ಮರುಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾರ್ಯತಂತ್ರ; ಕಾಂಗ್ರೆಸ್ ಮಂತ್ರಿಗಳ ಮಂತ್ರಾಲೋಚನೆ

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಮರುಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್-ಮತ್ತು ಜೆಡಿಎಸ್ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಕಾಂಗ್ರೆಸ್ ಮಂತ್ರಿಗಳ ಸಭೆ ಸಮಾಲೋಚನೆ ನಡೆಸಿದೆ.

ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಗೃಹ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಸಚಿವರಿಗೆ ಏರ್ಪಡಿಸಿದ್ದ ಉಪಾಹಾರಕೂಟದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಲಾಯಿತು. ಮುಂಬರುವ ಮರುಚುನಾವಣೆಯಲ್ಲೂ ಮೈತ್ರಿ ಸರಕಾರದ ಅಂಗಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಒಟ್ಟಿಗೆ ಹೋಗಬೇಕೆಂಬುದು ಹೈಕಮಾಂಡ್ ನಿಲುವಾಗಿದೆ. ಇದರ ಸಫಲ ಸಾಕಾರಕ್ಕೆ ಅಗತ್ಯ ತಂತ್ರಗಾರಿಕೆ ರೂಪಿಸುವ ಹಾಗೂ ಪಕ್ಷ ಸಂಘಟನೆ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಯು.ಟಿ. ಖಾದರ್, ವೆಂಕಟರಮಣಪ್ಪ, ಕೃಷ್ಣ ಬೈರೇಗೌಡ, ಪುಟ್ಟರಂಗಶೆಟ್ಟಿ, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ರಾಜಶೇಖರ ಪಾಟೀಲ, ಶಿವಶಂಕರರೆಡ್ಡಿ, ಜಯಮಾಲಾ, ಜಮೀರ್ ಅಹಮದ್ ಖಾನ್, ಶಂಕರ್ ಪಾಲ್ಗೊಂಡಿದ್ದರು. ತಾವು ಮುಂಬಯಿಯಲ್ಲಿರುವ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಅವರು ಶಿವಕುಮಾರ್ ಅವರಿಗೆ ದೂರವಾಣಿ ಮೂಲಕ ತಿಳಿಸಿದರು. ಸಭೆಯಲ್ಲಿ ಸಮಾಲೋಚಿತವಾಗುವ ವಿಷಯಗಳಿಗೆ ತಮ್ಮ ಸಹಮತ ಇದೆ ಎಂದೂ ಹೇಳಿದರು.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಈ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಚಿವ ಸಂಪುಟ ಸಭೆಗೂ ಮುನ್ನ ಈ ರೀತಿ ಭೇಟಿಯಾಗಿ ಚರ್ಚಿಸುವುದು ವಾಡಿಕೆ. ಸರಕಾರದ ಯಂತ್ರ ಸುಗಮವಾಗಿ ಸಾಗಲು ಚರ್ಚೆ ಅಗತ್ಯ. ಅದೇ ರೀತಿ ಇಂದಿನ ಸಭೆ. ಕಾಂಗ್ರೆಸ್ ಮಂತ್ರಿಗಳಿಗೆಂದೇ ಇವತ್ತಿನ ಉಪಾಹಾರಕೂಟ ಏರ್ಪಡಿಸಲಾಗಿತ್ತು. ಹೀಗಾಗಿ ಮಂತ್ರಿಗಳು ಸೇರಿದ್ದೇವೆ. ಸಿದ್ದರಾಮಯ್ಯನವರನ್ನು ಕರೆದಿಲ್ಲ, ದಿನೇಶ್ ಗುಂಡೂರಾವ್ ಅವರನ್ನು ಕರೆದಿಲ್ಲ ಎಂದು ವಿಪರೀತ ಅರ್ಥ ಕಲ್ಪಿಸುವುದು ಬೇಡ.

