ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಡೌಟ್! ಹಾಗಾದ್ರೆ ಜೆಡಿಎಸ್ ಅಭ್ಯರ್ಥಿ ಯಾರು?

ಡಿಜಿಟಲ್ ಕನ್ನಡ ಟೀಮ್:

ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಾರೆ ಎಂದು ಸಾಕಷ್ಟು ಚರ್ಚೆಯಾಗಿತ್ತು. ಆದರೆ ಕುಟುಂಬ ರಾಜಕಾರಣದ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಈಗ ಅನಿತಾ ಅವರಿಗೆ ಟಿಕೆಟ್ ನೀಡದಿರುವ ಬಗ್ಗೆ ಪಕ್ಷದ ಹಿರಿಯರು ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ಅನಿತಾ ಅವರ ಬದಲಿಗೆ ಯಾರು ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ಸದ್ಯ ಪಕ್ಷದಲ್ಲಿ ಇಬ್ಬರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು, ಅದು ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಅಥವಾ ಹಿರಿಯ ಮುಖಂಡ ಪಿಜಿಆರ್ ಸಿಂಧ್ಯಾ!

ನ.3ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹೀಗಾಗಿ ಪಕ್ಷದಲ್ಲಿ ಭಿನ್ನಮತಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದ್ದು, ಪಕ್ಷದ ಪ್ರಮುಖರಾದ ಮಧು ಬಂಗಾರಪ್ಪ ಪಿಜಿಆರ್ ಸಿಂಧ್ಯಾ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಮುಂದಾಗಿದೆ. ಇದರಿಂದ ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿಯಿಂದ ಹೊರಬರುವುದು ಜೆಡಿಎಸ್‌ನ ವರಿಷ್ಠರ ಲೆಕ್ಕಾಚಾರ.

ಈಗಾಗಲೇ ರಾಮನಗರದಿಂದ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಸಿಎಂ ಎಚ್‌ಡಿಕೆ ಪ್ರಕಟಿಸಿದ್ದರು. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಮನಗರ ಅಭ್ಯರ್ಥಿಯನ್ನು ಅಂತಿಮ ಮಾಡಿಲ್ಲ ಎಂದು ಹೇಳಿರುವುದು ಅನಿತಾ ಅವರ ಬದಲಿಗೆ ಬೇರೆ ನಾಯಕರಿಗೆ ಅವಕಾಶ ನೀಡುವುದರ ಸೂಚನೆ ನೀಡಿದ್ದಾರೆ.

Leave a Reply