ಗೌಡಯ್ಯ, ಸ್ವಾಮಿ ಮನೆಯಲ್ಲಿ ಸಿಕ್ಕ ಸಂಪತ್ತು ಎಷ್ಟು?

ಡಿಜಿಟಲ್ ಕನ್ನಡ ಟೀಮ್:

ಕೆಐಎಡಿಬಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಹಾಗೂ ಬಿಡಿಎ ಇಂಜಿನಿಯರಿಂಗ್ ಆಫೀಸರ್ ಎನ್.ಜಿ.ಗೌಡಯ್ಯ ಅವರ ಮನೆ ಮೇಲೆ ನಿನ್ನೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ, ಇಂದು ದಾಳಿ ವೇಳೆ ಸಿಕ್ಕ ಅಪಾರ ಸಂಪತ್ತಿನ ಪ್ರಮಾಣವನ್ನು ಬಹಿರಂಗ ಪಡಿಸಿದೆ.

ಎಸಿಬಿಯ ಐಜಿಪಿ ಚಂದ್ರಶೇಖರ್ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ದಾಳಿಯ ವಿವರಣೆ ನೀಡಿದ್ದು, ಈ ಇಬ್ಬರು ಭ್ರಷ್ಟ ಅಧಿಕಾರಿಗಳು ಕೊಳ್ಳೆ ಹೊಡೆದಿದ್ದ ಆಸ್ತಿಯ ಮಾಹಿತಿ ನೀಡಿದ್ದಾರೆ.

ಸ್ವಾಮಿ ಖಜಾನೆಯಲ್ಲಿ ಸಿಕ್ಕಿದೆಷ್ಟು?

ಟಿ.ಆರ್.ಸ್ವಾಮಿ ಅವರ ಕುಟುಂಬ ಮತ್ತು ಸಂಬಂಧಿಕರ ಹೆಸರಿನಲ್ಲಿರುವ 8 ಮನೆಗಳು, 11 ನಿವೇಶನಗಳು, ವಿವಿಧೆಡೆ 14 ಎಕರೆ ಕೃಷಿ ಭೂಮಿ, 1.6 ಕೆಜಿ ಚಿನ್ನ, 3 ಕಾರುಗಳು, 4 ಕೋಟಿ 52 ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ.

‘ಸ್ವಾಮಿ ಅವರ ಅಕ್ರಮ ಆಸ್ತಿ ಬಗ್ಗೆ ಸುಮಾರು 500 ಫೋನ್ ಕರೆಗಳು, 60 ರಿಂದ 70 ಇಮೇಲ್ ಮಾಹಿತಿಗಳು ಲಭ್ಯವಾಗಿವೆ. ದಾಳಿಯ ವೇಳೆ ಆರಂಭದಲ್ಲಿ ಅವರು 45 ನಿಮಿಷ ಬಾಗಿಲು ತೆಗೆಯದೆ ಅಡ್ಡಿಪಡಿಸಿದರು. ಆದರೂ ನಾವು ಒಳ ಹೋಗಿ ತಪಾಸಣೆ ಮಾಡಿದ್ದೇವೆ. ಬಾಗಿಲು ತೆಗೆಯದ ಸಮಯದಲ್ಲಿ ಅವರು ಸಾಕ್ಷಿಗಳನ್ನು ನಾಶಪಡಿಸಿರುವ ಅವಕಾಶಗಳಿರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಎಸಿಬಿ ಅಧಿಕಾರಿಗಳಿಗೆ ಕೆಲಸ ಮಾಡಲು ಅಡ್ಡಿ ಪಡಿಸಿದ ಬಗ್ಗೆ ಏಕಾಏಕಿ ಕ್ರಮ ಕೈಗೊಳ್ಳುವುದಿಲ್ಲ. ಮುಂದೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.

ಗೌಡಯ್ಯ ಗೂಡಲ್ಲಿ ಬಚ್ಚಿಟ್ಟಿದ್ದೆಷ್ಟು?

ಗೌಡಯ್ಯಅವರ ಮನೆ , ಕಚೇರಿ ಹಾಗೂ ಇತರೆ ಭಾಗಗಳಿಂದ ವಶಪಡಿಸಿಕೊಂಡಿರುವ ದಾಖಲೆಗಳ ಪ್ರಕಾರ ಗೌಡಯ್ಯ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆಗಳು, 8 ನಿವೇಶನಗಳು, 14 ಅಪಾರ್ಟ್‍ಮೆಂಟ್, 18 ಕೆ.ಜಿ 200 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ, 3 ಕಾರುಗಳು, 3 ದ್ವಿಚಕ್ರ ವಾಹನಗಳು, 77 ಲಕ್ಷ ನಗದು ಹಾಗೂ ವಿವಿಧ ಬ್ಯಾಂಕ್‍ಗಳಲ್ಲಿ 15 ಲಕ್ಷ ಮತ್ತು 30 ಲಕ್ಷ ಠೇವಣೆ ಪತ್ತೆಯಾಗಿದೆ.

Leave a Reply