ತ್ರಿಕೋನ ಪ್ರೇಮಜ್ವಾಲೆಗೆ ಹತ್ತನೇ ಕ್ಲಾಸಿನ ಬಾಲಕರಿಬ್ಬರು ಸುಟ್ಟು ಕರಕಲು!

ಡಿಜಿಟಲ್ ಕನ್ನಡ ಟೀಮ್:

ಓದ್ತಾ ಇದ್ದದ್ದು ಹತ್ತನೇ ಕ್ಲಾಸು. ಮೀಸೆ ಕೂಡ ಚಿಗುರದ ವಯಸ್ಸಿಗೇ ಲವ್ವು. ಅದೂ ಒಬ್ಬಳೇ ಹುಡುಗಿಗೆ ಇಬ್ಬಿಬ್ಬರ ಡವ್ವು. ಜತೆಗೆ ಕುಡಿತದ ಚಟ ಬೇರೆ. ಈ ತ್ರಿಕೋನ ಪ್ರೇಮಕತೆ ಹಳಿ ತಪ್ಪಿದ ಪರಿಣಾಮ ಬಾಲಕರಿಬ್ಬರೂ ಪರಸ್ಪರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಕೊಂದುಕೊಂಡಿದ್ದಾರೆ. ಆ ಮೂಲಕ ಹೆತ್ತೊಡಲಿಗೂ ಕೊಳ್ಳಿ ಇಟ್ಟು ನಡೆದಿದ್ದಾರೆ.

ಅಂದಹಾಗೆ ವಯಸ್ಸಲ್ಲದ ವಯಸ್ಸಿಗೇ ಬಾಲಕರಿಬ್ಬರು ಇಹಲೋಕ ಯಾತ್ರೆ ಮುಗಿಸಿರುವ ಘಟನೆ ನಡೆದಿರೋದು ತೆಲಾಂಗಣದ ಜಗಿತ್ಯಾಲದಲ್ಲಿ. ಕೆ. ಮಹೇಂದರ್ ಹಾಗೂ ರವಿತೇಜ ಇಬ್ಬರೂ ಜಗಿತ್ಯಾಲದ ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅದೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಪ್ರೀತಿ ಎಂದರೆ ಏನೂ ಅಂತ ಗೊತ್ತಿಲ್ಲದ ವಯಸ್ಸಿನಲ್ಲಿ.

ಆದರೆ ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ನಿನ್ನೆ ಅಂದರೆ ಭಾನುವಾರ ರಾತ್ರಿ 7 ಗಂಟೆ ಸುಮಾರಿಗೆ ಇಬ್ಬರೂ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಕ್ಯಾನ್ನಲ್ಲಿ ತಂದ ಪೆಟ್ರೋಲ್ ಅನ್ನು ಒಬ್ಬರ ಮೇಲೋಬ್ಬರು ಸುರಿದು, ಬೆಂಕಿ ಹಚ್ಚಿದ್ದಾರೆ. ಮಹೇಂದರ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರವಿತೇಜ ತಡರಾತ್ರಿ ಮರಣವನ್ನಪ್ಪಿದ್ದಾನೆ. ಗಲಾಟೆ ಸಂದರ್ಭದಲ್ಲಿ ಬೇರೆಯವರೂ ಜತೆಗಿದ್ದರಂತೆ. ಜಗಿತ್ಯಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಆಗಲಿಲ್ಲವೋ, ಅವರ ಚಟುವಟಿಕೆಗಳ ಮೇಲೆ ನಿಗಾ ಇಡುವಲ್ಲಿ ಪೋಷಕರು ಯಾಮಾರಿದರೋ ಏನೋ ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಜವಾಬ್ದಾರಿ ಅರಿವಾಗುವ ಹೊತ್ತಿಗೆ ಎಲ್ಲವೂ ಮುಗಿದಿರುತ್ತದೆ ಎಂಬುದಕ್ಕೆ ಕಟುಸಾಕ್ಷಿಯಾಗಿ ನಿಂತಿದ್ದಾರೆ.

Leave a Reply