ಮಾರಾಮಾರಿ, ಬಿಜೆಪಿ ಸಭಾತ್ಯಾಗದ ನಡುವೆ ಕಾಂಗ್ರೆಸ್ ನ ಗಂಗಾಂಬಿಕೆ ಬೆಂಗಳೂರು ನೂತನ ಮೇಯರ್, ಜೆಡಿಎಸ್ ನ ರಮೀಳಾ ಡೆಪ್ಯುಟಿ ಮೇಯರ್

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಹಾಗೂ ಕಾಂಗ್ರೆಸ್ ನ ಪಾಲಿಕೆ ಸದಸ್ಯರ ನಡುವಣ ಮಾರಾಮಾರಿಯ ನಡುವೆ ನಡೆದ ಚುನಾವಣೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್ ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಉಪ ಮೇಯರ್ ಆಗಿ ಜೆಡಿಎಸ್ ನ ರಮೀಳಾ ಅವರು ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಚುನಾವಣೆಯ ಅಂತಿಮ ಕ್ಷಣದಲ್ಲಿ ಬಿಜೆಪಿ ಸಭಾತ್ಯಾಗ ಮಾಡಿದ ಪರಿಣಾಮ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಗಂಗಾಂಬಿಕೆ ಅವರ ಪರ 130 ಸದಸ್ಯರು ಮತ ಚಲಾವಣೆಯಾದರೆ, ಇವರ ವಿರುದ್ಧ ಯಾವ ಮತ ಬೀಳಲಿಲ್ಲ. ಇನ್ನು ಬಿಜೆಪಿಯ ಶೋಭಾ ಆಂಜನಪ್ಪ ಅವರ ಪರ ಯಾವುದೇ ಮತ ಬೀಳಲಿಲ್ಲ. ಆದರೆ ಇವರ ವಿರುದ್ಧ 130 ಮತಗಳು ಚಲಾವಣೆ ಆದವು. ಹೀಗಾಗಿ 153ನೇ ವಾರ್ಡಿನ ಸದಸ್ಯೆಯಾದ ಗಂಗಾಂಬಿಕೆ ಅವರು ಮಹಾಪೌರರಾಗಿ ಆಯ್ಕೆಯಾದರು. ಇದೇ ರೀತಿ ಉಪ ಮೇಯರ್ ಆಯ್ಕೆ ನಡೆದ ಪರಿಣಾಮ ಜೆಡಿಎಸ್ ನ ರಮೀಳಾ ಉಮಾಶಂಕರ್ ಉಪ ಮಹಾಪೌರರಾಗಿ ಆಯ್ಕೆಯಾದರು.

ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತು ಉಪ ಮೇಯರ್ ರಮೀಳಾ ಉಮಾಶಂಕರ್

ಬಿಜೆಪಿ ಪ್ರಯತ್ನ ವ್ಯರ್ಥ
ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ಪಟ್ಟು ಹಿಡಿದಿದ ಬಿಜೆಪಿ ಪಕ್ಷೇತರರು ಹಾಗೂ ಜೆಡಿಎಸ್ ನ ಕೆಲ ಸದಸ್ಯರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದರು. ಜೆಡಿಎಸ್ ನ ಕಾರ್ಪೋರೇಟರ್ ದೇವದಾಸ್ ಹಾಗೂ ಕೆಲವು ಪಕ್ಷೇತರ ಪಾಲಿಕೆ ಸದಸ್ಯರು ಬಿಜೆಪಿ ಪಾಳಯದೊಂದಿಗೆ ಆಗಮಿಸಿದಾಗ ಅವರನ್ನು ತಮ್ಮ ಕಡೆಗೆ ಕರೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮುಂದಾದರು. ಆಗ ಬಿಜೆಪಿ ಹಾಗೂ ಕಾಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು. ಈ ವಾಗ್ವಾದ ಮಿತಿಮೀರಿ ಸದಸ್ಯರು ಕೈಕೈ ಮಿಲಾಯಿಸಲು ಮುಂದಾದರು.

