ಡಿಜಿಟಲ್ ಕನ್ನಡ ಟೀಮ್:
ಚಾಮುಂಡೇಶ್ವರಿ ಸೋಲಿನ ಕಹಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮರೆಯಲು ಇನ್ನೂ ಸಾಧ್ಯವಾಗಿಲ್ಲ. ರಾಹು-ಕೇತು, ಶನಿಗಳೆಲ್ಲ ಸೇರಿಕೊಂಡು ನನ್ನನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು ಎಂದು ಅವರು ಹೇಳಿದ್ದಾರೆ. ಆದರೆ ಆ ರಾಹು-ಕೇತು, ಶನಿಗಳು ಯಾರೆಂಬುದನ್ನು ಮಾತ್ರ ಅವರು ಬಹಿರಂಗಪಡಿಸಿಲ್ಲ.
ವರುಣಾ ನನ್ನ ಅದೃಷ್ಟದ ಕ್ಷೇತ್ರವಾಗಿತ್ತು. ಆದರೆ ಮಾತು ಕೊಟ್ಟಿದ್ದೆ ಎಂಬ ಕಾರಣಕ್ಕೆ ಅದನ್ನು ಬಿಟ್ಟು ಚಾಮುಂಡೇಶ್ವರಿಗೆ ಹೋದೆ. ಆದರೆ ಹೊಟ್ಟೆ ಕಿಚ್ಚಿಗೆ ಔಷಧಿ ಎಲ್ಲಾದರೂ ಇದೆಯೇ? ಹಿಂಗಾಗಿ ರಾಹು-ಕೇತು, ಶನಿಗಳೆಲ್ಲ ಒಂದಾಗಿ ನನ್ನನ್ನು ಸೋಲಿಸಿಬಿಟ್ರು ಎಂದು
ಕಾಂಗ್ರೆಸ್ನಲ್ಲಿ ಈಗಲೂ ನಾನೇ ಟ್ರಬಲ್ ಶೂಟರ್. ಹೀಗಾಗಿಯೇ ನನ್ನನ್ನು ಸಮ್ಮಿಶ್ರ ಸರಕಾರದ ಸಮಸ್ವಯ ಸಮಿತಿ ಅಧ್ಯಕ್ಷನನ್ನಾಗಿ ಮಾಡಿರೋದು. ಸರಕಾರ ಸುಭದ್ರವಾಗಿದೆ. ಐದು ವರ್ಷ ಅದಕ್ಕೆ ಏನೂ ಆಗಲ್ಲ ಎಂದು ಮೈಸೂರಿನ ವರುಣಾ ಕ್ಷೇತ್ರದ ಸಭೆಯಲ್ಲಿ ಭಾನುವಾರ ಹೇಳಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಾಲಮನ್ನಾ ಯೋಜನೆ ಬಗ್ಗೆ ಜನಕ್ಕೆ ಉತ್ತಮ ಅಭಿಪ್ರಾಯ ಇದೆ. ಸಮ್ಮಿಶ್ರ ಸರಕಾರಕ್ಕೂ ಇದರಿಂದ ಹೆಸರು ಬಂದಿದೆ ಎಂದರು. ಸಮನ್ವಯ ಸಮಿತಿ ಸಭೆಯನ್ನು ಯಾವಾಗಂದ್ರೆ ಆವಾಗ ಕರೆಯಲು ಆಗುವುದಿಲ್ಲ. ಅಗತ್ಯಬಿದ್ದಾಗ ಮಾತ್ರ ಕರೆಯುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರತಿಕ್ರಿಯೆಗೆ ಸಿಎಂ ನಕಾರ: ರಾಹು-ಕೇತು, ಶನಿಗಳೆಲ್ಲ ಸೇರಿಕೊಂಡು ನನ್ನನ್ನು ಸೋಲಿಸಿದ್ರು ಎಂದು ಸಿದ್ದರಾಮಯ್ಯನವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಲು ಸಿಎಂ ಕುಮಾರಸ್ವಾಮಿ ನಿರಾಕರಿಸಿದ್ದಾರೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಹೀಗಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೆಂಗಳೂರಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.