ವಿಶ್ವೇಶ್ವರಯ್ಯನವರ ಆತ್ಮ ಕೆಆರೆಸ್ ಗೆ ಹಾರುವಂಥ ಮಾತಾಡಿರೋ ಸಚಿವ ಶಂಕರ್!

ಡಿಜಿಟಲ್ ಕನ್ನಡ ಟೀಮ್:

ಮಂತ್ರಿಯಾದವರು ಪರಮ ಪಂಡಿತರೇ ಆಗಿರಬೇಕು ಎಂದೇನೂ ಇಲ್ಲ. ಆದರೆ ಅವರಿಗೆ ಒಂದಿಷ್ಟಾದರೂ ಸಾಮಾನ್ಯ ಜ್ಞಾನ ಇರಲೇಬೇಕಾಗುತ್ತದೆ. ಅದಿಲ್ಲದಿದ್ದರೆ ಎಂಥ ಅವಾತಂರವಾಗುತ್ತದೆ ಎಂಬುದಕ್ಕೆ ‘ಕಟುಸಾಕ್ಷಿ’ಯಾಗಿ ನಿಂತಿದ್ದಾರೆ ರಾಜ್ಯ ಅರಣ್ಯ ಸಚಿವ ಆರ್. ಶಂಕರ್!

ಕನ್ನಂಬಾಡಿ ಅಣೆಕಟ್ಟೆಯ ‘ಮಿದುಳು’ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಬೇರೆ-ಬೇರೆ ರಾಜ್ಯಗಳಲ್ಲೂ ಹಲವಾರು ಅಣೆಕಟ್ಟೆ ನಿರ್ಮಾಣದ ಧಾತುಶಕ್ತಿಯಾಗಿ,ಇಡೀ ದೇಶಕ್ಕೆ ಸುಪರಿಚಿತರಾದ ನಮ್ಮ ನಾಡಿನವರೇ ಆದ ವಿಶ್ವೇಶ್ವರಯ್ಯನವರ ಬಗ್ಗೆ ನಮ್ಮ ನಾಡಿನವರಿಗೇ, ಅದರಲ್ಲೂ ಮಂತ್ರಿಯಂಥ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೇ ಗೊತ್ತಿಲ್ಲ ಅಂದರೆ ಹೇಗಾಗಬೇಡ.

ಆಗಿರುವುದು ಏನಪ್ಪಾ ಅಂದರೆ, ಅರಣ್ಯ ಸಚಿವ ಆರ್. ಶಂಕರ್ ವಿಶ್ವೇಶ್ವರಯ್ಯನವರ ಹುಟ್ಟೂರು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಗೇ ಶುಕ್ರವಾರ ಹೋಗಿ, ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ. ಜತೆಗೆ ಪಕ್ಕದಲ್ಲೇ ಇದ್ದ ಅವರ ಪುತ್ಥಳಿಗೂ ಹಾರ ಹಾಕಿದ್ದಾರೆ. ಆದರೆ ಅವರಿಗೆ ತಾವು ಯಾರ ಸಮಾಧಿಗೆ ಹೂವು ಹಾಕಿದೆವೆಂಬುದು ಗೊತ್ತಿರಲಿಲ್ಲ. ತಮ್ಮ ಪಕ್ಕದಲ್ಲೇ ಇದ್ದ ಆಪ್ತಕಾರ್ಯದರ್ಶಿಗಳನ್ನು ‘ಇದು ಯಾರ ಸಮಾಧಿ’ ಎಂದು ಕೇಳಿದ್ದಾರೆ.ಸುತ್ತಮುತ್ತ ಇದ್ದ ಸಾರ್ವಜನಿಕರು ಸಚಿವರ ಮಾತು ಕೇಳಿ ಬೆಚ್ಚಿ ಬಿದ್ದಿದ್ದಾರೆ. ಇವರು ಯಾವ ಸೀಮೆ ಮಂತ್ರಿಯಪ್ಪಾ ಎಂದು ಶಪಿಸಿಕೊಂಡಿದ್ದಾರೆ.

ಇದೊಂದು ಪೂರ್ವನಿಗದಿತ ಕಾರ್ಯಕ್ರಮ. ದಿಢೀರ್ ಎಂದು ಏರ್ಪಾಡಾದುದ್ದೇನೂ ಅಲ್ಲ. ಮಂತ್ರಿಯಾದವರಿಗೆ ಕಾರ್ಯಕ್ರಮಕ್ಕೆ ಹೋಗುವಾಗ ಪೂರ್ವ ಮಾಹಿತಿ ಇರುತ್ತದೆ. ಕೇಳಿ ತಿಳಿದುಕೊಳ್ಳುವುದು ಅವರ ಜವಾಬ್ದಾರಿಯೂ ಹೌದು. ಅದರೂ ಅವರಿಗೆ ವಿಶ್ವೇಶ್ವರಯ್ಯ ಮತ್ತವರ ಸಮಾಧಿ ಬಗ್ಗೆ ಗೊತ್ತಾಗಿಲ್ಲ ಎಂದರೆ ಅದು ಅಸೀಮ ಅಸಡ್ಡೆಯ ಪ್ರತೀಕ. ಶಂಕರ್ ಅವರು ಬೆಂಗಳೂರಿನ ಕಾರ್ಪೊರೇಟರ್, ಡೆಪ್ಯೂಟಿ ಮೇಯರ್ ಆಗಿದ್ದವರು. ನಾಲ್ಕನೇ ತರಗತಿ ಮಕ್ಕಳಿಗೂ ಗೊತ್ತಿರುವ ವಿಶ್ವೇಶ್ವರಯ್ಯನವರ ಬಗ್ಗೆ ಎಸ್ಸೆಸ್ಸೆಲ್ಸಿ ಪಾಸಾಗಿರೋ ಸಚಿವರಿಗೆ ಗೊತ್ತಾಗದೇ ಹೋದದ್ದು ಪರಮಾಶ್ಚರ್ಯ. ಎಲ್ಲಕ್ಕಿಂತ ಮಿಗಿಲಾಗಿ ಇವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ (ರಾಣೆಬೆನ್ನೂರು) ಆರಿಸಿ ಬಂದಿರುವ ‘ಪ್ರಜ್ಞಾವಂತ’ರು.

ಅಂದಹಾಗೆ, ಶಂಕರ್ ಅವರ ಮಾತು ಕೇಳಿ ವಿಶ್ವೇಶ್ವರನವರ ಆತ್ಮ ಸಮಾಧಿಯಿಂದ ಎದ್ದು ಬಂದು ಕೆಆರೆಸ್ ಗೆ ಹಾರಿರದಿದ್ದರೆ ಅದೇ ಪುಣ್ಯ!

Leave a Reply