ಅಮೆರಿಕ- ಚೀನಾ ಚಿತ್ತ ಕೆಡಿಸುತ್ತಿರುವ ಭಾರತ- ರಷ್ಯಾ ಆಲಿಂಗನ!

ಡಿಜಿಟಲ್ ಕನ್ನಡ ಟೀಮ್:

ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಅವರು ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಗುರುವಾರ ಆಗಮಿಸಿದ್ದು, ಇಂದು ಉಭಯ ದೇಶಗಳ ನಡುವೆ 19ನೇ ವಾರ್ಷಿಕ ದ್ವಿಪಕ್ಷೀಯ ಸಭೆ ನಡೆಯಲಿದೆ. ರಾಜತಾಂತ್ರಿಕವಾಗಿ ಈ ಸಭೆ ಭಾರತಕ್ಕೆ ಹೆಚ್ಚಿನ ಮಹತ್ವದ್ದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪುಟಿನ್ ಅವರ ನಡುವಣ ಈ ಸಭೆಯನ್ನು ಇಡೀ ವಿಶ್ವವೇ ಅದರಲ್ಲೂ ನೆರೆಯ ಚೀನಾ ಹಾಗೂ ಅಮೆರಿಕ ಓರೆಗಣ್ಣಿನಿಂದ ನೋಡುತ್ತಿದೆ.

ಹೌದು, ಮೋದಿ ಹಾಗೂ ಪುಟಿನ್ ಅವರ ಭೇಟಿಯ ಸಂದರ್ಭದಲ್ಲಿ ಭಾರತದ ರಕ್ಷಣಾ ವ್ಯವಸ್ಥೆಗೆ ಬ್ರಹ್ಮಾಸ್ತ್ರವಾಗಿ ಪರಿಗಣಿಸಲಾಗಿರುವ ಎಸ್-400 ಟ್ರಯಂಪ್ ಕ್ಷಿಪಣಿ ಉಡಾವಣಾ ವ್ಯವಸ್ಥೆ ಖರೀದಿ ಒಪ್ಪಂದ ಸಾಕಷ್ಟು ಸುದ್ದಿ ಮಾಡುತ್ತಿದೆ. ಯುದ್ಧ ವಿಮಾನಗಳನ್ನು ಒಂದೇ ಏಟಿನಲ್ಲಿ ಹೊಡೆದುರುಳಿಸಬಲ್ಲ ಕ್ಷಿಪಣಿ ವ್ಯವಸ್ಥೆ ಇದಾಗಿದ್ದು, ಈ ಅಸ್ತ್ರವನ್ನು ರಕ್ಷಣಾ ಬತ್ತಳಿಕೆಗೆ ಸೇರಿಸಿಕೊಳ್ಳಲು ಭಾರತ ತುದಿಗಾಲಲ್ಲಿ ನಿಂತಿದೆ. ಈ ಒಪ್ಪಂದಕ್ಕೆ ಇಂದು ಉಭಯ ನಾಯಕರುಗಳು ಸಹಿ ಹಾಕಲಿದ್ದಾರೆ. ಅಮೆರಿಕದ ವಿರೋಧದ ನಡುವೆಯೂ ಭಾರತವು ರಷ್ಯಾ ಜತೆಗಿನ ಈ ಒಪ್ಪಂದವನ್ನು ಮಾಡಿಯೇ ತೀರುತ್ತೇನೆ ಎಂಬ ಪಟ್ಟು ಹಿಡಿದಿರುವುದರ ಹಿಂದೆ ಸಾಕಷ್ಟು ಲೆಕ್ಕಾಚಾರಗಳು ಅಡಗಿವೆ. ಇದು ಸಹಜವಾಗಿಯೇ ಅಮೆರಿಕದ ನಿದ್ದೆಗೆಡಿಸಿದೆ.

ರಷ್ಯಾ ಸ್ನೇಹ ಬಿಡಲು ಭಾರತ ಸಿದ್ಧವಿಲ್ಲ!

ಕಳೆದ ಕೆಲವು ವರ್ಷಗಳಿಂದ ಅಮೆರಿಕ ಭಾರತಕ್ಕೆ ಹತ್ತಿರವಾಗಲು ಎಲ್ಲ ರೀತಿಯ ಪ್ರಯತ್ನ ಪಡುತ್ತಿದೆ. ಭಾರತ ಸದ್ಯ ವಿಶ್ವದಲ್ಲೇ ರಕ್ಷಣಾ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಂಡವಾಳ ಹೂಡುತ್ತಿರುವ ರಾಷ್ಟ್ರವಾಗಿದೆ. ಇನ್ನು ಏಷ್ಯಾದಲ್ಲಿ ಚೀನಾ ಪ್ರಭಾವವನ್ನು ನಿಯಂತ್ರಿಸಬೇಕೆಂಬ ಉದ್ದೇಶ ಹೊಂದಿರುವ ಅಮೆರಿಕ, ಭಾರತದ ಸ್ನೇಹದೊಂದಿಗೆ ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಕಳೆದ 7 ದಶಕಗಳಲ್ಲಿ ಭಾರತದ ರಕ್ಷಣಾ  ವಿಚಾರದಲ್ಲಿ ನಮ್ಮ ಪಾಲಿಗೆ ಆಪ್ತ ಮಿತ್ರನಾಗಿ ನಿಂತದ್ದು ರಷ್ಯಾ.