ಈ ಗದ್ದಲದ ವಾತಾವರಣದ ನಡುವೆಯೇ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆ ಆರಂಭಿಸಿದ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ ಅವರು, ಮೊದಲು ಸದಸ್ಯರ ಹಾಜರಾತಿ ಪಡೆದರು. ಈ ಹಾಜರಾತಿ ಪಡೆದ ನಂತರ 259 ಸದಸ್ಯರ ಪೈಕಿ 253 ಸದಸ್ಯರು ಮಾತ್ರ ಹಾಜರಾತಿಗೆ ಸಹಿ ಹಾಕಿದರೆ, ಆರು ಮಂದಿ ಸಹಿ ಹಾಕಿರಲಿಲ್ಲ. ಸಹಿ ಹಾಕದವರ ಮತವನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯುಕ್ತರು ಪ್ರಕಟಿಸಿದರು. ನಂತರ ಹಾಜರಾತಿಗೆ ಸಹಿ ಹಾಕದವರ ಹೆಸರನ್ನು ಪ್ರಕಟಿಸಿದರು. ಕಾಂಗ್ರೆಸ್ ನ ರೋಷನ್ ಬೇಗ್, ಬಿಜೆಪಿಯ ನಿರ್ಮಲಾ ಸೀತರಾಮನ್, ಅನಂತಕುಮಾರ್, ಎಸ್.ಆಶಾ ಸುರೇಶ್, ಲಲಿತಾ ತಿಮ್ಮನಂಜಯ್ಯ, ನಾದಿಮ್ ಖಾನ್ ಅವರು ಹಾಜರಾತಿಗೆ ಸಹಿ ಹಾಕದ ಕಾರಣ ಇವರ ಮತ ಪರಿಗಣಿಸಲಿಲ್ಲ.

ಈ ಮಧ್ಯೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಜಯರಾಮ್ ರಮೇಶ್, ವಿ.ಎಸ್ ಉಗ್ರಪ್ಪ, ಸಿ.ಆರ್ ಮನೋಹರ್ ಅವರ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಚುನಾವಣಾ ಆಯುಕ್ತರಿಗೆ ಪತ್ರ ಬರೆದರು. ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಆಯುಕ್ತರು, ಮತದಾನಪಟ್ಟಿಯಲ್ಲಿ ಅವರ ಹೆಸರಿರುವುದರಿಂದ ಕಾನೂನಿನ ಪ್ರಕಾರ ಅವರಿಗೆ ಮತದಾನದ ಹಕ್ಕು ನೀಡಲಾಗುವುದು ಎಂದು ತಿಳಿಸಿದರು.

ಈ ಹಂತದಲ್ಲಿ ತಮ್ಮ ಎಲ್ಲ ಪ್ರಯತ್ನಗಳು ವಿಫಲವಾಗಿರುವುದನ್ನು ಮನಗಂಡ ಬಿಜೆಪಿ ನಾಯಕರು ಸಭಾತ್ಯಾಗ ಮಾಡಿದರು. ಬಿಜೆಪಿ ನಾಯಕರಾದ, ಪಿ.ಸಿ ಮೋಹನ್, ಸದಾನಂದ ಗೌಡ, ವಿ.ಸೋಮಣ್ಣ ಸೇರಿದಂತೆ ಅನೇಕರು ಸಭಾತ್ಯಾಗ ಮಾಡಲು ಮುಂದಾದರು. ಆಗ ಆಯುಕ್ತರು ಒಮ್ಮೆ ಸಭಾತ್ಯಾಗ ಮಾಡಿದರೆ ಮತ್ತೆ ಒಳಗೆ ಪ್ರವೇಶ ಇರುವುದಿಲ್ಲ ಎಂದು ಸೂಚನೆಯನ್ನೂ ನೀಡಿದರು. ಆದರೂ ಬಿಜೆಪಿ ನಾಯಕರು ಸಭಾತ್ಯಾಗ ಮಾಡಿದ ಪರಿಣಾಮ ಮತ್ತೆ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಪಟ್ಟ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿಯ ಪಾಲಾಯಿತು.

ಕಳೆದೊಂದು ವಾರದಿಂದ ಕಾಂಗ್ರೆಸ್‌ನಲ್ಲಿ ಮೇಯರ್ ಆಯ್ಕೆ ಕಸರತ್ತು ಚಾಲನೆಗೆ ಬಂದಿದ್ದು, ಯಾರನ್ನು ಮೇಯರ್ ಮಾಡಬೇಕು ಅನ್ನೋದು ಕಾಂಗ್ರೆಸ್ ರಾಜ್ಯ ಘಟಕಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಗಂಗಾಂಬಿಕೆ ಹಾಗೂ ಸೌಮ್ಯಾ ಶಿವಕುಮಾರ್ ಅವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತಾದರೂ ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರು ಗಂಗಾಂಬಿಕೆ ಅವರಿಗೆ ಬೆಂಬಲ ನೀಡಿದರು. ಹೀಗಾಗಿ ಗಂಗಾಂಬಿಕೆ ಅವರು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದರು.

