ತಪ್ಪೊಪ್ಪಿಕೊಳ್ಳುವಂತೆ ಎಸ್ಐಟಿಯಿಂದ ಹಿಂಸೆ, ₹ 30 ಲಕ್ಷ ಆಮಿಷ: ಗೌರಿ ಹತ್ಯೆ ಆರೋಪಿಗಳ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ತಮ್ಮನ್ನು ಹೊಡೆದು, ಬಡಿದು ತಪ್ಪೊಪ್ಪಿಕೊಳ್ಳುವಂತೆ ವಿಶೇಷ ತನಿಖಾ ದಳದ (ಎಸ್ಐಟಿ) ಪೊಲೀಸರು ಟಾರ್ಚರ್ ನೀಡುತ್ತಿದ್ದಾರೆ ಎಂದು ಆರೋಪಿಗಳು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಪ್ರಕರಣದ ವಿಚಾರಣೆಗೆಂದು ಶುಕ್ರವಾರ ನ್ಯಾಯಾಲಯಕ್ಕೆ ಬಂದಿದ್ದ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ಹಾಗೂ ಮತ್ತೊಬ್ಬ ಆರೋಪಿ ಮನೋಹರ ಯಡವಿ ತಮಗೆ ಎದಿರಾದ ಮಾಧ್ಯಮದವರ ಬಳಿ ಗೋಳು ತೋಡಿಕೊಂಡಿದ್ದಾರೆ.

ತಮ್ಮನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡಲಾಗಿದೆ. ಗೌರಿ ಲಂಕೇಶ್ ಯಾರೆಂಬುದೇ ತಮಗೆ ಗೊತ್ತಿಲ್ಲ. ಆಕೆಯನ್ನು ಹತ್ಯೆ ಮಾಡುವ ಪ್ರಮೇಯವೂ ಇಲ್ಲ. ಆದರೂ ಎಸ್ಐಟಿ ಪೊಲೀಸರುಹೊಡೆದು-ಬಡಿದು ಹಿಂಸಿಸಿ ತಪ್ಪೊಪ್ಪಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ತಪ್ಪೊಪ್ಪಿಕೊಂಡರೆ ನಿಮ್ಮ ಕುಟುಂಬದವರಿಗೆ 25 ರಿಂದ 30 ಲಕ್ಷ ರುಪಾಯಿವರೆಗೂ ಭಕ್ಷೀಸು ಕೊಡುವುದಾಗಿ ಆಮೀಷವನ್ನೂ ಒಡ್ಡುತ್ತಿದ್ದಾರೆ. ತಪ್ಪೊಪ್ಪಿಕೊಳ್ಳದಿದ್ದರೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ವಿರುದ್ಧ ಕೇಸು ಜಡಿಯಲಾಗುವುದು ಎಂದು ಹೆದರಿಸುತ್ತಿದ್ದಾರೆ. ಖಾಲಿ ಹಾಳೆಗಳ ಮೇಲೆ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದಾರೆ. ಅವರು ಹೇಳಿಕೊಟ್ಟ ಹೇಳಿಕೆಗಳನ್ನು ನಮ್ಮಿಂದ ಹೇಳಿಸಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಪರಶುರಾಮ್ ವಾಗ್ಮೋರೆ ಆಕ್ರೋಶ ವ್ಯಕ್ತಪಡಿಸಿದರು.

ನಾವು ಅಮಾಯಕರು. ಎಂಟೆಂಟು ದಿನ ನಮ್ಮನ್ನು ಕೂಡಿ ಹಾಕಿ ಹಿಂಸಿಸಲಾಗಿದೆ. ನಮಗೆ ಜೀವ ಬೆದರಿಕೆ ಇದೆ. ನಮಗೇನಾದರೂ ಆದರೆ ಅದಕ್ಕೆ ಎಸ್ಐಟಿಯೇ ಹೊಣೆ ಎಂದೂ ಅವರು ಹೇಳಿದರು.

ನಮ್ಮನ್ನು ಯಾಕೆ ಇಲ್ಲಿಗೆ ಕರೆತಂದಿದ್ದಾರೆ, ಬಂಧಿಸಿದ್ದಾರೆ ಎಂಬುದೇ ಗೊತ್ತಿಲ್ಲ. ನಮ್ಮ ಮನೆಯವರನ್ನು ಭೇಟಿ ಮಾಡಲು ಬಿಡುತ್ತಿಲ್ಲ. ಅನವಶ್ಯಕವಾಗಿ ತೊಂದರೆ ಕೊಡುತ್ತಿದ್ದಾರೆ. ನಮ್ಮನ್ನು ಪ್ರಕರಣದಲ್ಲಿ ವಿನಾಕಾರಣ ಫಿಟ್ ಮಾಡಿಲಾಗಿದೆ ಎಂದು ಮತ್ತೊಬ್ಬ ಆರೋಪಿ ಮನೋಹರ ಯಡವಿ ತಿಳಿಸಿದರು.

Leave a Reply