ಪ್ರತಿಭಟನೆ ಹೆಸರಲ್ಲಿ ಗಲಭೆ ಮಾಡುವವರಿಗೆ ಸುಪ್ರೀಂ ಮೂಗುದಾರ!

  ಡಿಜಿಟಲ್ ಕನ್ನಡ ಟೀಮ್:

  ‘ಯಾವುದೇ ಗಲಭೆ ಹಾಗೂ ಹಿಂಸಾಚಾರ ಪ್ರತಿಭಟನೆಯಾಗುವುದಿಲ್ಲ…’ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್ ಇನ್ನು ಮುಂದೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೆ, ಸಾರ್ವಜನಿಕ ಆಸ್ತಿ ನಾಶವಾದರೆ ಆ ಪ್ರತಿಭಟನೆಗೆ ಸಂಬಂಧಿಸಿದ ನಾಯಕರು 24 ಗಂಟೆಗಳ ಒಳಗೆ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕು ಎಂದು ಸೂಚನೆ ನೀಡಿದೆ.

  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಡಿವೈ ಚಂದ್ರಚೂಡ, ಎಎಂ ಖಾನ್ವಿಲ್ಕರ್ ಅವರ ಸುಪ್ರೀಂ ಕೋರ್ಟ್ ಪೀಠ ಈ ಆದೇಶ ಹೊರಡಿಸಿದ್ದು, ಒಂದು ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಆ ಪ್ರತಿಭಟನೆ ಸಂಘಟನೆಯ ನಾಯಕರು 24 ಗಂಟೆ ಒಳಗೆ ಹಾಜರಾಗದಿದ್ದರೆ, ಅವರನ್ನು ಪ್ರಕರಣದ ಪ್ರಮುಖ ಆರೋಪಿ ಹಾಗೂ ತಲೆಮರೆಸಿಕೊಂಡವ ಎಂದು ಪರಿಗಣಿಸಲಾಗುತ್ತದೆ ಎಂದು ಪೀಠ ಆದೇಶಿಸಿದೆ.

  ಇಂತಹ ಪ್ರಕರಣದಲ್ಲಿ ಬಂಧಿತರಿಗೆ ಜಾಮೀನು ನೀಡಬೇಕಾದರೆ ಗಲಭೆ ಹಾಗೂ ಹಿಂಸಾಚಾರದಿಂದ ಆಗಿರುವ ನಷ್ಟದ ಮೊತ್ತವನ್ನು ಠೇವಣಿ ಇಡಬೇಕು. ಅದು ವೈಯಕ್ತಿಕ ಅಥವಾ ಸಾಮೂಹಿಕವಾಗಿ ಕಲೆಹಾಕಿ ಹಣ ಸಂಗ್ರಹಿಸಿ ಠೇವಣಿ ಮಾಡಬಹುದು.

  ಸುಪ್ರೀಂ ಕೋರ್ಟ್ ನ ಈ ಆದೇಶ ಪ್ರಸ್ತುತ ಪರಿಸ್ಥಿತಿಯಲ್ಲಿ ಮಹತ್ವ ಪಡೆದುಕೊಂಡಿದ್ದು, ಧಾರ್ಮಿಕ ವಿಚಾರ, ಗೋರಕ್ಷಣೆ, ಸಿನೆಮಾ ವಿರುದ್ಧ ಅಥವಾ ರಾಜಕೀಯ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತಿರುವ ಹೊತ್ತಲ್ಲಿ ಈ ತೀರ್ಪು ಪ್ರತಿಭಟನಾಕಾರರು ಹಾಗೂ ಪ್ರತಿಭಟನೆ ಆಯೋಜಕರ ಮೇಲೆ ಕಾನೂನಿನ ನಿಯಂತ್ರಣ ಹಾಕಿ ಸಾರ್ವಜನಿಕ ಆಸ್ತಿ ನಷ್ಟವಾಗದಂತೆ ನೋಡಿಕೊಳ್ಳಲು ಹೆಚ್ಚಿನ ಜವಾಬ್ದಾರಿ ನೀಡಿದಂತಾಗಿದೆ.

  Leave a Reply