ವೃದ್ಧಾಪ್ಯದಲ್ಲಿ ಮಹಿಳೆಯರನ್ನು ಬೆಂಬಿಡದೇ ಕಾಡುವ ಆಸ್ಟಿಯೊಪೊರೊಸಿಸ್!

ಡಾ.ಬಿ.ರಮೇಶ್

ಮಹಿಳೆಯರಲ್ಲಿ ಮೂಳೆ ಸವೆತದ ಸಮಸ್ಯೆ ಸಾಮಾನ್ಯವಾಗಿ ಮುಟ್ಟು ನಿಂತ ಬಳಿಕ ಕಂಡುಬರುತ್ತದೆ. 50 ವರ್ಷ ಮೇಲ್ಪಟ್ಟ ಮೂವರು ಮಹಿಳೆಯರಲ್ಲಿ ಒಬ್ಬರು ಈ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ಲಕ್ಷಣಗಳು…

ಇದು ಯಾವುದೇ ಆರಂಭಿಕ ಮುನ್ಸೂಚನೆ ನೀಡುವುದಿಲ್ಲ. ಮೂಳೆ ಮುರಿತವೇ ಇದರ ಮೊದಲ ಲಕ್ಷಣವಿರಬಹುದು .ಹೀಗಾಗಿ ಇದು ಒಂದು ರೀತಿಯಲ್ಲಿ ಮೌನಮಾರಿಎನ್ನಬಹುದು. ಬೆನ್ನುಮೂಳೆ, ಸೊಂಟ, ಕೈಮಣಿಕಟ್ಟಿಗೆ ಇದರ ಅಪಾಯ ಹೆಚ್ಚು.

ಮುಟ್ಟು ನಿಂತ ಬಳಿಕವೇ ಈ ಸಮಸ್ಯೆ ಏಕೆ?

ಸಾಮಾನ್ಯವಾಗಿ ಮಹಿಳೆಯರಿಗೆ ಮುಟ್ಟು ನಿಲ್ಲುವತನಕ ಮೂಳೆಗಳ ಸಮಸ್ಯೆ ಅಷ್ಟಾಗಿ ಕಂಡುಬರುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಹಾರ್ಮೋನುಗಳ ಅಭಯಹಸ್ತ. 25-30 ರ ಆಸುಪಾಸಿನಲ್ಲಿ ಮೂಳೆಗಳ ಬೆಳವಣಿಗೆ ಹೆಚ್ಚು ಕಡಿಮೆ ನಿಂತು ಬಿಡುತ್ತದೆ. ಆಗ ಮೂಳೆಗಳು ಹೆಚ್ಚು ಬಲಯುತವಾಗಿ ಹಾಗೂ ದಪ್ಪಗೆ ಅಂದರೆ ಸಾಂದ್ರತೆಯಿಂದ ಕೂಡಿರುತ್ತವೆ. ಮೂಳೆಗಳ ಈ ಬಲಿಷ್ಠತೆಗೆ ಮುಖ್ಯಕಾರಣ ಸೆಕ್ಸ್ ಹಾರ್ಮೋನು. ಈಸ್ಟ್ರೋಜನ್. 40-45 ರ ಆಸುಪಾಸಿಲ್ಲಿ ಈಸ್ಟ್ರೊಜೆನ್ ಹಾರ್ಮೋನಿನ ಉತ್ಪಾದನೆ ಕಡಿಮೆಯಾಗುತ್ತ ಹೋಗುತ್ತದೆ. ಈ ಒಂದು ಕಾರಣದಿಂದ ಮೂಳೆಗಳ ಘನತ್ವ ಹಾಗೂ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ.

ಒಂದು ಸಮೀಕ್ಷೆಯಿಂದ ತಿಳಿದು ಬಂದ ಸಂಗತಿಯೆಂದರೆ, ಮುಟ್ಟು ನಿಂತಬಳಿಕ ಮೊದಲ 5 ವರ್ಷದಲ್ಲಿ ಮಹಿಳೆ ಶೇ.10ರಷ್ಟು ಮೂಳೆಯ ಘನತ್ವ ಅಂದರೆ ಅದರ ಡೆನ್ಸಿಟಿಯನ್ನು ಕಳೆದುಕೊಳ್ಳುತ್ತಾಳೆ. ಮತ್ತೊಂದು ಮುಖ್ಯ ಸಂಗತಿಯೆಂದರೆ, 60 ವರ್ಷ ದಾಟಿದ ಮಹಿಳೆಯರು ಒಮ್ಮಿಲ್ಲೊಮ್ಮೆ ಮೂಳೆಯ ಫ್ರಾಕ್ಚರ್ನಿಂದ ದಾಟಿಹೋಗಿರುತ್ತಾರೆ.

 ಆಸ್ಟಿಯೊಪೊರೊಸಿಸ್ ಸಮಸ್ಯೆ ಪತ್ತೆ ಹಚ್ಚುವುದು ಹೇಗೆ?

ಮೂಳೆಗಳ ಘನತ್ವ ಅಥವಾ ಡೆನ್ಸಿಟಿಯನ್ನು ಕಂಡುಕೊಳ್ಳಲು Bone Densitometer ಸಹಾಯ ಪಡೆಯಲಾಗುತ್ತದೆ. ಮೂಳೆಗಳ ಸವೆತ ಎಷ್ಟರಮಟ್ಟಿಗೆ ಆಗಿದೆಯೆನ್ನುವುದು ಇದರಿಂದ ಖಚಿತವಾಗುತ್ತದೆ. ಮೂರು ರೀತಿಯ ಫಲಿತಾಂಶಗಳಿಂದ ಮೂಳೆಗಳ ಸ್ಥಿತಿಗತಿಯನ್ನು ಕಂಡುಕೊಳ್ಳಲಾಗುತ್ತದೆ.

