ಮತ್ತೆ ಸೇನೆಯಿಂದ ನಡೆದಿದೆಯೇ ಸರ್ಜಿಕಲ್ ಸ್ಟ್ರೈಕ್? ಮನ್ ಕಿ ಬಾತ್ ನಲ್ಲಿ ಮೋದಿ ಮಾತಿನ ಮರ್ಮವೇನು?

ಡಿಜಿಟಲ್ ಕನ್ನಡ ಟೀಮ್:

‘ನಾವು ಶಾಂತಿ ಪ್ರಿಯರು ನಿಜ, ಆದರೆ ನಮ್ಮ ತಂಟೆಗೆ ಬಂದು ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದರೆ ಸುಮ್ಮನಿರುವುದಿಲ್ಲ. ಶಾಂತಿ ಕದಡಲು ಪ್ರಯತ್ನಿಸಿದರೆ ಭಾರತೀಯ ಸೇನೆ ಯಾವ ರೀತಿ ಉತ್ತರ ನೀಡಲಿದೆ ಎಂಬುದನ್ನು ತೋರಿಸಿಕೊಟ್ಟಿದೆ…’ ಇದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಪಾಕಿಸ್ತಾನಕ್ಕೆ ರವಾನಿಸಿದ ಎಚ್ಚರಿಕೆ.

ನಿನ್ನೆಯಷ್ಟೇ 2016ರ ಗುರಿನಿರ್ದಿಷ್ಟ ದಾಳಿಯ ಎರಡನೇ ವರ್ಷಾಚರಣೆಯನ್ನು ದೇಶಾದ್ಯಂತ ಆಚರಿಸಲಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಭಾರತೀಯ ಸೇನೆ ಇತ್ತೀಚೆಗೆ ಎರಡನೇ ಬಾರಿ ಗುರಿ ನಿರ್ದಿಷ್ಟ ದಾಳಿ ನಡೆಸಿರುವ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮೋದಿ ಅವರ ಮಾತುಗಳು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ನಿನ್ನೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ‘ಗಡಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನಾವೆಲ್ಲರು ಹೆಮ್ಮೆ ಪಡುವಂತಹ ಬೆಳವಣಿಗೆ. ಸಮಯ ಬಂದಾಗ ಅದನ್ನು ಬಹಿರಂಗಪಡಿಸುತ್ತೇವೆ’ ಎಂಬ ಹೇಳಿಕೆ ಬೆನ್ನಲ್ಲೇ ಮೋದಿ ಅವರ ಇಂದಿನ ಹೇಳಿಕೆ ಸೇನೆಯ ದಾಳಿ ಕುರಿತ ಚರ್ಚೆಗೆ ಇಂಬು ನೀಡುತ್ತಿವೆ. ಹಾಗಾದರೆ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಹೇಳಿದ್ದೇನು ನೋಡೋಣ ಬನ್ನಿ…

  • ಭಾರತ ಶಾಂತಿಯನ್ನು ಪ್ರೀತಿಸುತ್ತದೆ. ಹಾಗೆಂದ ಮಾತ್ರಕ್ಕೆ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದರೆ ಸುಮ್ಮನಿರುವುದಿಲ್ಲ. ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ನಮ್ಮ ಸೈನಿಕರು ಹೇಗೆ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ.
  • ಭಾರತ ಜಾಗತಿಕ ಶಾಂತಿಯನ್ನು ಪ್ರತಿಪಾದಿಸುವ ದೇಶ.
  • ಎರಡು ಜಾಗತಿಕ ಯುದ್ಧದ ಸಂದರ್ಭದಲ್ಲಿ ಶಾಂತಿ ಸ್ಥಾಪನೆಗೆ ನಮ್ಮ ಲಕ್ಷಾಂತರ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ.
  • ನಾಲ್ಕು ದಶಕಗಳ ಕಾಲ ನಮ್ಮ ಸೈನಿಕರು ನೀಲಿ ಹೆಲ್ಮೆಟ್ ಧರಿಸಿ ಶಾಂತಿ ಸ್ಥಾಪನೆಗೆ ಹೋರಾಡಿದ್ದಾರೆ.
  • ಅಕ್ಟೊಬರ್ 8ರಂದು ವಾಯುಪಡೆ ದಿವಸ ಆಚರಿಸಲಾಗುತ್ತದೆ. ನಮ್ಮ ವಾಯುಪಡೆ ಜಾಗತಿಕ ಯುದ್ಧ ಮಾತ್ರವಲ್ಲದೆ, 1947ರಲ್ಲಿ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಮಾಡಿದಾಗ ವಾಯುಪಡೆಯ ಪಾತ್ರ ಮಹತ್ವದ್ದಾಗಿತ್ತು.
  • ಇಂದಿನ ಯುವಕರು ನಮ್ಮ ಸೇನೆ ಹಾಗೂ ಆದರ ಮೌಲ್ಯಗಳ ಕುರಿತು ಹೆಚ್ಚು ತಿಳಿದುಕೊಳ್ಳಬೇಕು. ಹೀಗಾಗಿ ಸರ್ಜಿಕಲ್ ದಾಳಿಯನ್ನು ಸ್ಮರಿಸಲು ಪರಾಕ್ರಮ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
  • ಬೇರೆ ದೇಶಗಳನ್ನು ಅತಿಕ್ರಮಿಸಿಕೊಳ್ಳುವ ಉದ್ದೇಶ ಭಾರತಕ್ಕಿಲ್ಲ. ಕೇವಲ ಶಾಂತಿ ಸ್ಥಾಪನೆ ಮಾತ್ರ ನಮ್ಮ ಗುರಿ.
  • ಬಾಪು (ಮಹಾತ್ಮ ಗಾಂಧಿ) ಅವರು ನಮಗೆಲ್ಲ ಶಾಂತಿ ಮಂತ್ರವನ್ನು ಕೊಟ್ಟಿದ್ದಾರೆ. ಪ್ರಸಕ್ತ ಕಾಲಮಾನದಲ್ಲಿ ಈ ಮಂತ್ರ ಹೆಚ್ಚು ಪ್ರಸ್ತುತವಾಗಿದೆ.
  • 2022ರ ವೇಳೆಗೆ ದೇಶದ ಶಿಕ್ಷಣ ವ್ಯವಸ್ಥೆ ಸುಧಾರಣೆ ಹಾಗೂ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ಖರ್ಚು ಮಾಡಲಾಗುತ್ತದೆ.

Leave a Reply