ಅಕ್ರಮ ಸಂಬಂಧ ಅಪರಾಧವಲ್ಲ! ದಾಂಪತ್ಯದಲ್ಲಿ ಗಂಡ ಹೆಂಡತಿ ಸಮಾನ: ಮತ್ತೊಂದು ‘ಸುಪ್ರೀಂ’ ತೀರ್ಪು!

ಡಿಜಿಟಲ್ ಕನ್ನಡ ಟೀಮ್:

‘ದಾಂಪತ್ಯದಲ್ಲಿ ಗಂಡ ಮತ್ತು ಹೆಂಡತಿ ಸರಿಸಮಾನರು. ಎಲ್ಲ ವೀಚಾರಗಳಲ್ಲೂ ಪತಿಯೇ ಶ್ರೇಷ್ಠವಲ್ಲ. ಹೆಂಡತಿ ಗಂಡನ ಸೇವಕಿಯಲ್ಲ…’ ಇದು ಅನೈತಿಕ ಸಂಬಂಧ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ!

ಅಕ್ರಮ ಅಥವಾ ಅನೈತಿಕ ಸಂಬಂಧದ ಬಗ್ಗೆ ಕ್ರಿಮಿನಲ್ ಅಪರಾಧದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ, ‘ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ. ಇದನ್ನು ವಿವಾಹ ವಿಚ್ಛೇದನಕ್ಕೆ ಕಾರಣವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಪಪಡಿಸಿದೆ.

ಈ ತೀರ್ಪಿನೊಂದಿಗೆ ಅನೈತಿಕ ಸಂಬಂಧ ಅಪರಾಧ ಎಂದು ಭಾರತೀಯ ಸಂವಿಧಾನದಲ್ಲಿರುವ ಹಳೆಯ ಕಾನೂನನ್ನು ರದ್ದುಗೊಳಿಸಿದೆ. ಹೀಗಾಗಿ 158 ವರ್ಷಗಳಿಂದ ಜಾರಿಯಲ್ಲಿದ್ದ ಅನೈತಿಕ ಸಂಬಂಧ ಅಪರಾಧವೆಂಬ ಸೆಕ್ಷನ್ 497 ಇನ್ನು ಮುಂದೆ ರದ್ದಾಗಲಿದೆ.

ಕಳೆದ ವಿಚಾರಣೆ ವೇಳೆ ಅನೈತಿಕ ಸಂಬಂಧ ಪ್ರಕರಣಗಳಲ್ಲಿ ಕೇವಲ ಪುರುಷರನ್ನೇ ಏಕೆ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಇಂತಹ ಪ್ರಕರಣದಲ್ಲಿ ಪುರುಷನ ಪಾತ್ರದಷ್ಟೇ ಮಹಿಳೆಯ ಪಾತ್ರವೂ ಇರುತ್ತದೆ. ಆದರೆ ಕೇವಲ ಅಕ್ರಮ ಸಂಬಂಧ ಪ್ರಕರಣಗಳಲ್ಲಿ ಕೇವಲ ಪುರುಷರನ್ನೇ ಅಪರಾಧಿ ಮಾಡಲಾಗುತ್ತಿದೆ. ಇದರಿಂದ ಲಿಂಗ ಸಮಾನತೆ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿತ್ತು.

ಈಗ ದಾಂಪತ್ಯದಲ್ಲಿ ಇವರಿಬ್ಬರು ಸರಿಸಮಾನರು ಎಂಬುದನ್ನು ಮತ್ತೊಮ್ಮೆ ಎತ್ತಿ ಹಿಡಿದ ನ್ಯಾಯಾಲಯ, ಸುಪ್ರೀಂಕೋರ್ಟ್ ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದೆ.

ಇದೇ ವೇಳೆ ಮಹಿಳೆಯರನ್ನು ಗೌರವದಿಂದ ಕಾಣಬೇಕು. ವನಿತೆಯರನ್ನು ಅಗೌರವದಿಂದ ನೋಡಿದರೆ ಅದು ಅಸಂವಿಧಾನಿಕ. ಅನೈತಿಕ ಸಂಬಂಧವು ಸಾಮಾಜಿಕವಾಗಿ ತಪ್ಪು. ಆದರೆ ಇದನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸಲು ಆಗದು ಎಂದು ಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್, ಡಿ.ವೈ.ಚಂದ್ರಚೂಡ್, ಆರ್.ಎಫ್.ನಾರಿಮನ್ ಹಾಗೂ ಇಂದು ಮಲ್ಹೋತ್ರಾ ಅವರನ್ನೊಳಗೊಂಡ ಪಂಚ ಪೀಠ, ‘ಅನೇಕ ದೇಶಗಳಲ್ಲಿ ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ. ಭಾರತದಲ್ಲೂ ಇನ್ನು ಮುಂದೆ ದಂಡನಾತ್ಮಕ ಅಪರಾಧವಾಗಿ ಮುಂದುವರೆಯುವುದಿಲ್ಲ. ಅನೈತಿಕ ಸಂಬಂಧದಿಂದ ವೈವಾಹಿಕ ವ್ಯವಸ್ಥೆ ಹದಗೆಡುತ್ತದೆ. ಇದು ವಿವಾಹ ವಿಚ್ಛೇದನಕ್ಕೂ ಎಡೆ ಮಾಡಿಕೊಡುತ್ತದೆ. ಸಮಾಜದ ದೃಷ್ಟಿಯಲ್ಲಿ ಇದನ್ನು ತಪ್ಪು ಎಂದು ಒಪ್ಪಿಕೊಳ್ಳಬಹುದಾದರೂ ಸೆಕ್ಷನ್ 497ನ್ನು ದಂಡನಾತ್ಮಕ ಅಥವಾ ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದೆ.

Leave a Reply