ಕುಂದಾನಗರಿಯ ಕುರಶ್ ಆಟಗಾರ್ತಿ ಮಲಪ್ರಭಾ ಜಾಧವಗೆ ಮೋದಿ ನೆರವು!

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಬೆಳಗಾವಿಯ ಮಲಪ್ರಭಾ ಜಾಧವ ಅವರು ಕಂಚಿನ ಪದಕ ಗೆದ್ದಿದ್ದರು. ಇವರ ಈ ಸಾಧನೆಯನ್ನು ಗಮನಿಸಿರುವ ಪ್ರಧಾನಿ ನರೇಂದ್ರ ಮೋದಿ ಈ ಹುಡುಗಿಯನ್ನು 2020ರ ಟೋಕಿಯೋ ಒಲಿಂಪಿಕ್ಸ್ ಗೆ ಸಿದ್ಧಪಡಿಸಲು ಮೋದಿ ಉತ್ಸುಕರಾಗಿದ್ದಾರೆ.

ಹೌದು, ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ದೇಶದಲ್ಲಿ ಕುರಶ್ (ಕುಸ್ತಿ ಮಾದರಿಯ ಕ್ರೀಡೆ) ಅನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಠಿತ ಏಷ್ಯಾ ಕ್ರೀಡಾಕೂಟದಲ್ಲಿ ಪದಕ ಪಡೆಯುವುದು ಸಾಮಾನ್ಯ ಸಾಧನೆಯಲ್ಲ. ಹೀಗಾಗಿ ಮುಂದಿನ ಒಲಿಂಪಿಕ್ಸ್ ನಲ್ಲಿ ಭಾರತದಿಂದ ಬಲಿಷ್ಠ ಕ್ರೀಡಾಪಟುಗಳ ತಂಡವನ್ನು ಕಣಕ್ಕಿಳಿಸಲು ಕೇಂದ್ರ ಚಿಂತನೆ ನಡೆಸುತ್ತಿದ್ದು, ಮಲಪ್ರಭಾ ಜಾಧವ ಬಗ್ಗೆ ಸ್ವತಃ ಮೋದಿ ಅವರೇ ಮುಂದಾಗಿರೋದು ಗಮನಾರ್ಹ.

ಈ ವಿಚಾರವಾಗಿ ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಾ.ಪ್ರಭಾಕರ್ ಕೋರೆ, ‘ಏಷ್ಯಾ ಕ್ರೀಡಾಕೂಟದಲ್ಲಿ ಮಲಪ್ರಭಾ ಜಾಧವ ಅವರು ಕಂಚಿನ ಪದಕ ಗೆದ್ದ ನಂತರ ಈಕೆಯನ್ನು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಯಾರು ಮಾಡುವ ಬಗ್ಗೆ ಮೋದಿ ಭರವಸೆ ನೀಡಿದ್ದರು. ಪ್ರಧಾನಿ ಮೋದಿ ಅವರ ಸೂಚನೆಯಂತೆ ಕೆಎಲ್ಇ ಶಿಕ್ಷಣ ಸಂಸ್ಥೆ ಮೂಲಕ ಮಲಪ್ರಭಾ ಜಾಧವ ಹಾಗೂ ಇತರೆ ಐವರು ಕ್ರೀಡಾಪಟುಗಳಿಗೆ ಶಿಕ್ಷಣ ಹಾಗೂ ಅಗತ್ಯ ತರಬೇತಿ ನೀಡಲು ನಿರ್ಧರಿಸಲಾಗಿದೆ. ಪ್ರಧಾನಿ ಕಚೇರಿಯಿಂದ ಅಧಿಕೃತ ಸೂಚನೆ ಬರುವ ಮುನ್ನವೇ ನಾವೂ ಈ ಕ್ರೀಡಾ ಪ್ರತಿಭೆಗಳಿಗೆ ಕೆಎಲ್ಇ ಶಿಕ್ಷಣ ಸಂಸ್ಥೆ ಮೂಲಕ ಎಲ್ಲ ಸೌಕರ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದ್ದಾರೆ.

Leave a Reply