನ್ನೂ ಈ ಪೀಠ ತಿಳಿಸಿದೆ. ಆದರೆ ಫಾರೂಕಿ ಅವರ ತೀರ್ಪಿಗೆ ನನ್ನ ಸಹಮತ ಇಲ್ಲ, ಮಸೀದಿ ಇಸ್ಲಾಂ ನ ಅವಿಭಾಜ್ಯ ಅಂಗವೇ ಎಂಬ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ನ್ಯಾ.ನಜೀರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ 2010ರಲ್ಲಿ ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಮೂರು ಭಾಗವಾಗಿ ವಿಂಗಡಿಸುವಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆಯನ್ನು. ಅಕ್ಟೋಬರ್ 29ರಂದು ನಡೆಸಲು ನಿರ್ಧರಿಸಲಾಗಿದೆ.

ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಲು ನಿರಾಕರಿಸುವ ಮೂಲಕ ರಾಮಜನ್ಮ ಭೂಮಿ ವಿವಾದ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಅವಕಾಶ ಮಾಡಿಕೊಡಲಾಗಿದ್ದು, ಈ ಪ್ರಕರಣದ ತೀರ್ಪು ಮುಂದಿನ ವರ್ಷ ಲೋಕಸಭಾ ಚುನಾವಣೆಗೂ ಮುನ್ನ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಸಹಜವಾಗಿ ತೀರ್ಪು ಚುನಾವಣೆ ಸಮಯದಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆದರೆ, ವಿರೋಧ ಪಕ್ಷಗಳಿಗೆ ಹಿನ್ನಡೆಯಾಗಲಿದೆ.

Leave a Reply