ಕೆಲವು ವರ್ಷಗಳಿಂದ ಭಾರತ ಹಾಗೂ ಅಮೆರಿಕ ಸನಿಹವಾಗುತ್ತಿದ್ದಂತೆ ರಷ್ಯಾ ಭಾರತದಿಂದ ದೂರವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಇದೇ ಸಂದರ್ಭದಲ್ಲಿ ಅಮೆರಿಕದ ಪ್ರತಿಸ್ಪರ್ಧಿಗಳಾದ ರಷ್ಯಾ ಹಾಗೂ ಚೀನಾ ಸನಿಹವಾಗುತ್ತಿರುವ ವಿದ್ಯಮಾನಗಳು ನಡೆಯತ್ತಿದ್ದು, ಇದು ಭಾರತ ಹಾಗೂ ರಷ್ಯಾ ನಡುವಣ ಸಂಬಂಧ ತುಕ್ಕು ಹಿಡಿಯುತ್ತದೆಯೇ? ಎಂಬ ಪ್ರಶ್ನೆ ಮೂಡಿಸಿತ್ತು. ಅದರಲ್ಲೂ ಕಳೆದ ವರ್ಷ ಭಾರತ ಮತ್ತು ಚೀನಾ ನಡುವೆ ದೋಕ್ಲಾಮ್‌ ಗಡಿ ವಿವಾದದ ಸಂದರ್ಭದಲ್ಲಿ ರಷ್ಯಾ ತಟಸ್ಥ ನಿಲುವು ತಾಳಿತ್ತು.

ಭಾರತದ ಭದ್ರತೆಗೆ ಅಪಾಯಕಾರಿಯಾಗಿರುವ ಚೀನಾ ಜತೆ ರಷ್ಯಾ ಬಾಂಧವ್ಯ ಗಟ್ಟಿಯಾದಷ್ಟು ಅದರ ಅಪಾಯ ಭಾರತಕ್ಕೆ ಹೆಚ್ಚಾಗಲಿದೆ. ಈ ಕುರಿತು ಈಗ ಜಾಣ ನಡೆ ಇಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ಮೇನಲ್ಲಿ ಸೋಚಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭೇಟಿಯಾಗಿ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು. ಈ ವೇಳೆ ಎಸ್‌-400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದಕ್ಕೆ ಮೋದಿ ಒಂದು ರೂಪ ಪಡೆಯಿತು.

ಈ ಎಸ್-400 ಒಪ್ಪಂದ ರಷ್ಯಾ ಪಾಲಿಗೂ ಮಹತ್ವದ್ದಾಗಿದೆ. ಅಫ್ಘಾನಿಸ್ತಾನ, ಸಿರಿಯಾ, ಉಕ್ರೇನ್‌ನಿನ ವಿಚಾರದಲ್ಲಿ ಹಸ್ತಕ್ಷೇಪ ತೋರಿದ್ದಕ್ಕೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ರಾಷ್ಟ್ರಗಳು ರಷ್ಯಾ ಜತೆಗಿನ ವಾಣಿಜ್ಯ ವಹಿವಾಟಿಗೆ ಕಡಿವಾಣ ಹಾಕಿದವು. ಇದರಿಂದ ರಷ್ಯಾದ ಅರ್ಥ ವ್ಯವಸ್ಥೆ ಸೊರಗಿದೆ. ಇಂತಹ ಸಂದರ್ಭದಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಕ್ಷಿಪಣಿ ಒಪ್ಪಂದ ರಷ್ಯಾ ಆರ್ಥಿಕತೆಗೆ ಭರವಸೆಯ ಬೆಳಕಾಗಿದೆ. ಹೀಗಾಗಿ ರಷ್ಯಾ ಜತೆ ಈ ಒಪ್ಪಂದ ಮಾಡಿಕೊಂಡರೆ ಉಭಯ ರಾಷ್ಟ್ರಗಳ ನಡುವಣ ಸಂಬಂಧ ಮತ್ತೆ ಗಟ್ಟಿಯಾಗಲಿದೆ ಎಂಬ ಲೆಕ್ಕಾಚಾರವಿದೆ.

ಇತ್ತ ಭಾರತಕ್ಕೆ ಚೀನಾ ದಾಳಿಯ ಆತಂಕ ಇರುವುದರಿಂದ ಎಸ್-400 ನಂತಹ ಪರಿಣಾಮಕಾರಿ ಕ್ಷಿಪಣಿ ವ್ಯವಸ್ಥೆ ಅಗತ್ಯವಿದೆ. ಹೀಗಾಗಿ ಈ ಒಪ್ಪಂದ ಎರಡ ರಾಷ್ಟ್ರಗಳಿಗೂ ಲಾಭದಾಯಕವಾಗಿದೆ.

ಕೇವಲ ಎಸ್-400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆ ಮಾತ್ರವಲ್ಲದೇ, ಭಾರತೀಯ ನೌಕಾಪಡೆಗೆ 2.5 ಶತಕೋಟಿ ಡಾಲರ್‌ ವೆಚ್ಚದಲ್ಲಿ ಕ್ರಿವಾಕ್‌/ತಲ್ವಾರ್‌ ಶ್ರೇಣಿಯ ನಾಲ್ಕು ಲಘು ಯುದ್ಧ ನೌಕೆ, ಕೆಎ-226 ಟಿ ಹೆಲಿಕಾಪ್ಟರ್‌ ಖರೀದಿಗೆ ಭಾರತ ಮುಂದಾಗಿದೆ. ರಕ್ಷಣಾ ಕ್ಷೇತ್ರದ ಹೊರತಾಗಿ ಪರಮಾಣು, ಬಾಹ್ಯಾಕಾಶ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಹಲವು ಒಪ್ಪಂದ ಮಾಡಿಕೊಳ್ಲುವ ನಿರೀಕ್ಷೆ ಇದೆ.

Leave a Reply