ಔಷಧ ವ್ಯಾಪಾರಿಗಳ ಬಂದ್ ರಾಜ್ಯದಲ್ಲಿ ಸಂಪೂರ್ಣ ವಿಫಲ!

ಡಿಜಿಟಲ್ ಕನ್ನಡ ಟೀಮ್:

ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಶುಕ್ರವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ವಿಫಲವಾಗಿದೆ.

ಔಷಧಾಲಯಗಳ ಬಂದ್ ಕರೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಮತ್ತು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜೀವರಕ್ಷಕ ಔಷಧಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ವತಿಯಿಂದ ಈಗಾಗಲೇ ಸೂಚನೆ ನೀಡಲಾಗಿತ್ತು. ಇಲಾಖೆಯ ಸೂಚನೆಯಂತೆ ಆಸ್ಪತ್ರೆಗಳು ಮತ್ತು ಔಷಧಾಲಯಗಳು ಕಾರ್ಯನಿರ್ವಹಿಸಿದ್ದರಿಂದ ರೋಗಿಗಳಿಗೆ ಯಾವುದೇ ತೊಂದರೆಯಾಗಿಲ್ಲ.

ದೇಶಾದ್ಯಂತ ಕರೆ ನೀಡಲಾಗಿದ್ದ ಔಷಧ ಅಂಗಡಿಗಳ ಮುಷ್ಕರಕ್ಕೆ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಔಷಧ ಅಂಗಡಿಗಳು ಮುಚ್ಚುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದರೆ, ಮತ್ತೆ ಕೆಲ ಔಷಧ ಅಂಗಡಿಗಳು ಎಂದಿನಂತೆ ವಹಿವಾಟು ನಡೆಸಿದವು.

ರಾಜ್ಯದಲ್ಲಿ ಔಷಧಾಲಯಗಳ ಮುಷ್ಕರಕ್ಕೆ ಕೆಲವರ ವಿರೋಧವಿದ್ದು, ಔಷಧಾಲಯಗಳನ್ನು ಎಂದಿನಂತೆ ತೆರೆಯುವುದಾಗಿ ಹೇಳಿಕೆ ನೀಡಿದ್ದರು. ಇದರಿಂದ ಔಷಧಾಲಯಗಳ ಮಾಲೀಕರಿಗೆ ಮುಷ್ಕರ ನಡೆಸುವ ಬಗ್ಗೆ ಗೊಂದಲವಿದ್ದ ಕಾರಣ ಸುವರ್ಣ ಕರ್ನಾಟಕ ಕೆಮಿಸ್‌ಟ್‌ ಅಂಡ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಹೆಸರಿನ ಔಷಧ ಮಾರಾಟಗಾರರ ಮುಷ್ಕರಕ್ಕೆ ಬೆಂಬಲ ನೀಡದೆ ಬೇಡಿಕೆಗಳ ಈಡೇರಿಕೆಗಾಗಿ ಕಾನೂನಾತ್ಮಕ ಹೋರಾಟ ನಡೆಸಿದೆ.

Leave a Reply