ತುಮಕೂರು ಮಾಜಿ ಮೇಯರ್ ಬರ್ಬರ ಹತ್ಯೆ

ಡಿಜಿಟಲ್ ಕನ್ನಡ ಟೀಮ್:

ತುಮಕೂರಿನ ಮಾಜಿ ಮೇಯರ್, ಹಾಲಿ ಕಾರ್ಪೊರೇಟರ್, ಜೆಡಿಎಸ್ ಮುಖಂಡ ರವಿಕುಮಾರ್ ಅವರನ್ನು ಕ್ಯಾತ್ಸಂದ್ರದ ಬಟವಾಡಿ ಬಳಿ ಭಾನುವಾರ ಬೆಳಗ್ಗೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ರೌಡಿಶೀಟರ್ ಕೂಡ ಆಗಿದ್ದ ರವಿಕುಮಾರ್ ಇವತ್ತು ಬೆಳಗ್ಗೆ 8 ಗಂಟೆ ಸುಮಾರಿಗೆ ವಾಕಿಂಗ್ ಮುಗಿಸಿ, ರಸ್ತೆ ಬದಿ ಟೀ ಕುಡಿಯುತ್ತಿದ್ದಾಗ KA 09, A 6484  ಸಂಖ್ಯೆಯ ಟೆಂಪೋದಲ್ಲಿ ಬಂದ ಏಳು ಮಂದಿ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಲಾಂಗ್ ಮತ್ತು ಮಚ್ಚುಗಳಿಂದ ಕತ್ತರಿಸಿ ಹಾಕಿದ್ದಾರೆ. ಖಾರದಪುಡಿ ಬಿದ್ದ ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿದ ರವಿಕುಮಾರ್ ಅವರನ್ನು ಹಂತಕರು ಅಟ್ಟಾಡಿಸಿಕೊಂಡು ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ. ಮಚ್ಚಿನೇಟಿಗೆ ಅವರ ತಲೆಭಾಗ ಗುರುತು ಸಿಗಲಾರದಷ್ಟು ಛಿದ್ರಛಿದ್ರವಾಗಿ ಹೋಗಿದೆ.

ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ್ದ ಟೆಂಪೋ ಕೊಲೆ ನಡೆದ ಸ್ಥಳದಿಂದ ಎರಡು ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಪತ್ತೆಯಾಗಿದೆ. ನಂದಿನಿ ಹಾಲಿನ ಬ್ಯಾನರ್ ಕಟ್ಟಿ ಮೈಸೂರಿಂದ ತರಲಾಗಿದ್ದ ಈ ಟೆಂಪೋದಲ್ಲಿಯೂ ಮಚ್ಚು, ಲಾಂಗ್ ಗಳು ಪತ್ತೆಯಾಗಿವೆ. ಹಂತಕರು ಟೆಂಪೋವನ್ನು ಇಲ್ಲಿ ಬಿಟ್ಟು, ಬೇರೆ ವಾಹನದಲ್ಲಿ ಪರಾರಿಯಾಗಿದ್ದಾರೆ.

ಇತ್ತೀಚೆಗೆ ಪಾಲಿಕೆ ಚುನಾವಣೆ ಸಂದರ್ಭ ರವಿಕುಮಾರ್ ಹಾಗೂ ಎದುರಾಳಿಗಳಿಗೂ ದೊಡ್ಡ ಪ್ರಮಾಣದ ಗಲಾಟೆಯೇ ಆಗಿತ್ತು. ನಾಯಕ ಸಮುದಾಯಕ್ಕೆ ಸೇರಿದ ರವಿಕುಮಾರ್ ಹೋರಾಟ ಮಾಡಿ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದು, ಅಲ್ಲಿಂದಲೇ ಸ್ಪರ್ಧಿಸಿ ಗೆದ್ದಿದ್ದರು. ಈ ವಿಚಾರವಾಗಿ ಗಲಾಟೆ ನಡೆದಿತ್ತು. ಅಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ರೌಡಿಸಂಗೆ ಸಂಬಂಧಪಟ್ಟಂತೆಯೂ ಕೆಲವರೊಡನೆ ವೈಷಮ್ಯವಿತ್ತು. ಯಾವುದರ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಕ್ಯಾತ್ಸಂದ್ರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಒಂದೆರಡು ದಿನದಲ್ಲಿ ವಶಕ್ಕೆ ತೆಗೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply