ಆರ್. ಅಶೋಕ್ ವಿರುದ್ಧ ಸೇಡು ತೀರಿಸಿಕೊಂಡ ಬಿಎಸ್‌ವೈ?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಬಿಬಿಎಂಪಿ ಚುನಾವಣೆ ವೇಳೆ ಬಟಾಬಯಲಾಗಿದೆ. ಈಗಾಗಲೇ ಸಾಕಷ್ಟು ಬಾರಿ ಆಡಳಿತ ಸರ್ಕಾರದ ವಿರುದ್ಧ ಮುಗ್ಗರಿಸಿ ಬಿದ್ದಿದ್ದ ಬಿಜೆಪಿ ನಾಯಕರು, ಬಿಬಿಎಂಪಿ ಚುನಾವಣೆ ವೇಳೆಯೂ ತಾವು ಅಸಮರ್ಥರು ಎನ್ನೋದನ್ನು ಸಾರಿಕೊಂಡಿದ್ದಾರೆ, ಸಾಬೀತು ಮಾಡಿಕೊಂಡಿದ್ದಾರೆ.

ವಾಮಮಾರ್ಗದಲ್ಲಿ ಆದರೂ ಸರಿಯೇ ನಾವು ಆಪರೇಷನ್ ಮಾಡಿಯೇ ಮಾಡ್ತೇವೆ ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ಸ್ವಪಕ್ಷದ ನಾಯಕರೇ ಚಳ್ಳೆಹಣ್ಣು ತಿನ್ನಿಸಿದ್ದಾರೆ ಅನ್ನೋ ಅಂಶ ಜಗಜ್ಜಾಹಿರಾಗಿದೆ. ಈ ಬಾರಿ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ಹಿಡಿದೇ ಹಿಡಿಯುತ್ತದೆ ಎನ್ನುವ ಸಮಯದಲ್ಲಿ ಆರ್ ಅಶೋಕ್‌ಗೆ ಕೈ ಕೊಟ್ಟಿರೋದು ಯಡಿಯೂರಪ್ಪ ಅನ್ನೋ ಮಾತುಗಳು ಬಿಜೆಪಿ ಪಡಸಾಲೆಯಲ್ಲೇ ಕೇಳಿಬಂದಿವೆ. ಅಶೋಕ್ ಯೋಜನೆಗಳು ಸಕ್ಸಸ್ ಆದ್ರೆ ಮುಂದೆ ಕಷ್ಟವಾಗಲಿದೆ ಅನ್ನೋ ಕಾರಣಕ್ಕೆ ಯಡಿಯೂರಪ್ಪ ಬಿಜೆಪಿ ಸೋಲಿಸಲು ಪಕ್ಕಾ ಪ್ಲಾನ್ ಮಾಡಿದ್ದರು. ಇದರ ಹಿಂದೆ ಆರ್. ಅಶೋಕ್ ಮೇಲಿನ ಸೇಡು ಕೆಲಸ ಮಾಡಿದೆಯಂತೆ.

ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಕಾಂಗ್ರೆಸ್ ಕೆಲ ನಾಯಕರ ವಿರುದ್ಧ ಮುನಿಸಿಕೊಂಡಾಗ ಆಪರೇಷನ್ ಕಮಲ ಮಾಡಲು‌ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅಖಾಡ ಪ್ರವೇಶ ಮಾಡಿದ್ರು. ಈ ವೇಳೆ ಯಡಿಯೂರಪ್ಪ ತಮ್ಮ ಹಿಂಬಾಲಕರನ್ನು ಒಂದೊಂದು ಯೋಜನೆಗಳಿಗೆ ನಿಯೋಜನೆ ಮಾಡಿದ್ರು. ಆಗ ಯಡಿಯೂರಪ್ಪ ಅವರಿಗೆ ಸಿಎಂ ಕುಮಾರಸ್ವಾಮಿ ನೇರವಾಗಿ ತರಾಟೆಗೆ ತೆಗೆದುಕೊಂಡು, ‘ಯಡಿಯೂರಪ್ಪ ಯೋಜನೆಯ ಪಿನ್‌ ಟು ಪಿನ್ ಮಾಹಿತಿ ನನ್ನ ಬಳಿ ಇದೆ. ಒಂದು ವೇಳೆ ಆಪರೇಷನ್ ಕಮಲ ಅಂತೇನಾದ್ರು ಮುಂದುವರಿದ್ರೆ ನಮ್ಮ ಬಳಿಯೂ ಸರ್ಕಾರವಿದೆ. ಏನು ಮಾಡಬೇಕೆಂದು ನಮಗೂ ಗೊತ್ತಿದೆ’ ಎಂದು ಧಮಕಿ ಹಾಕುವ ರೀತಿಯಲ್ಲಿ ಎಚ್ಚರಿಕೆ ಕೊಟ್ಟಿದ್ರು. ಈ ವೇಳೆ ಪಕ್ಷದ ಎಲ್ಲಾ ರಹಸ್ಯಗಳನ್ನು ಸರ್ಕಾರಕ್ಕೆ ಮುಟ್ಟಿಸಿರೋದು ಆರ್. ಅಶೋಕ್ ಅನ್ನೋದು ಬಿಎಸ್‌ವೈ ಬಳಗದ ಬಲವಾದ ನಂಬಿಕೆ.

