ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಹೂ., ಸಿದ್ದರಾಮಯ್ಯ ಉಹೂ..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಈಗ ಬೀಳುತ್ತೆ, ಆಗ ಬೀಳುತ್ತೆ ಎಂದು ಕಾಯ್ದು, ಕಾಯ್ದು ಪ್ರತಿಪಕ್ಷ ಬಿಜೆಪಿ ಸುಸ್ತಾಗಿ ಏದುಸಿರು ಬಿಡುತ್ತಿದೆ. ಆದರೆ ಸರ್ಕಾರ ಮಾತ್ರ ತನಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಹಾಗೆ ಮುಂದೊಡುತ್ತಿದೆ. ಜತೆಗೆ ಸಚಿವ ಸಂಪುಟ ವಿಸ್ತರಣೆಗೂ ಮುಂದಾಗಿದೆ.

ಅಕ್ಟೋಬರ್ 12 ರಂದು ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ನಿರ್ಧಾರ ಮಾಡಿದ್ದು, ಈಗಾಗಲೇ ಲಾಬಿ ತಾರಕಕ್ಕೇರಿದೆ. ಕಳೆದ ಬಾರಿ ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿದ್ದವರು, ಅತೃಪ್ತರ ಪೈಕಿ ಕೆಲವರನ್ನು ಸಚಿವರನ್ನಾಗಿ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಪೂರ್ವಭಾವಿ ಮಾತುಕತೆ ನಡೆಸಲು ಸಿಎಂ ಇದೀಗ ಅಕ್ಟೋಬರ್ 6 ರಂದು ದೆಹಲಿ ಪ್ರವಾಸ ಕೈಗೊಂಡಿದ್ದು, ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದಾರೆ.

ಈ ಮಧ್ಯೆ ಮತ್ತೊಂದು ಬೆಳವಣಿಗೆ ಆಗಿದೆ. ಕುಮಾರಸ್ವಾಮಿ ತೆರವು ಮಾಡಿರುವ ರಾಮನಗರ ಹಾಗೂ ಸಿದ್ದುನ್ಯಾಮಗೌಡ ದುರ್ಮರಣದಿಂದ ತೆರವಾಗಿರುವ ಜಮಖಂಡಿ ವಿಧಾನಸಭೆ ಕ್ಷೇತ್ರಗಳಿಗೆ ಮರುಚುನಾವಣೆ ನಡೆದ ನಂತರವೇ ಸಂಪುಟ ವಿಸ್ತರಣೆ ಮಾಡಬೇಕೆಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಸಲಹೆ ಮಾಡಿದ್ದು, ಇದೀಗ ವಿಸ್ತರಣೆ ಎನ್ನುವುದು ತೂಗೂಯ್ಯಾಲೆಯಲ್ಲಿದೆ.

ಕಾಂಗ್ರೆಸ್‌ನಲ್ಲಿ 6 ಹಾಗೂ ಜೆಡಿಎಸ್‌ನಲ್ಲಿ ಕೇವಲ 2 ಸ್ಥಾನಗಳು ಮಾತ್ರ ಖಾಲಿ ಇವೆ. ಇವುಗಳಲ್ಲಿ ಎಷ್ಟು ಸ್ಥಾನ ತುಂಬಬೇಕು? ಯಾರಿಗೆ ಸಚಿವ ಸ್ಥಾನ ಕೊಡಬೇಕು? ಈಗಾಗಲೇ ಸಚಿವರಾಗಿರುವವರು ಹೇಗೆ ಕೆಲಸ ಮಾಡುತ್ತಿದ್ದಾರೆ? ಅವರಲ್ಲಿ ಯಾರನ್ನಾದರೂ ಬದಲಾವಣೆ ಮಾಡಬೇಕೇ, ಹೇಗೆ? ಯಾರಿಗೆ ಸಚಿವ ಸ್ಥಾನ ಕೊಟ್ಟರೆ ಬಂಡಾಯ ತಡೆಯಬಹುದು ಎನ್ನುವುದರ ಬಗ್ಗೆಯೂ ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಜೊತೆಗೆ ಈಗಿರುವ ಕೆಲವು ಸಚಿವರ ಬಳಿ ಎರಡೆರಡು ಖಾತೆಗಳಿದ್ದು, ಅವುಗಳಲ್ಲಿ ಒಂದನ್ನು ವಾಪಸ್ ಪಡೆದು ಬೇರೆಯವರಿಗೆ ಕೊಡುವುದು, ಅಸರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಸಚಿವರ ಖಾತೆ ಬದಲಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.

ಆದರೆ ಈಗ ಎದ್ದಿರುವ ಸಮಸ್ಯೆಯೇ ಬೇರೆ. ಮೈತ್ರಿ ಸರಕಾರದಲ್ಲಿ ನಾನೇ ಟ್ರಬಲ್ ಶೂಟರ್ ಎಂದಿರುವ ಸಿದ್ದರಾಮಯ್ಯನವರು ಮರುಚುನಾವಣೆ ಬಳಿಕ ವಿಸ್ತರಣೆ ಮಾಡಿದರಾಯಿತು, ಬೇಕಿದ್ದರೆ ಕೆಲವು ನಿಗಮ-ಮಂಡಳಿಗಳನ್ನು ಭರ್ತಿ ಮಾಡಬಹುದು ಎಂದು ಹೇಳಿದ್ದಾರೆ. ಹಾಗೆ ಅವರು ಹೇಳಿರುವುದರ ಹಿಂದೆ ಚುನಾವಣೆ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯಿಂದ ಆಗಬಹುದಾದ ಅನಗತ್ಯ ಬಂಡಾಯ ತಡೆಯುವ ಉದ್ದೇಶವಿದೆ. ಆದರೆ  ಸಚಿವ ಸ್ಥಾನಕಾಂಕ್ಷಿಗಳಾಗಿ ಕಾಯ್ದು ಕುಳಿತಿರುವ ಶಾಸಕರು ಅಲ್ಲಿಯವರೆಗೂ ತಡೆದುಕೊಳ್ಳುವರೇ ಎಂಬ ಪ್ರಶ್ನೆಯೂ ಇದೇ ಸಂದರ್ಭದಲ್ಲಿ ಉದ್ಭವಿಸಿದೆ.

ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಸಿದ್ದರಾಮಯ್ಯ ಆಪ್ತರನ್ನೇ ಸಚಿವರನ್ನಾಗಿ ಮಾಡುವ ಮೂಲಕ ಬಂಡಾಯದ ಬೇಗುದಿ ಕಡಿಮೆ ಮಾಡೋದು ಕುಮಾರಸ್ವಾಮಿ ಚಿಂತನೆ. ಜತೆಗೆ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಒಂದೇ ಕಲ್ಲಲ್ಲಿ ಎರಡೆರಡು ಹಕ್ಕಿ ಹೊಡೆದುರುಳಿಸುವ ಉದ್ದೇಶವೂ ಅವರಿಗಿದ್ದಂತಿದೆ. ಹಿಂದೆ ಜಾರಕಿಹೊಳಿ ಬ್ರದರ್ಸ್ ಅಸಮಾಧಾನ ಶಮನ ಮಾಡುವ ಜವಾಬ್ದಾರಿಯನ್ನು ಕುಮಾರಸ್ವಾಮಿಯವರೇ ನಿಭಾಯಿಸಿದ್ದರು.ಈಗ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಅಪ್ತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಅವರ ವಿಶ್ವಾಸ ಗಳಿಕೆ ಕುಮಾರಸ್ವಾಮಿ ಅವರದ್ದಾಗಿದೆ.

Leave a Reply