ಪ್ರತಿ ಬಾರಿ ಮೇಯರ್, ಉಪ ಮೇಯರ್ ಆಯ್ಕೆ ಸಂದರ್ಭದಲ್ಲಿ ಅಂತಿಮ ಕ್ಷಣದಲ್ಲಿ ಕಸರತ್ತು ನಡೆಸುವ ಬಿಜೆಪಿ ಈ ಬಾರಿಯೂ ತನ್ನ ಪ್ರಯತ್ನ ನಡೆಸಿತ್ತಾದರೂ ಯಶಸ್ವಿಯಾಗದೇ ನಿರಾಸೆ ಅನುಭವಿಸುವಂತಾಗಿದೆ.

ಮೇಯರ್ ಹಾಗೂ ಉಪಮೇಯರ್ ಆಯ್ಕೆ ಹೇಗೆ?

 • ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ಬಿಬಿಎಂಪಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆಯುತ್ತದೆ.
 • ಬೆಳಗ್ಗೆ 8 ರಿಂದ 9.30ರವರೆಗೆ ಮೇಯರ್ ಉಪಮೇಯರ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ.
 • ಬೆಳಗ್ಗೆ 11 ಗಂಟೆಗೆ ಎಲ್ಲಾ ಕಾರ್ಪೋರೇಟರ್‌ಗಳು ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಿಗೆ ಕೆಂಪೇಗೌಡ ಪೌರ ಸಭಾಂಗಣಕ್ಕೆ ಪ್ರವೇಶ.
 • ಬೆಳಗ್ಗೆ 11.30 ಕ್ಕೆ ಎಲ್ಲಾ ಸದಸ್ಯರ ಹಾಜರಾತಿ ಪಡೆಯಲಾಗುತ್ತೆ. ಬಳಿಕ ಮೇಯರ್, ಉಪಮೇಯರ್  ಸ್ಥಾನಕ್ಕೆ ಚುನಾವಣೆ ಆರಂಭ.

ಮೇಯರ್ ಆಯ್ಕೆ ಪ್ರಕ್ರಿಯೆ…

 • ನಾಮಪತ್ರಗಳ ಪರಿಶೀಲನೆ
 • ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ
 • ಅವಶ್ಯಕತೆ ಇದ್ದರೆ ಚುನಾವಣೆ. (ಸ್ಪರ್ಧಿಸಿದ ಅಭ್ಯರ್ಥಿಗಳ ಪರ ಹಾಗೂ ವಿರೋಧ ಮತ ಚಲಾವಣೆ)
 • ಕೊನೆಗೆ ಫಲಿತಾಂಶ ಪ್ರಕಟಣೆ.

ಮೇಯರ್ ಆಯ್ಕೆ ಅಂತಿಮವಾದ ಬಳಿಕ  ಉಪಮೇಯರ್ ಚುನಾವಣೆ‌ ಪ್ರಕ್ರಿಯೆ ಆರಂಭವಾಗಲಿದೆ.

 • ನಾಮಪತ್ರಗಳ ಪರಿಶೀಲನೆ
 • ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ
 • ಅವಶ್ಯಕತೆ ಇದ್ದರೆ ಚುನಾವಣೆ (ಸ್ಪರ್ಧಿಸಿದ ಅಭ್ಯರ್ಥಿಗಳ ಪರ ಹಾಗೂ ವಿರೋಧ ಮತ ಚಲಾವಣೆ).
 • ಕೊನೆಗೆ ಫಲಿತಾಂಶ ಪ್ರಕಟಣೆ.

ಮತ ಚಲಾಯಿಸಲು ಬಿಬಿಎಂಪಿ ಸದಸ್ಯರು, ಬೆಂಗಳೂರಿನ‌ ಶಾಸಕರು, ಬೆಂಗಳೂರಿನ ಸಂಸದರು, ಬೆಂಗಳೂರು ವ್ಯಾಪ್ತಿಯ ವಿಧಾನಪರಿಷತ್ ಸದಸ್ಯರಿಗೆ ಅವಕಾಶ ಇರಲಿದೆ.

ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಒಟ್ಟು 259 ಮತದಾರರು ಮತದಾನ ಮಾಡಲು ಅವಕಾಶ ಇರಲಿದೆ.

 • ಒಟ್ಟು ಮತಗಳು 259
 • ಮ್ಯಾಜಿಕ್ ನಂಬರ್ 130
 • ಬಿಜೆಪಿ ಸಂಖ್ಯಾಬಲ 123
 • ಕಾಂಗ್ರೆಸ್ ಸಂಖ್ಯಾಬಲ 106
 • ಜೆಡಿಎಸ್ ಸಂಖ್ಯಾಬಲ 22
 • ಪಕ್ಷೇತರರು 8

Leave a Reply