ಮಹಾಮೈತ್ರಿ ಮೇಲೆ ಪ್ರಭಾವ ಬೀರುತ್ತಾ ಮಾಯಾ ಮುನಿಸು?

ಡಿಜಿಟಲ್ ಕನ್ನಡ ಟೀಮ್:

‘ಬಿಜೆಪಿಯನ್ನು ಏಕಾಂಗಿಯಾಗಿ ಮಣಿಸುತ್ತೇವೆ ಎಂಬ ಭ್ರಮೆ ಕಾಂಗ್ರೆಸ್ ನಲ್ಲಿದೆ… ಮೈತ್ರಿ ಹೆಸರಲ್ಲಿ ಬಿಎಸ್ಪಿ ನಾಶ ಮಾಡುವುದು ಕಾಂಗ್ರೆಸ್ ನ ಉದ್ದೇಶ…’ ಎಂದು ಕೈ ಪಾಳಯದ ವಿರುದ್ಧ ಕೆಂಡಾಮಂಡಲವಾಗಿರುವ ಬಹುಜನ ಸಮಾಜ ಪಾರ್ಟಿ ಅಧ್ಯಕ್ಷೆ ಮಾಯಾವತಿ ಮುಂಬರುವ ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅದರೊಂದಿಗೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತ್ತರ ಜಾತ್ಯತೀತ ಪಕ್ಷಗಳ ಮಹಾಮೈತ್ರಿಗೆ ಮಯಾವತಿ ತಣ್ಣೀರೆರೆಚಿದ್ದಾರೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶದ ಮುನ್ಸೂಚನೆ ಕಂಡಿದ್ದ ಮಾಯಾವತಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಜೆಡಿಎಸ್ ಹಿರಿಯ ಮುಖಂಡ ದೇವೇಗೌಡರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದಲ್ಲಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವಾಗ ವಿರೋಧ ಪಕ್ಷಗಳೆಲ್ಲ ಒಂದಾಗಿ ಕೇಂದ್ರದ ಬಿಜೆಪಿ ವಿರುದ್ಧದ ಮಹಾಮೈತ್ರಿಗೆ ನಾಂದಿ ಹಾಡಲಾಗಿತ್ತು. ಆದರೆ ಕೆಲವೇ ತಿಂಗಳ ಅಂತರದಲ್ಲಿ ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲಿ ಪರಿಸ್ಥಿತಿ ಬದಲಾಗಿದೆ.

ಅಂದಹಾಗೆ, ಮಯಾವತಿ ತಮ್ಮ ಈ ನಿರ್ಧಾರಕ್ಕೆ ಸಮರ್ಥನೆಯನ್ನು ನೀಡಿದ್ದು, ‘ಬಹುಜನ ಸಮಾಜ ಪಕ್ಷವನ್ನು ಮುಗಿಸಲು ಮೈತ್ರಿ ಹೆಸರಲ್ಲಿ ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ. ಈ ಮೈತ್ರಿಯನ್ನು ಮುರಿಯಲು ಕಾಂಗ್ರೆಸ್ ನ ಕೆಲವು ನಾಯಕರೇ ಕಾರಣವಾಗಿದ್ದಾರೆ ಎಂದು ಹೇಳುವ ಮೂಲಕ ಮಾಯಾವತಿ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಜತೆಗೆ ದಿಗ್ವಿಜಯ್ ಸಿಂಗ್ ಅವರನ್ನು ಆರೆಸ್ಸೆಸ್ ಏಜೆಂಟ್ ಎಂದು ಕುಟುಕಿದ್ದಾರೆ.

ತಮ್ಮ ನಿರ್ಧಾರವನ್ನು ಪ್ರಕಟಿಸಿ ಅದಕ್ಕೆ ಕಾರಣವನ್ನು ಮಾಯಾವತಿ ಅವರು ವಿವರಿಸಿರೋದು ಹೀಗೆ… “ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಎಸ್ಪಿ ಮುಂದಾಗಿತ್ತು. ಇದಕ್ಕೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಬಿಜೆಪಿ ಏಜೆಂಟ್ ಆಗಿರುವ ದಿಗ್ವಿಜಯ್ ಸಿಂಗ್ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-ಬಿಎಸ್ಪಿ ಮೈತ್ರಿಗೆ ಬೆಂಕಿ ಹಚ್ಚಿದ್ದಾರೆ. ದಿಗ್ವಿಜಯ್ ಸಿಂಗ್ ಅವರು ನಾನು ಕೇಂದ್ರದ ಒತ್ತಡಕ್ಕೊಳಗಾಗಿದ್ದೇನೆ ಎಂದು ನೇರ ಆರೋಪ ಮಾಡಿದ್ದು, ವಾಸ್ತವದಲ್ಲಿ ದಿಗ್ವಿಜಯ್ ಸಿಂಗ್ ಅವರೇ ಬಿಜೆಪಿಯ ಒತ್ತಡಕ್ಕೊಳಗಾಗಿದ್ದಾರೆ. ದಿಗ್ವಿಜಯ್ ಸಿಂಗ್ ಆರ್ ಎಸ್ಎಸ್ ಏಜೆಂಟ್ ಆಗಿದ್ದರಿಂದಲೇ ಗೋವಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಕಾರ ರಚಿಸಲು ಸಾಧ್ಯವಾಗಲಿಲ್ಲ.”
“ಬಿಜೆಪಿಯನ್ನು ಏಕಾಂಗಿಯಾಗಿ ಸೋಲಿಸುತ್ತೇವೆ ಎಂಬ ಭ್ರಮೆ ಕಾಂಗ್ರೆಸ್ನಲ್ಲಿದೆ. ಆದರೆ, ಮುಂಬರುವ ಚುನಾವಣೆಗಳಲ್ಲಿ ಜನರೇ ಈ ಭ್ರಮೆಯನ್ನು ಕಳಚುತ್ತಾರೆ. ಇದೇ ಕಾರಣಕ್ಕೆ ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಲಾಯಿತು.”

ಇಲ್ಲಿ ಮಾಯಾ ಕೋಪ ಇರುವುದು ದಿಗ್ವಿಜಯ್ ಸಿಂಗ್ ವಿರುದ್ಧ. ಸೋನಿಯಾ ಹಾಗೂ ರಾಹುಲ್ ವಿಚಾರದಲ್ಲಿ ಮಾಯಾವತಿ ಸಕಾರಾತ್ಮಕ ಮಾತುಗಳಾಡಿದ್ದು, ಲೋಕ ಸಭೆ ಚುನಾವಣೆ ಹೊತ್ತಿಗೆ ಮತ್ತೆ ಮಾಯಾವತಿ ‘ಕೈ’ ಜೋಡಿಸಿದರೆ ಅಚ್ಚರಿ ಇಲ್ಲ. ಅದರೆ ಲೋಕಸಭಾ ಚುನಾವಣೆ ಸಮೀಪದಲ್ಲಿರುವಾಗ ಈ ಎರಡೂ ರಾಜ್ಯಗಳಲ್ಲಿ ಭಿನ್ನಮತ ಮರೆತು ಒಂದಾಗಿದ್ದಾರೆ, ನಾಳಿನ ಮಹಾಮೈತ್ರಿಗೆ ಆನೆ ಬಲ ಬರುತ್ತಿತ್ತು. ಹೀಗಾಗಿ ಬಿಜೆಪಿಯನ್ನು ಹಣಿಯುವ ಗುರಿಗೆ ಈ ಭಿನ್ನಮತ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ವ್ಯತಿರಿಕ್ತ ಪರಿಣಾಮ ಬೀರಲಿದೆ.

Leave a Reply