ಮೋದಿಯ ಕಾಂಗ್ರೆಸ್ ಮುಕ್ತ ಭಾರತ ಕನಸು ಭಗ್ನಗೊಳಿಸಲಿದೆ ವಿಧಾನಸಭೆ ಚುನಾವಣೆಗಳು! ಇದು ಸಿ ಫೋರ್ ಸಮೀಕ್ಷೆ ಭವಿಷ್ಯ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿಗೆ ರಾಜಸ್ಥಾನ್, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ ರಾಜ್ಯಗಳ ವಿಧಾನ ಸಭಾ ಚುನಾವಣೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿದ್ದು, ಚುನಾವಣೋತ್ತರ ಸಮೀಕ್ಷೆಗಳು ಈ ಮೂರು ರಾಜ್ಯಗಳಲ್ಲಿ ಕಮಲ ಬಾಡಿ ಕಾಂಗ್ರೆಸ್ ಪ್ರಾಬಲ್ಯ ಮೆರೆಯಲಿದೆ ಎಂದು ಭವಿಷ್ಯ ನುಡಿಯುತ್ತಿವೆ.

ಸಿ ಫೋರ್ ಹಾಗೂ ಎಬಿಪಿ ಸಂಸ್ಥೆ ನಡೆಸಿರುವ ಈ ಸಮೀಕ್ಷೆಯಲ್ಲಿ, ಕಾಂಗ್ರೆಸ್ ಮೂರು ರಾಜ್ಯಗಳಲ್ಲೂ ಭರ್ಜರಿ ಫಲಿತಾಂಶ ಪಡಿಯಲಿದೆ ಎಂದು ಹೇಳಲಾಗಿದೆ.

ಮುಂದಿನ ತಿಂಗಳು ನಡೆಯಲಿರುವ ರಾಜಸ್ಥಾನ್, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ ರಾಜ್ಯಗಳ ವಿಧಾನ ಸಭಾ ಚುನಾವಣೆ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿ ಬಿಂಬಿತವಾಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಲ್ಲೂ ಚುನಾವಣೆ ಇದ್ದರೂ ಈ ಮೂರು ರಾಜ್ಯಗಳಷ್ಟು ಗಮನ ಸೆಳೆದಿಲ್ಲ. ಕಾರಣ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದ್ದು ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಈ ಸಮೀಕ್ಷೆಯಲ್ಲಿ ಮತದಾರನ ಒಲವು ಯಾರ ಕಡೆ ವಾಲಿದೆ ಎಂಬುದನ್ನು ನೋಡೋಣ ಬನ್ನಿ…

ಕೈ ತೆಕ್ಕೆಗೆ ರಾಜಸ್ಥಾನ!
ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಹೆಚ್ಚಾಗಿದ್ದು, ಮತದಾರರು ವಸುಂದರಾ ರಾಜೆ ಅವರನ್ನು ಕೆಳಗಿಳಿಸಿ ಸಚಿನ್ ಪೈಲಟ್ ಅವರ ನೇತೃತ್ವದ ಕಾಂಗ್ರೆಸ್ ಅನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಸಾಧ್ಯತೆ ಇದೆ. 2013ರ ಚುನಾವಣೆಯಲ್ಲಿ 21 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ 142 ಸ್ಥಾನಕ್ಕೆ ಜಿಗಿಯಲಿದೆ. ಇನ್ನು ಬಿಜೆಪಿ 163ರಿಂದ 56 ಸ್ಥಾನಗಳಿಗೆ ಕುಸಿಯುತ್ತದೆ ಎಂದು ಹೇಳಲಾಗಿದೆ. ಅದರೊಂದಿಗೆ ಈ ಬಾರಿ ರಾಜಸ್ಥಾನದಲ್ಲಿ ಕೈಗೆ ಅಧಿಕಾರ ಸಿಗಲಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ!
ಇನ್ನು ಮಧ್ಯ ಪ್ರದೇಶದಲ್ಲಿ ಈ ಬಾರಿ ಹೆಚ್ಚಿನ ಸ್ಥಾನ ಕಾಂಗ್ರೆಸ್ ಪಾಲಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಈ ಬಾರಿ 122 ಕ್ಷೇತ್ರಗಳಲ್ಲಿ ಗೆದ್ದರೆ ಬಿಜೆಪಿ 108 ಸ್ಥಾನಗಳಿಗೆ ಕುಸಿಯಲಿದೆ. ಅಧಿಕಾರ ಪಡೆಯಲು 130 ಮ್ಯಾಜಿಕ್ ನಂಬರ್ ಆಗಿದ್ದು ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ.

ಛತ್ತೀಸ್‌ಗಡದಲ್ಲೂ ಕಾಂಗ್ರೆಸ್ ಅಧಿಕಾರದ ಮಂತ್ರ!
ಸತತ ಮೂರು ಬಾರಿ ಛತ್ತೀಸ್‌ಗಡದಲ್ಲಿ ಅಧಿಕಾರ ನಡೆಸಿರುವ ಬಿಜೆಪಿಗೆ ಈ ಆಘಾತ ಎದುರಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ. 90 ವಿಧಾನಸಭೆಯಲ್ಲಿ ಕಾಂಗ್ರೆಸ್ ಈ ಬಾರಿ 47 ಸ್ಥಾನ ಪಡೆಯಲಿದ್ದು, ಸರಳ ಬಹುಮತ ಪಡೆಯಲಿದೆ ಎಂದು ಹೇಳಲಾಗಿದೆ.

ಇದರೊಂದಿಗೆ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿರುವ ಬಿಜೆಪಿಗೆ ಈ ರಾಜ್ಯಗಳಲ್ಲಿನ ಆಡಳಿತ ವಿರೋಧಿ ಅಲೆ ತಣ್ಣೀರೆರೆಚುವ ಸಾಧ್ಯತೆ ಹೆಚ್ಚಾಗಿದ್ದು, ಮೋದಿ ಮೋಡಿ ಏನಾಗುತ್ತದೆ ಎಂಬ ಕುತೂಹಲ ಮೂಡಿಸಿದೆ.

Leave a Reply