ಹಿಂದೆ ಸಿದ್ದರಾಮಯ್ಯನವರ ಮನೆಯಲ್ಲಿ ನಾವೆಲ್ಲ ಭೋಜನಕೂಟಕ್ಕೆ ಸೇರಿದ್ದೆವು. ಅದೇ ರೀತಿ ಪರಮೇಶ್ವರ ಅವರ ನಿವಾಸದಲ್ಲೂ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಮುಂದೆ ಆರ್.ವಿ. ದೇಶಪಾಂಡೆ ಮತ್ತಿತರ ಸಚಿವರ ನಿವಾಸದಲ್ಲೂ ಇಂಥದ್ದೇ ಸಭೆ ನಡೆಸಲಾಗುವುದು ಎಂದು ಉಪಾಹಾರಕೂಟದ ನಂತರ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಂದೆರಡು ದಿನದೊಳಗೆ ರಾಮನಗರ, ಬಾಗಲಕೋಟೆ ವಿಧಾನಸಭೆ ಜತೆಗೆ ರಾಜ್ಯದ ಮೂರು ಲೋಕಸಭೆ ಕ್ಷೇತ್ರಗಳಿಗೂ (ಮಂಡ್ಯ, ಶಿವಮೊಗ್ಗ, ಬಳ್ಳಾರಿ) ಮರುಚುನಾವಣೆ ಘೋಷಣೆ ಆಗುವ ಸಂಭವವಿದೆ. ಇದಕ್ಕೆ ಚುನಾವಣೆ ಆಯೋಗ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಜವಾಬ್ದಾರಿ, ಮಂತ್ರಿಗಳ ಜವಾಬ್ದಾರಿ ಏನು, ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಯಾವ ರೀತಿ ಕಾರ್ಯತಂತ್ರಗಳನ್ನು ಹೆಣೆಯಬೇಕು ಎಂಬುದರ ಬಗ್ಗೆ ಪೂರ್ವಭಾವಿ ಚರ್ಚೆ ನಡೆಸಲಾಗಿದೆ. ಜೆಡಿಎಸ್ ಜತೆ ಹೋಗಬೇಕೆಂಬ ಹೈಕಮಾಂಡ್ ನಿಲುವಿಗೆ ನಾವೆಲ್ಲ ಬದ್ಧರಾಗಿದ್ದೇವೆ. ಹಾಗೆಂದು ಈಗಾಗಲೇ ಬರೆದೂ ಕೊಟ್ಟಿದ್ದೇವೆ. ಹಿಂದಿನ ಚುನಾವಣೆಗಳಲ್ಲಿ ಸಂಘಟಿತ ಪ್ರಯತ್ನ ಫಲ ಕೊಟ್ಟಿದೆ. ಹೀಗಾಗಿ ಚುನಾವಣೆ ಮೈತ್ರಿ ಮುಂದುವರೆಯಲಿದೆ. ಜತೆಗೆ ಪಕ್ಷ ಸಂಘಟನೆಗೆ ಮತ್ತಷ್ಟು ಒತ್ತು ನೀಡಬೇಕೆಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು ಎಂದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಹುಲ್ ಗಾಂಧಿ ಅವರ ಜತೆ ಚರ್ಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅ. 6 ರಂದು ದಿಲ್ಲಿಗೆ ಹೋಗುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳಿಗೆ ದಿಲ್ಲಿಯಲ್ಲಿ ಕೇಂದ್ರ ಸಚಿವರ ಭೇಟಿ ಕಾರ್ಯಕ್ರಮ ಇದೆ. ಆ ಸಂದರ್ಭದಲ್ಲಿ ಭೇಟಿ ಮಾಡಬಹುದು. ನನಗೂ ಹೈದರಾಬಾದ್ ನಲ್ಲಿ ಜಲಸಂಪನ್ಮೂಲ ಸಚಿವರ ಮೀಟಿಂಗ್ ಇದೆ. ಹೀಗೆ ಮೀಟಿಂಗ್ ಗಳಿಗೋ, ಕಾರ್ಯಕ್ರಮ ನಿಮಿತ್ತ ದಿಲ್ಲಿಗೋ ಹೋದಾಗ ಎಷ್ಟೋ ಸಂದರ್ಭಗಳಲ್ಲಿ ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇವೆ. ಅದು ನಮ್ಮ ಜವಾಬ್ದಾರಿ, ಕರ್ತವ್ಯ ಕೂಡ. ಅದಕ್ಕೆಲ್ಲ ಏನೇನೋ ಕಲ್ಪನೆ ಮಾಡಿದರೆ ಆಗುತ್ತದೆಯೇ ಎಂದು ಮರುಪ್ರಶ್ನಿಸಿದರು.

ಮಂತ್ರಿಗಳ ಖಾತೆನೂ ಬದಲಾವಣೆ ಇಲ್ಲ, ಏನೂ ಇಲ್ಲ. ಅದೆಲ್ಲ ಬರೀ ಸುದ್ದಿ ಅಷ್ಟೇ. ಸದ್ಯಕ್ಕೆ ಕೊಟ್ಟಿರೋ ಜವಾಬ್ದಾರಿ ಮಾಡಿಕೊಂಡು ಹೋಗ್ದಿದ್ದೀವಿ. ಅವರು ಏನು ಕೆಲಸ ಕೊಟ್ಟರೂ ಮಾಡ್ತೀವಿ ಅಷ್ಟೇ ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಐಟಿ ದಾಳಿ ಹಿನ್ನೆಲೆ-ಪರಿಣಾಮ ಮತ್ತಿತರ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

Leave a Reply