ಆಸ್ಟಿಯೊಪೊರೊಸಿಸ್ ಅಪಾಯ ಕಡಿಮೆ ಗೊಳಿಸುವುದು ಹೇಗೆ?

ಮುಟ್ಟು ನಿಲ್ಲುವ ಮುಂಚೆಯೇ ಮಹಿಳೆ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಮೂಳೆಗಳ ಸವೆತದ ಸಮಸ್ಯೆಯಿಂದ ದೂರ ಇರಬಹುದು. ಜೀವನಶೈಲಿಯಲ್ಲಿ ಅಷ್ಟಿಷ್ಟು ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಮೂಳೆಗಳ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು.

  • ಮೂಳೆಗಳ ಘನತ್ವ ಹೆಚ್ಚಿಸಿಕೊಳ್ಳಲು ಪ್ರತಿದಿನ 1200 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂನ್ನು ಆಹಾರದ ಮೂಲಕ ಪಡೆಯಬೇಕು.
  • ಕ್ಯಾಲ್ಸಿಯಂ ಸೇವನೆಯ ಜತೆಜತೆಗೆ  ದಿನಕ್ಕೆ ಕೆಲವು ನಿಮಿಷಗಳ ಮಟ್ಟಿಗಾದರೂ ನಮ್ಮ ದೇಹಕ್ಕೆ ವಿಟಮಿನ್ ಡಿದೊರೆಯುವಂತೆ ನೋಡಿಕೊಳ್ಳಬೇಕು. ಈವಿಟಮಿನ್ ಡಿನಮ್ಮ ದೇಹಕ್ಕೆ ಸೂರ್ಯನ ಕಿರಣಗಳ ಮೂಲಕ ದೊರೆಯುತ್ತದೆ. ವಿಟಮಿನ್ ಡಿದೇಹದಲ್ಲಿ ಇದ್ದರೆ ಅದು ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ.
  • ಆಹಾರ ಹಾಗೂ ಸೂರ್ಯಕಿರಣಗಳ ಹೊರತಾಗಿ ವೈದ್ಯರು ಶಿಫಾರಸು ಮಾಡುವ ಮಾತ್ರೆಗಳ ಮೂಲಕ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿಯ ಕೊರತೆಯನ್ನು ನೀಗಿಸಿಕೊಳ್ಳಬಹುದು.
  • ದಿನವಿಡೀ ಒಂದೇಕಡೆ ಕುಳಿತು ಕೊಂಡುಕೆಲಸ ಮಾಡುತ್ತಿದ್ದರೆ, ಆಗಾಗ ಒಂದಿಷ್ಟು ಹೊತ್ತು ಹೊರಗೆ ಸುತ್ತಾಡಿಬನ್ನಿ. ಇದು ಮೂಳೆಗಳ ಘನತ್ವ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಮದ್ಯಪಾನ, ಧೂಮಪಾನದ ಚಟ ಇದ್ದವರು ಅದರಿಂದ ದೂರ ಇರುವುದು ಮೂಳೆಗಳ ಬಲಕಾಪಾಡಿಕೊಳ್ಳುವ ದೃಷ್ಟಿಯಿಂದ ತುಂಬಾ ಒಳ್ಳೆಯದು.
  • ಟೀ ಕಾಫಿ ಸೇವನೆ ಹಿತಮಿತ ವಾಗಿರಲಿ.
  • ಹಸಿರು ಸೊಪ್ಪುಗಳು, ಸೋಯಾಬೀನ್, ಹಾಲು, ಮೊಸರು, ಮಜ್ಜಿಗೆ ಇವನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.
  • ಹಾರ್ಮೋನು ಥೆರಪಿಯಿಂದಲೂ ಮೂಳೆಗಳ ಘನತ್ವವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿಕೊಳ್ಳಬಹುದು (HRT- Oestrogen hormones)

ಮುಟ್ಟು ನಿಂತ ಬಳಿಕ ಮೂಳೆ ಸವೆತದ ಸಮಸ್ಯೆಯಿಂದ ತೊಂದರೆ ಪಡುವುದಕ್ಕಿಂತ ಆರಂಭದಿಂದಲೇ ಅಂದರೆ ಯೌವ್ವನಾವಸ್ಥೆಯಿಂದಲೇ ಮೂಳೆಗಳ ಬಲವರ್ಧನೆಗೆ ಪೂರಕವಾದ ಆಹಾರ ಸೇವನೆ ಮಾಡಬೇಕು. ದೇಹ ತೀರಾ ಸಣಕಲು ಆಗದಂತೆಯೂ, ತೀರಾ ದಪ್ಪಗಾಗದಂತೆಯೂ ಎಚ್ಚರವಹಿಸಿದರೆ ವೃದ್ಧಾಪ್ಯದಲ್ಲಿ ಮೂಳೆಗಳ ಸಮಸ್ಯೆ ಉಂಟಾಗದು.

ಮಾಹಿತಿಗೆ:

ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್ ವಿಳಾಸ: altiushospital@yahoo.com, www.altiushospital.com

Leave a Reply