ಅದೇ ಕಾರಣಕ್ಕೆ ಈ ಬಾರಿ ಅಶೋಕ್ ಯೋಜನೆ ಉಲ್ಟಾ ಹೊಡೆಯುವಂತೆ ಪ್ಲಾನ್ ಮಾಡಿದ್ರಂತೆ. ಒಂದು ವೇಳೆ ಅಶೋಕ್ ಏನಾದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸೋಲು ಉಂಟು ಮಾಡುವುದು ಪಕ್ಕಾ ಆಗಿದ್ರೆ ಬಿಎಸ್‌ವೈ ಬೆಂಬಲಿಗರು ಮೈತ್ರಿ ಅಭ್ಯರ್ಥಿಗಳಿಗೆ ಮತ ಹಾಕೋದು ಕನ್ಫರ್ಮ್ ಆಗಿತ್ತು ಅನ್ನೋ ಮಾಹಿತಿಯೂ ಸಿಕ್ಕಿದೆ. ಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ರೂಪಿಸಿದ ಮಾಸ್ಟರ್ ಪ್ಲಾನ್!

ಕಾಂಗ್ರೆಸ್ ಸಾಕಷ್ಟು ಯೋಜನೆ ರೂಪಿಸಿ ಲಿಂಗಾಯತ ಸಮುದಾಯದ ಗಂಗಾಂಬಿಕೆ ಅವರನ್ನು ಅಭ್ಯರ್ಥಿಯಾಗಿಸಿತ್ತು. ರಾಜ್ಯದ ಎರಡು ಪ್ರಬಲ ಮಠಗಳಿಂದ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೂಚನೆ ರವಾನೆಯಾಗಿತ್ತು. ಈ ಕಾರಣದಿಂದಲೂ ಯಡಿಯೂರಪ್ಪನವರು ಆಶೋಕ್ ರೂಪಿಸಿದ ಆಪರೇಷನ್‌ಗೆ ಬೆಂಬಲ ನೀಡಲಿಲ್ಲ ಎನ್ನಲಾಗಿದೆ.

ಒಂದು ವೇಳೆ ಬಿಎಸ್ ಯಡಿಯೂರಪ್ಪ ಬೆಂಬಲ ನೀಡುವ ಮೂಲಕ ಕಾಂಗ್ರೆಸ್‌ನ ಲಿಂಗಾಯತ ಅಭ್ಯರ್ಥಿಗೆ ಸೋಲು ಎದುರಾದರೆ ಮಠಗಳ ಪ್ರಮುಖರು ಮುನಿಸಿಕೊಳ್ಳುವ ಸಾಧ್ಯತೆ ಇತ್ತು. ಆ ಬಳಿಕ ಲಿಂಗಾಯತ ಅಭ್ಯರ್ಥಿಯನ್ನು ಆಪರೇಷನ್ ಕಮಲದ ಮೂಲಕ ಸೋಲಿಸಿದ್ರು ಅನ್ನೊ ಅಪಖ್ಯಾತಿ ಬಿಜೆಪಿ ಪಾಲಾಗುತ್ತಿತ್ತು. ಜೊತೆಗೆ ಬೆಂಗಳೂರಿನಲ್ಲಿ ಆರ್. ಅಶೋಕ್ ಪ್ರಾಬಲ್ಯ ಹೆಚ್ಚಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಬಿಎಸ್ ಯಡಿಯೂರಪ್ಪ ಉಲ್ಟಾ ಹೊಡೆದ್ರು. ಕೊನೆ ಗಳಿಗೆಯಲ್ಲಿ ಬಿಜೆಪಿಯ ಆಪರೇಷನ್ ಫೇಲ್ ಆಯ್ತು. ಒಟ್ಟಾರೆ ಯಡಿಯೂರಪ್ಪನವರು ಮಾಡಿದ ಆಪರೇಷನ್ ಅನ್ನು ಅಶೋಕ್ ಫೇಲ್ ಮಾಡಿದ್ರೆ, ಅಶೋಕ್ ರೂಪಿಸಿದ ಆಪರೇಷನ್ ಫೇಲ್ ಆಗುವಂತೆ ನೋಡಿಕೊಳ್ಳುವ ಮೂಲಕ ಯಡಿಯೂರಪ್ಪ ಸೇಡು ತೀರಿಸಿಕೊಂಡಿದ್ದಾರೆ.

Leave a Reply